ಹೊಸದಿಗಂತ ವರದಿ ವಿಜಯನಗರ:
ನೂತನ ಜಿಲ್ಲೆಯನ್ನಾಗಿ ಇತಿಹಾಸ ಸೃಷ್ಟಿಸಲು ಅವಕಾಶ ಕಲ್ಪಿಸಿದ ಪಕ್ಷ ನಮ್ಮದು, ರಾಜಕಾರಣದಲ್ಲಿ ಸೋಲು, ಗೆಲುವು ಸಹಜ, ಪಕ್ಷ ಬದಲಾವಣೆ ಮಾತೇ ಇಲ್ಲ, ಕೊನೆ ಉಸಿರು ಇರುವವರೆಗೂ ಬಿಜೆಪಿಯಲ್ಲೇ ಇರುವೆ ಎಂದು ಮಾಜಿ ಸಚಿವ ಆನಂದ್ ಸಿಂಗ್ ಅವರು ಹೇಳಿದರು.
ಸಮೀಪದ ಕಮಲಾಪೂರ್ ಪಟ್ಟಣದ ರಜಪೂತ್ ಕೋಟೆ ಸಭಾಂಗಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಅ.2 ರಂದು ವಿಜಯನಗರ ನೂತನ ಜಿಲ್ಲೆಯಾಗಿ ಉದಯವಾಗಿದ್ದು, ಎರಡು ವರ್ಷಗಳು ಕಳೆದಿದೆ. ನೂತನ ಜಿಲ್ಲೆ ಕೊಟ್ಟಿರುವ ಪಕ್ಷ ನಮ್ಮದು, ನೂತನ ಜಿಲ್ಲೆಗಾಗಿ ಅನೇಕ ಮಹನೀಯರು ಶ್ರಮಿಸಿದ್ದಾರೆ. ನಮ್ಮ ಅವಧಿಯಲ್ಲಿ ನೂತನ ಜಿಲ್ಲೆ ಉದಯವಾಗಿರುವುದು ಅತ್ಯಂತ ಹೆಮ್ಮೆ, ಅಭಿಮಾನವಿದೆ ಎಂದರು.
ಪ್ರತಿ ವರ್ಷ ಅ.2 ರಂದು ವಿಜಯನಗರ ಜಿಲ್ಲೆಯಾದ್ಯಂತ ವಿಜಯೋತ್ಸವ ಆಚರಣೆ ಮಾಡಿ, ತಾಯಿ ಭುವನೇಶ್ವರಿ ಭಾವಚಿತ್ರ ಇಟ್ಟು ಪೂಜಿಸಿ ಸಂಭ್ರಮಿಸಬೇಕು ಎಂದು ಮನವಿ ಮಾಡಿದರು.
ಚುನಾವಣೆ ಪಲಿತಾಂಶದ ಬಳಿಕ ರಾಜಕಾರಣದಿಂದ ದೂರ ಉಳಿದಿರುವೆ, ಇನ್ಮುಂದೆ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸೋಲ್ಲ, ರಾಜಕಾರಣದಿಂದ ದೂರ ಉಳಿದು, ಹೊಸಬರಿಗೆ ಅವಕಾಶ ಕಲ್ಪಿಸುವೆ ಎಂದು ಈ ಹಿಂದೆಯೇ ಸಾಕಷ್ಟು ಬಾರಿ ಹೇಳಿದ್ದೆ. ನಾನು ಮೂಲತಃ ಉದ್ಯಮಿಯಾಗಿದ್ದು, ರಾಜಕೀಯದಿಂದ ದೂರ ಉಳಿಯುವೆ. ಪಕ್ಷದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತರಾಗಿ ಶ್ರಮಿಸುವೆ, ಪಕ್ಷ ಮಾತ್ರ ಬಿಡುವ ಮಾತೇ ಇಲ್ಲ, ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುವೆ, ನಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದರು.
ಕೊಪ್ಪಳ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವುದು ಸುಳ್ಳು, ಇನ್ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡೋಲ್ಲ, ಪುತ್ರ ಸಿದ್ಧಾರ್ಥ್ ಸಿಂಗ್ ಅವರು ಪ್ರಭುದ್ಧರಿದ್ದು, ಬುದ್ದಿವಂತರಿದ್ದು, ರಾಜಕೀಯದಲ್ಲೇ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸ್ವತಂತ್ರರಿದ್ದಾರೆ ಎಂದರು.
ಇಲ್ಲಿವರೆಗೆ ಕ್ಷೇತ್ರದ ಇತಿಹಾಸದಲ್ಲಿ 4 ಬಾರಿ ಶಾಸಕರಾಗಿ ಯಾರೂ ಆಯ್ಕೆಯಾಗಿಲ್ಲ, ಈ ಇತಿಹಾಸ ಸೃಷ್ಟಿಸಲು ಅವಕಾಶ ಕಲ್ಪಿಸಿದ ನನ್ನ ಕ್ಷೇತ್ರದ ಜನರಿಗೆ ಅಭಿನಂದನೆಗಳನ್ನು ಸಲ್ಲಿಸುವೆ ಎಂದರು.