ಹೊಸ ದಿಗಂತ ವರದಿ, ಶಿವಮೊಗ್ಗ:
ಪ್ರಧಾನಿ ಮೋದಿಯವರು ಆರಂಭಿಸಿರುವ ಕ್ಯಾಚ್ ಇನ್ ದಿ ರೈನ್ (ಜಲಶಕ್ತಿ ಅಭಿಯಾನ) ಯೋಜನೆಯನ್ನು ರಾಜ್ಯದಲ್ಲಿಯೂ ಜಾರಿಗೆ ತರಲಾಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ರಾಜ್ಯದಲ್ಲಿ ಇದಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ. ಮಳೆ ನೀರು ಸಂರಕ್ಷಣೆ ಮತ್ತು ಕೆರೆಗಳ ಸಮಗ್ರ ಅಭಿವೃದ್ಧಿ ಇದರಲ್ಲಿ ಸೇರಿದೆ. ಮಳೆ ನೀರು ವ್ಯರ್ಥವಾಗಿ ಸಮುದ್ರ ಸೇರುವುದನ್ನು ಆದಷ್ಟು ತಡೆದು ಭೂಮಿಯಲ್ಲಿ ಇಂಗಿಸಲಾಗುತ್ತದೆ ಎಂದರು.
ಕಾಲುವೆಗಳ ಪುನಶ್ಚೇತನ, ಹೂಳು ತೆಗೆಯುವುದು, ಕೆರೆ ಏರಿ ದುರಸ್ತಿ, ಕೆರೆ ಕೋಡಿ ಮತ್ತು ರೈತರ ಜಮೀನುಗಳಿಗೆ ನೀರು ಹರಿದುಹೋಗುವ ಕಾಲುವೆಗಳ ದುರಸ್ತಿ, ಕೆರೆ ಅಂಚಿನ ಖಾಲಿ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಬೆಳೆಸಲು ಉದ್ದೇಶಿಸಲಾಗಿದೆ ಎಂದರು.
5 ಎಕರೆ ಒಳಗಿರುವ ರೈತರ ಜಮೀನಿಗೆ ಬದು ನಿರ್ಮಾಣ, ಕಲ್ಯಾಣಿಗಳ ಪುನಶ್ಚೇತನ, ನಾಲಾ ಪುನಶ್ಚೇತನ, ಗೋಕಟ್ಟೆಗಳ ನಿರ್ಮಾಣ, ಕೆರೆ ನಿರ್ಮಾಣ, ಮಲ್ಟಿ ಆರ್ಚ್ ಚೆಕ್ಡ್ಯಾಂ ನಿರ್ಮಾಣ, ಕೊಳವೆಬಾವಿಗಳ ಮರುಪೂರಣ, ಮಳೆ ನೀರು ಕೊಯ್ಲು, ಅರಣ್ಯೀಕರಣ ಕಾಮಗಾರಿಗನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಇದೆಲ್ಲವೂ ನರೆಗಾ ಯೋಜನೆಯಡಿ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.