Tuesday, August 16, 2022

Latest Posts

ಹೋಮ್‌ ಐಸೋಲೇಷನ್ ಬಗ್ಗೆ ಎಚ್ಚರಿಕೆ ವಹಿಸಿ, ಹಳ್ಳಿಗಳಲ್ಲಿ ಕೊರೋನಾ ಹೆಚ್ಚಾಗಲು ಬಿಡಬೇಡಿ: ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………….

ಹೊಸದಿಗಂತ ಆನ್ ಲೈನ್ ಡೆಸ್ಕ್:

ಹೋಮ್‌ ಐಸೋಲೇಷನ್ ಬಗ್ಗೆ ಎಚ್ಚರಿಕೆ ವಹಿಸಿ, ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಕೇರ್ ಸೆಂಟರ್​ಗೆ ಆದ್ಯತೆ ನೀಡಿ ಎಂದು ಸಿಎಂ ನೇತೃತ್ವದಲ್ಲಿ ನಡೆದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಉನ್ನತ ಮಟ್ಟದ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮೆಡಿಕಲ್ ಕಿಟ್ ಕೊರತೆಯಾದರೆ ಸ್ಥಳೀಯವಾಗಿ ಖರೀದಿ ಮಾಡಿ. ಆಕ್ಸಿಜನ್ ಪೂರೈಕೆಗೆ ಪಕ್ಕದ ಜಿಲ್ಲೆಗಳ ಜತೆ ಸಮನ್ವಯತೆ ಕಾಪಾಡಿಕೊಳ್ಳಿ. ಹಳ್ಳಿಗಳಲ್ಲಿ ಕೊರೋನಾ ಹೆಚ್ಚಾಗಲು ಬಿಡಬೇಡಿ, ಸಕಲ ಕ್ರಮ ಕೈಗೊಂಡು ಸೋಂಕು ನಿಯಂತ್ರಿಸಿ ಎಂದು ಸಭೆಯಲ್ಲಿ ನಿರ್ದೇಶನ ನೀಡಿದರು.
ಎಲ್ಲಾ ವಿಭಾಗ ಮಟ್ಟದಲ್ಲಿ ಬ್ಲಾಕ್ ಫಂಗಸ್ ಸೋಂಕಿಗೆ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ಚಿಕ್ಕಮಗಳೂರಿಗೆ ಆದ್ಯತೆ ಮೇರೆಗೆ ಆಕ್ಸಿಜನ್ ಜನರೇಟರ್ ಒದಗಿಸಲಾಗುವುದು.
ಜಿಲ್ಲಾ ಉಸ್ತುವಾರಿ ಸಚಿವರು ವಾರಕ್ಕೆ ಎರಡು ಬಾರಿ ಉಸ್ತುವಾರಿ ಸಚಿವರ ಜೊತೆ ಚರ್ಚಿಸಬೇಕು ಎಂದರು.
ಇನ್ನೂ ಗ್ರಾಮೀಣ ಭಾಗದಲ್ಲಿ ಹೋಮ್‌ ಐಸೋಲೇಶನ್‌ ನೀಡಲು ಶಾಲಾ-ಕಾಲೇಜು ವಸತಿ ಶಾಲೆಗಳನ್ನು ಬಳಕೆ ಮಾಡುವಂತೆ ಆದೇಶ, ಇನ್ನೂ ಇದೇ ವೇಳೆ ಅಗತ್ಯಕ್ಕೆ ತಕ್ಕಂತೆ ಕೋವಿಡ್‌ ಕೇರ್‌ ಸ್ಥಾಪನೆಗಳನ್ನು ಮಾಡಲು ಸ್ಥಳೀಯ ಮಟ್ಟದಲ್ಲಿ ಅವಕಾಶ ಮಾಡಲು ಕೂಡ ಸೂಚನೆ ನೀಡಿದ್ದಾರೆ.
ಬೆಳಗಾವಿ, ಬಳ್ಳಾರಿ, ಉತ್ತರ ಕನ್ನಡ, ಧಾರವಾಡ, ಹಾವೇರಿ, ದಾವಣಗೆರೆ, ಮೈಸೂರು, ತುಮಕೂರು, ರಾಯಚೂರು ಮತ್ತು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಜತೆ ಸಿಎಂ ಯಡಿಯೂರಪ್ಪ ಚರ್ಚೆ ನಡೆಸಿದರು.
ಲಾಕ್​ಡೌನ್ ಕುರಿತು ಸಭೆಯ ಆರಂಭದಲ್ಲಿ ಸಲಹೆ ಕೇಳಿದ್ದ ಸಿಎಂ ಯಡಿಯೂರಪ್ಪ ನಂತರ ಲಾಕ್​ಡೌನ್ ಕುರಿತು ಯಾವುದೇ ತೀರ್ಮಾನವನ್ನೂ ಕೈಗೊಳ್ಳದೇ ಸಭೆಯನ್ನು ಮೊಟಕುಗೊಳಿಸಿದರು.
ಜಿಲ್ಲೆಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಇರುವ ಸಮಯಾವಕಾಶವನ್ನು ಮತ್ತಷ್ಟು ಕಡಿತಗೊಳಿಸುವ ವಿಚಾರವನ್ನು ನಿಮ್ಮ ನಿರ್ಧಾರದಂತೆ ತೆಗೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳ ಬಳಿ ಮಾತನಾಡುವ ವೇಳೆ ಸಿಎಂ ಯಡಿಯೂರಪ್ಪ ಪ್ರಸ್ತಾಪಿಸಿದರು.
ಮಾಧ್ಯಮಗಳು ಲಾಕ್‌ಡೌನ್‌ಗೆ ವಿಸ್ತರಣೆಗೆ ಸಂಬಂಧಪಟ್ಟಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ , ಲಾಕ್ ಡೌನ್ ಬಗ್ಗೆ ಎರಡು ಮೂರು ದಿನಗಳ ನಂತರ ಎಷ್ಟು ದಿನ ಮುಂದುವರಿಸಬೇಕು ಎಂಬ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಸಭೆಯ ನಂತರಪ್ರತಿಕ್ರಿಯೆ ನೀಡಿದರು.
ರಾಜ್ಯದಲ್ಲಿ ಇಷ್ಟೊಂದು ಕೊರೋನಾ ಕೇಸ್ ಬರ್ತಿದೆ, ಜನರನ್ನು ಉಳಿಸಲು ಏನ್ಮಾಡ್ತಿದ್ದೀರಾ? ದಿನೇದಿನೇ ಕೇಸ್‌ಗಳು ಹೆಚ್ಚುತ್ತಲೇ ಇವೆ. ನಾಳೆ ಪ್ರಧಾನಿ ಜೊತೆ ವಿಡಿಯೋ ಕಾನ್ಫರೆನ್ಸ್‌ ಇದೆ. ಹೀಗಾದ್ರೆ ನಾಳೆ ಪ್ರಧಾನಿಗೆ ನೀವು ಏನು ಉತ್ತರ ನೀಡ್ತೀರಿ?ಎಂದು ಸಿಎಂ ಯಡಿಯೂರಪ್ಪ ಜಿಲ್ಲಾಧಿಕಾರಿಗಳ ಜತೆಗಿನ ವಿಡಿಯೋ ಕಾನ್ಫರೆನ್ಸ್​ನಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
ಲಾಕ್​ಡೌನ್​ನಿಂದ ಏನಾದರೂ ಅನುಕೂಲವಾಗಿದೆಯಾ? ಎಂದು ಸಹ ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದ್ದು, ಜನರು ಕೊರೋನಾನಿಯಮ ಪಾಲಿಸುತ್ತಿದ್ದಾರಾ? ಅಗತ್ಯ ವಸ್ತುಗಳ ಖರೀದಿಗೆ ಸಮಯ ನೀಡಿದ್ದರಿಂದ ಕೊರೋನಾ ತಡೆಯಲು ಸಮಸ್ಯೆ ಉಂಟಾಗಿದೆಯಾ? ಎಂದು ಜಿಲ್ಲಾಧಿಕಾರಿಗಳಿಗೆ ಪ್ರಶ್ನೆ ಹಾಕಿದ್ದಾರೆ.
ಇದೆ ವೇಳೆ ಸರ್ಕಾರದ ನಿರೀಕ್ಷಿತ ಮಟ್ಟಕ್ಕೆ ಕೆಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಕೆಲ ಜಿಲ್ಲೆಗಳಲ್ಲಿ ಅಧಿಕಾರಿಗಳ ಕಾರ್ಯವೈಖರಿ ತೃಪ್ತಿಕರವಾಗಿಲ್ಲ ಎಂದು ಸಹ ಸಿಎಂ ಯಡಿಯೂರಪ್ಪ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಡಿಸಿಎಂ ಡಾ.ಅಶ್ವತ್ಥ್ ನಾರಾಯಣ, ಸಚಿವ ಅರವಿಂದ ಲಿಂಬಾವಳಿ, ಆರೋಗ್ಯ ಸಚಿವ ಡಾ.ಸುಧಾಕರ್, ಸಚಿವ ಕೆ.ಗೋಪಾಲಯ್ಯ, ಸಿಎಸ್ ಪಿ. ರವಿಕುಮಾರ್, ಡಿಜಿ ಐಜಿಪಿ ಪ್ರವೀಣ್ ಸೂದ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ರಾಜ್ಯ ಸರ್ಕಾರದ ಎಸಿಎಸ್ ವಂದನಾ ಶರ್ಮಾ, ಆರೋಗ್ಯ ಇಲಾಖೆ ಎಸಿಎಸ್ ಜಾವೇದ್ ಅಖ್ತರ್ ಸಭೆಯಲ್ಲಿ ಭಾಗಿಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss