ಕಂಟ್ರೋಲ್ ರೂಂನಿಂದ ವೈರ್‌ಲೆಸ್ ತಂತ್ರಜ್ಞಾನದ ಮೂಲಕ ಕಾಲುವೆಗಳಿಗೆ ನೀರು: ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್

ಹೊಸದಿಗಂತ ವರದಿ, ಯಾದಗಿರಿ:

ಅಚ್ಚುಕಟ್ಟು ಪ್ರದೇಶದ ಎಲ್ಲಾ ರೈತರ ಜಮೀನುಗಳಿಗೆ ಸಮಾನ ಪ್ರಮಾಣದಲ್ಲಿ ನೀರು ಹರಿಸುವ ಮೇಲ್ವಿಚಾರಣಾ ನಿಯಂತ್ರಣ ಮತ್ತು ಡೇಟಾ ಸ್ವಾಧೀನ (SCADA) ರಿಮೋಟ್ ತಂತ್ರಜ್ಞಾನದ ಮುಖಾಂತರ ಕೃಷ್ಣಭಾಗ್ಯ ಜಲ ನಿಗಮ (ಕೆಬಿಜೆಎನ್‌ಎಲ್)ದ ಕಾಲುವೆಗಳ ಗೇಟ್ ನಿಯಂತ್ರಿಸಲಾಗುತ್ತಿದ್ದು, ಈ ತಂತ್ರಜ್ಞಾನ ಸಫಲವಾದರೆ, ದೇಶದ ಇತರೆ ಭಾಗಗಳಲ್ಲೂ ಅಳವಡಿಸುವುದಾಗಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರು ಪ್ರಕಟಿಸಿದರು.
ಹುಣಸಗಿ ತಾಲ್ಲೂಕಿನಲ್ಲಿರುವ ನಾರಾಯಣಪುರ ಡ್ಯಾಂ (ಬಸವ ಸಾಗರ) ಹಾಗೂ ಸನಿಹದ ಕೃಷ್ಣಭಾಗ್ಯ ಜಲ ನಿಗಮದ ಕಚೇರಿಯ ಕಂಟ್ರೋಲ್ ರೂಂನಲ್ಲಿ ಅಳವಡಿಸಿರುವ ಮೇಲ್ವಿಚಾರಣಾ ನಿಯಂತ್ರಣ ಮತ್ತು ಡೇಟಾ ಸ್ವಾಧೀನ (SCADA) ತಂತ್ರಜ್ಞಾನ ವೀಕ್ಷಿಸಿ ಅವರು ಮಾತನಾಡುತ್ತಿದ್ದರು.
1/4 ರೈತರು ಅಂದರೆ ಸುಮಾರು ಒಂದು ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಸರಿಯಾಗಿ ನೀರು ಹರಿಸುತ್ತಿಲ್ಲ ಎಂಬ ಆರೋಪ ರೈತರಿಂದ ಕೇಳಿ ಬಂದಿದೆ. ಈ ಹೊಸ ತಂತ್ರಜ್ಞಾನದ ಮೂಲಕ ಕೆಬಿಜೆಎನ್‌ಎಲ್ ಕಾಲುವೆಯ 365 ಗೇಟ್‌ಗಳನ್ನು ಕಂಟ್ರೋಲ್ ರೂಮ್ ಮುಖಾಂತರವೇ ನಿಯಂತ್ರಿಸುತ್ತಿದ್ದು, ನೀರು ಸಮ ಪ್ರಮಾಣದಲ್ಲಿ ಜಮೀನುಗಳಿಗೆ ಹರಿಸಬಹುದಾಗಿದೆ ಎಂದರು.
ಮಧ್ಯಪ್ರದೇಶ, ಆಂಧ್ರ ಪ್ರದೇಶಗಳು ಸಹ ಈಗಾಗಲೇ ಈ ತಂತ್ರಜ್ಞಾನ ಅಳವಡಿಕೆಯಲ್ಲಿ ಕಾರ್ಯಪ್ರವೃತ್ತವಾಗಿವೆ. ಇದರ ಸಾಧಕ-ಬಾಧಕ ನೋಡಿಕೊಂಡು ಇತರೆ ಭಾಗಗಳಲ್ಲೂ ಅಳವಡಿಸಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ್, ಸುರಪುರ ಶಾಸಕ ರಾಜೂಗೌಡ, ಲಿಂಗಸೂರು ಶಾಸಕ ಡಿ.ಎಸ್.ಹುಲಗೇರಿ, ಬೀಮರಾಯನಗುಡಿ ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಮುಖ್ಯ ಇಂಜಿನಿಯರ್ ಅಶೋಕ್ ಎಲ್.ವಾಸನದ್, ಕಾರ್ಯಪಾಲಕ ಅಭಿಯಂತರ ಶಂಕರ್ ನಾಯ್ಕೋಡಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್.ಎಲ್. ಹಳ್ಳೂರು. ಅಧೀಕ್ಷಕ ಇಂಜಿನಿಯರ್‌ಎಸ್.ಎಸ್.ರಾಥೋಡ್, ಸಹಾಯಕ ಇಂಜಿನಿಯರ್‌ಗಳಾದ ವಿಜಯ್ ಅರಳಿ ಹಾಗೂ ಬಾಲಸುಬ್ರಮಣ್ಯಂ ಮುಂತಾದವರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!