Sunday, April 11, 2021

Latest Posts

ವಿದ್ಯುತ್ ಸಮಸ್ಯೆಯಿಂದ ನೀರು ಸರಬರಾಜಿಗಿದ್ದ ಅಡ್ಡಿ ನಿವಾರಣೆ: ಪುತ್ತೂರು ಎರಡು ದಿನಗಳಿಂದ ನಿರಾಳ

ಹೊಸ ದಿಗಂತ ವರದಿ, ಪುತ್ತೂರು:

ಐವತ್ತು ಸಾವಿರ ಜನಸಂಖ್ಯೆ ದಾಟಿರುವ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಪ್ರತಿದಿನ 12 ಸಾವಿರ ನೀರಿನ ಸಂಪರ್ಕಗಳಿಗೆ ಒಟ್ಟು 8ಎಂಎಲ್‌ಡಿ ನೀರು ಪೂರೈಕೆಯಾಗಬೇಕು. ನೀರು ಪೂರೈಕೆ ನಿರಂತರವಾಗಿರಲು ನೀರು ಸರಬರಾಜು ವ್ಯವಸ್ಥೆಯ ರೇಚಕ ಯಂತ್ರ ಸ್ಥಾವರಕ್ಕೆ ದಿನದ ಕನಿಷ್ಠ 22 ತಾಸುಗಳ ಕಾಲ ನಿರಂತರ ವಿದ್ಯುತ್ ಪೂರೈಕೆಯಾಗಬೇಕು. ಇಲ್ಲದಿದ್ದರೆ ನೀರು ಪೂರೈಕೆಗೆ ಆತಂಕವಾಗುತ್ತದೆ.

ಆತಂಕ ನಿವಾರಣೆ:
ಪುತ್ತೂರು ನಗರ ನೀರು ಸರಬರಾಜು ಯೋಜನೆಯ ರೇಚಕ ಯಂತ್ರ ಸ್ಥಾವರವು 34ನೇ ನೆಕ್ಕಿಲಾಡಿ ಗ್ರಾಮದ ಕುಮಾರಧಾರಾ ನದಿಯ ಕಿಂಡಿ ಅಣೆಕಟ್ಟಿನ ಬಳಿಯಿದೆ. ಪುತ್ತೂರು ಉಪವಿದ್ಯುತ್ ಕೇಂದ್ರದಿಂದ ರೇಚಕ ಯಂತ್ರ ಸ್ಥಾವರಕ್ಕೆ 11ಕೆವಿ ಎಕ್ಸ್‌ಪ್ರೆಸ್ ಫೀಡರ್ ಲೈನ್ ಸಂಪರ್ಕವಿದೆ. ಕಳೆದ 15 ದಿನಗಳಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸ ಕಂಡು ಬಂದು ನೀರು ಪೂರೈಕೆ ಆತಂಕಿತವಾಗಿತ್ತು. ಕಳೆದ 2 ದಿನಗಳಿಂದ ಆತಂಕ ದೂರವಾಗಿದೆ.

ಬಿಸಿ ಮುಟ್ಟಿಸಿದ ನಗರಸಭೆ ಆಡಳಿತ:
ಪೂರೈಕೆಯ ಜವಾಬ್ದಾರಿಯನ್ನು ಹೊಂದಿರುವ ನಗರಸಭೆ ವಿದ್ಯುತ್ ಸಮಸ್ಯೆಯಿಂದ ನೀರು ಪೂರೈಕೆಗೆ ಅಡ್ಡಿಯಾಗುವುದನ್ನು ಗಂಭೀರವಾಗಿ ಪರಿಗಣಿಸಿತ್ತು. ನಗರಸಭೆಯಿಂದ ಮೆಸ್ಕಾಂಗೆ ಪತ್ರ ಬರೆದು ಈ ಕುರಿತು ತುರ್ತು ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು. ನೀರಿನ ಭವಣೆ ಇರುವ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕುಮಾರಧಾರೆಯಿಂದ ಲಭ್ಯವಾಗುವ 6.5 ಎಂಎಲ್‌ಡಿ ನೀರು ಮತ್ತು ನಗರಸಭಾ ವ್ಯಾಪ್ತಿಯ 153 ಕೊಳವೆ ಬಾವಿಗಳಿಂದ ಲಭ್ಯವಾಗುವ 1.5ಎಂಎಲ್‌ಡಿ ನೀರು ಆಧಾರವಾಗಿದೆ. 34ನೇ ನೆಕ್ಕಿಲಾಡಿ ಗ್ರಾಮದ ರೇಚಕ ಯಂತ್ರ ಸ್ಥಾವರಕ್ಕೆ ವಿದ್ಯುತ್ ಪೂರೈಕೆ ಅಡಚಣೆಯಾದರೆ ಗಂಭೀರ ಸಮಸ್ಯೆಯಾಗುತ್ತದೆ.

ನಿರ್ವಹಣೆ ನಿರ್ಲಕ್ಷ್ಯ:
11 ಕೆವಿ ಎಕ್ಸ್‌ಪ್ರೆಸ್ ಫೀಡರ್ ಲೈನ್‌ನ ನಿರ್ವಹಣೆಯ ಕುರಿತಂತೆ ಮೆಸ್ಕಾಂ ನಿರ್ಲಕ್ಷ್ಯ ತೋರುತ್ತಿದೆ ಎಂಬ ಆರೋಪ ಕೂಡಾ ಈ ಹಿನ್ನೆಲೆಯಲ್ಲಿ ಕೇಳಿ ಬಂದಿದೆ. ಪುತ್ತೂರು ನಗರ ನೀರು ಸರಬರಾಜು ಯೋಜನೆಯ ವಿದ್ಯುತ್ ಸಂಪರ್ಕ ಲೈನ್‌ನಲ್ಲಿ ಅಡಚಣೆ ಉಂಟಾಗದಂತೆ ಕಾಲ ಕಾಲದಲ್ಲಿ ನಡೆಸಬೇಕಾದ ನಿರ್ವಹಣೆಯನ್ನು ಮೆಸ್ಕಾಂ ನಡೆಸುತ್ತಿಲ್ಲ ಎಂದು ನಗರಸಭಾ ಸದಸ್ಯರು ಆರೋಪಿಸುತ್ತಿದ್ದಾರೆ. ಅಲ್ಲದೆ ಈ ಎಕ್ಸ್‌ಪ್ರೆಸ್ ಫೀಡರ್ ಲೈನ್‌ನಿಂದ ಬೇರೆ ಸಂಪರ್ಕಗಳನ್ನು ಕೂಡಾ ನೀಡಲಾಗುತ್ತಿದೆ ಎಂದು ದೂರುಗಳಿವೆ.

ಗಂಭೀರ ಸಮಸ್ಯೆ:
ಪುತ್ತೂರು ನಗರಕ್ಕೆ ನೀರು ಪೂರೈಕೆ ಮಾಡಲು ವಿದ್ಯುತ್ ಸರಬರಾಜಿನ ಕಾರಣದಿಂದ ಅಡಚಣೆಯಾದರೆ ಅದು ಗಂಭೀರ ಸಮಸ್ಯೆಯಾಗುತ್ತದೆ. ನಿರಂತರ ವಿದ್ಯುತ್ ಸಂಪರ್ಕದ ಕುರಿತಂತೆ ನಗರಸಭೆಯಿಂದ ಶಾಸಕರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆಯಲಾಗಿದೆ. ಮೆಸ್ಕಾಂ ಈ ಕುರಿತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪುತ್ತೂರು ನಗರಸಭೆ ಅಧ್ಯಕ್ಷ ಕೆ. ಜೀವಂಧರ ಜೈನ್ ತಿಳಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss