ಮಹಾರಾಷ್ಟ್ರದಿಂದ ಭೀಮೆಗೆ ನೀರು: ಕಲಬುರಗಿ ಡಿಸಿ ಬಳಿ ಸ್ಥಿತಿಗತಿ ವರದಿ ಪಡೆದ ನಿರಾಣಿ

ಹೊಸದಿಗಂತ ವರದಿ, ಕಲಬುರಗಿ
ಜಿಲ್ಲೆಯಲ್ಲಿ ಮಳೆ ಮುಂದುವರೆದಿರುವುದರ ಜೊತೆಗೆ, ನೆರೆಯ ಮಹಾರಾಷ್ಟ್ರದಿಂದ ಭೀಮಾ ನದಿಗೆ ನೀರು ಹರಿಬಿಟ್ಟಿರುವ ಕುರಿತು ಮಾಹಿತಿ ಪಡೆದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಮುರುಗೇಶ ನಿರಾಣಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಜಿಲ್ಲಾಧಿಕಾರಿಗಳು ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಜಾಗತಿಕ ಬಂಡವಾಳ ಹೂಡಿಕೆಯ ಸಮ್ಮೇಳನ ನಿಮಿತ್ತವಾಗಿ ಅಮೆರಿಕ ಪ್ರವಾಸದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರು, ಡಿ.ಸಿ. ಅವರೊಂದಿಗೆ ಸಭೆಯನ್ನು ನಡೆಸಿ ಜಿಲ್ಲೆಯ ಸಮಗ್ರ ಚಿತ್ರಣ ಮತ್ತು ಪ್ರವಾಹ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು.
ಮಹಾರಾಷ್ಟ್ರ ಡ್ಯಾಂಗಳಿಂದ ಬರುವ ನೀರು ಕಡಿಮೆಯಾಗಿದ್ದರಿಂದ ಸದ್ಯಕ್ಕೆ ಜಿಲ್ಲೆಯಲ್ಲಿ ಪ್ರವಾಹ ಭೀತಿಯಿಲ್ಲ. ಹೀಗಾಗಿ ಜನರು ಆತಂಕ ಪಡಬೇಕಾಗಿಲ್ಲ ಎಂದು ಸಚಿವ ಮುರುಗೇಶ ನಿರಾಣಿ ತಿಳಿಸಿದರು. ಅಲ್ಲದೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ತುರ್ತು ಪರಿಸ್ಥಿತಿ ಬಂದರು ನಿಭಾಯಿಸಲು ರಕ್ಷಣಾ ತಂಡಗಳನ್ನು ಸಜ್ಜಾಗಿಸುವಂತೆ ತಿಳಿಸಿದ್ದಾರೆ.
ಮಹಾರಾಷ್ಟ್ರದ ಸಚಿವರೊಂದಿಗೆ ಸಹ ಸಚಿವರು ಮಾತನಾಡಿದ್ದು, ಈಗ ಸದ್ಯಕ್ಕೆ ಅಷ್ಟೊಂದು ಪ್ರಮಾಣದ ನೀರು ಬಿಡುತ್ತಿಲ್ಲ, ಅಲ್ಲದೆ ನಿರಂತರವಾಗಿ ಉಜನಿ ಜಲಾಶಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಸಂಪರ್ಕದಲ್ಲಿದ್ದು, ಅಲ್ಲಿಯೂ ನೀರಿನ ಮಟ್ಟ ತಗ್ಗಿದ ಪ್ರಯುಕ್ತ 60 ಸಾವಿರ ಕ್ಯೂಸೆಕ್ ನೀರು ಮಾತ್ರ ನದಿಗೆ ಹರಿಸುತ್ತಿದ್ದಾರೆ. ಹೆಚ್ಚಿನ ನೀರು ಬರುವ ಆತಂಕ ಸದ್ಯಕ್ಕಿಲ್ಲ, ಹೀಗಾಗಿ ಸೊನ್ನ ಬ್ಯಾರೇಜ್‌ದಿಂದ ಬಿಡುಗಡೆ ಮಾಡುತ್ತಿರುವ ನೀರಿನ ಪ್ರಮಾಣವು ಕಡಿಮೆ ಆಗಲಿದೆ ಎಂದು ಸಚಿವ ಡಾ.ಮುರುಗೇಶ ನಿರಾಣಿ ತಿಳಿಸಿದರು.
ಕೆಲವು ಕಡೆಗಳಲ್ಲಿ ಸಂಪರ್ಕ ಕಡಿತಗೊಂಡಿದ್ದು, ಜನರ ಅನುಕೂಲಕ್ಕಾಗಿ ಪರ್ಯಾಯ ಮಾರ್ಗ ಬಳಸಿಕೊಂಡು ಸಂಚರಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಯಾವುದೇ ಕಾರಣಕ್ಕೂ ನೀರು ತುಂಬಿ ಹರಿಯುತ್ತಿರುವ ಸೇತುವೆ ಮೇಲೆ ಹೋಗುವ ಇಲ್ಲವೇ ವಾಹನಗೊಂದಿಗೆ ದಾಟುವ ಪ್ರಯತ್ನ ಸಾರ್ವಜನಿಕರು ಮಾಡಬಾರದು. ಘತ್ತರಗಿ ಇನ್ನಿತರ ಬ್ಯಾರೇಜ್‌ಗಳ ಮೇಲೆ ಸದ್ಯಕ್ಕೆ ಯಾವುದೇ ವಾಹನಗಳು ಹೋಗದಂತೆ ನೋಡಿಕೊಳ್ಳಲು ಪೊಲೀಸರನ್ನು ನಿಯೋಜನೆ ಮಾಡುವಂತೆ ಎಸ್.ಪಿ. ಅವರಿಗೆ ಸಚಿವ ಡಾ.ಮುರುಗೇಶ ನಿರಾಣಿ ಅವರು ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!