Saturday, July 2, 2022

Latest Posts

ವಾರ್ಡ್ ಸಂಚಾರ-ಭ್ರಷ್ಟಾಚಾರ ಮುಕ್ತ ಆಡಳಿತ: ಮಂಗಳಮುಖಿ ದೀಕ್ಷಾ ಭರವಸೆ

ಹೊಸ ದಿಗಂತ ವರದಿ, ಮಡಿಕೇರಿ:

ತಾವು ನಗರಸಭಾ ಸದಸ್ಯರಾಗಿ ಗೆಲುವು ಸಾಧಿಸಿದರೆ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಆದ್ಯತೆ ನೀಡುವುದಲ್ಲದೆ ಪ್ರತಿವಾರ ವಾರ್ಡ್ ಸಂಚಾರ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಮಡಿಕೇರಿ ನಗರಸಭೆಯ 21ನೇ ವಾರ್ಡ್‍ನ ಪಕ್ಷೇತರ ಅಭ್ಯರ್ಥಿ ಮಂಗಳಮುಖಿ ದೀಕ್ಷಾ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳಮುಖಿ ಎನ್ನುವ ಕಾರಣಕ್ಕಾಗಿ ನಾವು ಸಮಾಜದಲ್ಲಿ ಎಲ್ಲಾ ರೀತಿಯಿಂದಲೂ ನಿರ್ಲಕ್ಷಿಸಲ್ಪಟ್ಟಿದ್ದೇವೆ. ಆದರೆ 21ನೇ ವಾರ್ಡ್‍ನ ಜನ ನನ್ನನ್ನು ಈಗಾಗಲೇ ಪ್ರೀತಿಯಿಂದ ಬರ ಮಾಡಿಕೊಂಡು ಗೆಲ್ಲಿಸುವ ಭರವಸೆ ನೀಡುತ್ತಿದ್ದಾರೆ ಎಂದರು.
ಸಮಾಜದ ಅವಗಣನೆಗೆ ಒಳಗಾಗಿರುವ ಮಂಗಳಮುಖಿ ಸಮೂಹ ಸಮಾಜಮುಖಿ ಚಿಂತನೆಗಳೊಂದಿಗೆ ಸಮಾಜದ ಮುಖ್ಯ ವಾಹಿನಿಗೆ ಸೇರ್ಪಡೆಗೊಳ್ಳಬೇಕೆನ್ನುವ ನಿರೀಕ್ಷೆಯೊಂದಿಗೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ವಾರ್ಡ್‍ನ ಜನತೆಯ ಬೆಂಬಲವೂ ತನಗಿದೆ. ವಾರ್ಡ್‍ನಲ್ಲಿ ಪ್ರಚಾರ ನಡೆಸುತ್ತಿದ್ದೇನೆ. ನಾನು ಗೆದ್ದರೆ ಅಭಿವೃದ್ಧಿ ಕಾರ್ಯಗಳ ಮೂಲಕ 21ನೇ ವಾರ್ಡ್‍ನ್ನು ಮಾದರಿ ವಾರ್ಡ್‍ನ್ನಾಗಿ ಪರಿವರ್ತಿಸುತ್ತೇನೆ ಎಂದು ಭರವಸೆ ನೀಡಿದರು.

ಬದುಕನ್ನು ಬದಲಾಯಿಸಲು ಬಂದಿದ್ದೇನೆ
ನಾನು ಬದುಕಲು ರಾಜಕೀಯಕ್ಕೆ ಬಂದಿಲ್ಲ, ಬದುಕನ್ನು ಬದಲಾಯಿಸಲು ಬಂದಿದ್ದೇನೆ. ಹಿರಿಯರ ಮಾತಿನಂತೆ ರಾಜಕೀಯ ಕ್ಷೇತ್ರ ಸಾಮಾಜಿಕ ಜವಾಬ್ದಾರಿಯೇ ಹೊರತು ಉದ್ಯೋಗವಲ್ಲ. ಇದನ್ನು ಅರಿತುಕೊಂಡು ಜನಪರವಾಗಿ ದುಡಿಯಲು ನಾನು ಸಿದ್ಧನಿದ್ದೇನೆ ಎಂದರು.

ದಿನದ 18 ಗಂಟೆ ಜನರ ಸೇವೆಗೆ ಮೀಸಲು
ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಸಿಗುವಂತೆ ಯೋಜನೆ ರೂಪಿಸಲಾಗುವುದು, ಇಂದಿರಾನಗರ ಮತ್ತು ಚಾಮುಂಡೇಶ್ವರಿ ನಗರ ಎತ್ತರದ ಪ್ರದೇಶವಾಗಿರುವುದರಿಂದ ಮಳೆಗಾಲದಲ್ಲಿ ಸಂಭವಿಸುವ ಅನಾಹುತಗಳಿಂದ ನಿವಾಸಿಗಳನ್ನು ರಕ್ಷಿಸಲು ಮೊದಲ ಆದ್ಯತೆ ನೀಡಲಾಗುವುದು, ಅಪಾಯಕಾರಿ ಪ್ರದೇಶದಲ್ಲಿ ವಾಸವಿರುವ ನಿವಾಸಿಗಳು ಸ್ವಯಂ ಇ-ಚ್ಛೆಯಿಂದ ಬೇರೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ಒಪ್ಪಿಕೊಂಡಲ್ಲಿ ಅಂತಹವರಿಗೆ ಸರ್ಕಾರದ ಮೂಲಕ ಪರ್ಯಾಯ ನಿವೇಶನ ಮತ್ತು ವಸತಿ ಕಲ್ಪಿಸುವ ನಿಟ್ಟಿನಲ್ಲಿ ಹೋರಾಟ ನಡೆಸಲಾಗುವುದು, ನಿವಾಸಿಗಳ ಯಾವುದೇ ಕಡತ ಅಥವಾ ಅರ್ಜಿಗಳು ನಗರಸಭಾ ಕಚೇರಿಯಲ್ಲಿ ವಿಳಂಬ ರಹಿತವಾಗಿ ವಿಲೇವಾರಿಯಾಗುವಂತೆ ನೋಡಿಕೊಳ್ಳಲಾಗುವುದು, ವಾರದ ಪ್ರತಿ ಭಾನುವಾರ ವಾರ್ಡ್ ಸಂಚಾರ ಮಾಡಿ ನಿವಾಸಿಗಳ ಸಮಸ್ಯೆಗಳನ್ನು ಅರಿತುಕೊಂಡು ಬಗೆಹರಿಸಲು ಶತ ಪ್ರಯತ್ನ ಮಾಡಲಾಗುವುದು, ಕಸ ವಿಲೇವಾರಿಗೆ ವೈಜ್ಞಾನಿಕ ರೂಪ ನೀಡುವ ಬಗ್ಗೆ ತಜ್ಞರು ಹಾಗೂ ನಿವಾಸಿಗಳ ಅಭಿಪ್ರಾಯ ಪಡೆದು ಯೋಜನೆ ರೂಪಿಸಲಾಗುವುದು, 21 ನೇ ವಾರ್ಡ್‍ನಲ್ಲಿ ಬಡವರು ಹಾಗೂ ಕಾರ್ಮಿಕರ ಸಂಖ್ಯೆ ಹೆಚ್ಚು ಇದ್ದು, ಇವರುಗಳಿಗೆ ಸ್ವಂತ ಸೂರು ಕಲ್ಪಿಸಿಕೊಡಲು ಶ್ರಮ ವಹಿಸಲಾಗುವುದು, ಸರ್ಕಾರದ ಸೌಲಭ್ಯಗಳ ಬಗ್ಗೆ ನಿವಾಸಿಗಳಲ್ಲಿ ಜಾಗೃತಿ ಮೂಡಿಸಿ ಅದನ್ನು ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು, ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನ ಭತ್ಯೆ, ಆಧಾರ್ ಕಾರ್ಡ್, ಪಡಿತರ ಚೀಟಿ, ವಿದ್ಯಾರ್ಥಿ ವೇತನ, ಜನನ, ಮರಣ ಪ್ರಮಾಣ ಪತ್ರ, ಭೂದಾಖಲೆಗಳ ಅರ್ಜಿಗಳ ವಿಲೇವಾರಿ ಸೇರಿದಂತೆ ನನ್ನ ವಾರ್ಡ್‍ನ ನಿವಾಸಿಗಳ ಎಲ್ಲಾ ಅರ್ಜಿಗಳ ವಿಲೇವಾರಿಯನ್ನು ಭ್ರಷ್ಟಾಚಾರ ಮುಕ್ತವಾಗಿ ಮಾಡಿಕೊಡುವ ಪ್ರಯತ್ನ ಮಾಡಲಾಗುವುದು, ಅಂಗನವಾಡಿ ಮತ್ತು ಸಮುದಾಯ ಭವನದ ನಿರ್ವಹಣೆಯನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು, ರಸ್ತೆ, ಚರಂಡಿ ಹಾಗೂ ಬೀದಿ ದೀಪಗಳಿಗೆ ಮೊದಲ ಆದ್ಯತೆ ನೀಡಲಾಗುವುದು, ಪ್ರತಿ ಮೂರು ತಿಂಗಳಿಗೊಮ್ಮೆ ವಾರ್ಡ್‍ನಲ್ಲಿ ಉಚಿತ ಆರೋಗ್ಯ ಶಿಬಿರ ನಡೆಸಿ, ಬಡವರಿಗೆ ಉಚಿತ ಔಷಧಿ ದೊರೆಯುವಂತೆ ನೋಡಿಕೊಳ್ಳಲಾಗುವುದು, ವಾರ್ಡ್‍ನ ಎಲ್ಲಾ ಮಹಿಳಾ ಸಂಘಗಳ ಬಲವರ್ಧನೆಗೆ ಅಗತ್ಯವಿರುವ ನೆರವನ್ನು ನೀಡಿ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಲಾಗುವುದು, ಸ್ವಯಂ ಉದ್ಯೋಗಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದು, ಇದರ ಬಗ್ಗೆ ವಾರ್ಡ್‍ನ ಯುವ ಜನತೆಗೆ ಮನವರಿಕೆ ಮಾಡಿಕೊಟ್ಟು ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬಿಗಳಾಗುವಂತೆ ನೋಡಿಕೊಳ್ಳಲಾಗುವುದು, ವಾರ್ಡ್‍ನಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು, ದಿನದ 18 ಗಂಟೆಗಳನ್ನು ವಾರ್ಡ್‍ನ ಜನರ ಸೇವೆಗಾಗಿ ಮೀಸಲಿಡಲಿದ್ದು, ಯಾವುದೇ ಸಮಯದಲ್ಲಿ ಕರೆ ಮಾಡಿದರೂ ತಕ್ಷಣ ಬಂದು ಸಮಸ್ಯೆಗೆ ಸ್ಪಂದಿಸುವುದಾಗಿ ಅವರು ನುಡಿದರು.
ಒಟ್ಟಿನಲ್ಲಿ 21ನೇ ವಾರ್ಡ್‍ಗೆ ಬಿಡುಗೆಯಾಗುವ ಎಲ್ಲಾ ಅನುದಾನವನ್ನು ಸಂಬಂಧಿಸಿದ ಯೋಜನೆಗಳಿಗೆ ವಿನಿಯೋಗಿಸಿ ಮಾದರಿ ವಾರ್ಡ್‍ನ್ನಾಗಿ ಪರಿವರ್ತಿಸುವ ಗುರಿ ಹೊಂದಿದ್ದೇನೆ. ಆದ್ದರಿಂದ ಮತದಾರರು ನಗರಸಭಾ ಸದಸ್ಯಳನ್ನಾಗಿ ನನ್ನನ್ನು ಆಯ್ಕೆ ಮಾಡುವ ಮೂಲಕ ಜನಸೇವೆಗೆ ಅವಕಾಶವನ್ನು ಕಲ್ಪಿಸಿಕೊಡಬೇಕೆಂದು ದೀಕ್ಷಾ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬೆಂಬಲಿತರಾದ ಎನ್.ಎ.ಸತೀಶ್ ಪೈ ಹಾಗೂ ಸತ್ಯ ಕರ್ಕೆರ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss