Sunday, March 7, 2021

Latest Posts

ಅಂತರ್ ರಾಜ್ಯ ಸಂಚಾರ ಬಗ್ಗೆ ನಿಗಾ ವಹಿಸಿ: ಅಧಿಕಾರಿಗಳಿಗೆ ಸಚಿವ ಎಸ್.ಟಿ.ಸೋಮಶೇಖರ್ ಸೂಚನೆ

ಹೊಸದಿಗಂತ ವರದಿ, ಮೈಸೂರು:

ಕೋವಿಡ್ ಎರಡನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ಕೇರಳ ಗಡಿ ಮಧ್ಯೆ ವಾಹನಗಳ ಸಂಚಾರ ಬಗ್ಗೆ ತೀವ್ರ ನಿಗಾ ವಹಿಸಬೇಕು. ಸಾರ್ವಜನಿಕರು ಸೇರಿದಂತೆ ವ್ಯಾಪಾರ ವಹಿವಾಟಿಗೂ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರ ನಗರದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆ ಆರಂಭವಾಗುವ ಲಕ್ಷಣ ಕಾಣುತ್ತಿರುವ ಹಿನ್ನೆಲೆಯಲ್ಲಿ ಕೇರಳ ಗಡಿ ಭಾಗದಿಂದ ವಾಹನಗಳ ಸಂಚಾರ ಹಾಗೂ ತಪಾಸಣೆ ಕ್ರಮ ಹೇಗಿರಬೇಕು ಎಂಬ ಬಗ್ಗೆ ಉನ್ನತಮಟ್ಟದ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಎಪಿಎಂಸಿ ಸೇರಿದಂತೆ ರಾಜ್ಯದೊಳಗೆ ಹಾಗೂ ಹೊರಗೆ ಮೈಸೂರಿನ ಮುಖಾಂತರ ತರಕಾರಿ ಹಾಗೂ ಆಹಾರ ಧಾನ್ಯಗಳ ವಾಹನಗಳ ಸಂಚಾರ ಆಗಲೇಬೇಕು. ಸಂಚಾರವನ್ನು ನಿರ್ಬಂಧ ಮಾಡಿದರೆ ವಹಿವಾಟು ಸೇರಿದಂತೆ ಎಲ್ಲವಕ್ಕೂ ತೊಂದರೆಯಾಗಲಿದೆ. ಹೀಗಾಗಿ ಆಂಟಿಜನ್ ಟೆಸ್ಟ್, ಟೆಂಪ್ರೇಚರ್ ಟೆಸ್ಟ್ ಗಳು ನಡೆಯಲಿ. ಅದಕ್ಕೆ ಬೇಕಿರುವ ಅಗತ್ಯ ಕ್ರಮಗಳನ್ನು ಕೂಡಲೇ ಕೈಗೊಳ್ಳಿ ಎಂದು ಸೂಚಿಸಿದರು.
ಗಡಿ ಭಾಗದಲ್ಲಿ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಜಿಲ್ಲಾ ಆರೋಗ್ಯಾಧಿಕಾರi ಡಾ. ಅಮರ್ ನಾಥ್ ಅವರಿಗೆ ಸಚಿವರು ಸೂಚನೆ ನೀಡಿದರು. ಬರುವ ಎಲ್ಲ ಬಸ್ ಗಳ ಪ್ರಯಾಣಿಕರ ತಪಾಸಣೆ ಕೂಡಾ ಆಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ವಲಯ ಐಜಿ ಪವಾರ್ ಪ್ರವೀಣ್ ಮಧುಕರ್, ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಿಷ್ಯಂತ್ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss