Friday, July 1, 2022

Latest Posts

ನಾವು ದೇಶವನ್ನು ಪರಮ ವೈಭವ ಸ್ಥಿತಿಯಲ್ಲಿ ಕಾಣುವವರಾಗಬೇಕು: ಟಿ.ಸಿ.ಚಂದ್ರನ್

ಹೊಸ ದಿಗಂತ ವರದಿ, ಮಡಿಕೇರಿ:

ಅಖಂಡ ಭಾರತದ ಪರಿಕಲ್ಪನೆಯೊಂದಿಗೆ ದೇಶವನ್ನು ಪರಮ ವೈಭವ ಸ್ಥಿತಿಯಲ್ಲಿ ಕಾಣುವ ಪುಣ್ಯವಂತರು ನಾವಾಗಬೇಕು. ರಾಷ್ಟ್ರೀಯತೆಯ ಮೂಲಕ ಈ ದೇಶವನ್ನು ಶೀಘ್ರದಲ್ಲಿಯೇ ಪರಮ ವೈಭವ ಸ್ಥಿತಿಗೆ ಕೊಂಡೊಯ್ಯುವ ಸಾಧ್ಯತೆ ನಿಚ್ಚಳವಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ‌ ಸಂಘದ ಪ್ರಮುಖರಾದ ಟಿ.ಸಿ. ಚಂದ್ರನ್ ವಿಶ್ವಾಸ ವ್ಯಕ್ತಪಡಿಸಿದರು.
ಆರ್.ಎಸ್. ಎಸ್. ಸಂಸ್ಥಾಪನಾ ದಿನದ ಪ್ರಯುಕ್ತ ಮಡಿಕೇರಿ ತಾಲೂಕಿನ‌ ಮರಗೋಡುವಿನಲ್ಲಿ ನಡೆದ ಪಥ ಸಂಚಲನದ ವೇದಿಕೆ ಕಾರ್ಯಕ್ರಮದಲ್ಲಿ ಬೌದ್ಧಿಕ್ ನೀಡಿದ ಅವರಿ, ಯಾವುದೇ ಕಾರಣಕ್ಕೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲು ಬಿಡುವುದಿಲ್ಲ ಎಂದವರು ಇಂದು ಭವ್ಯ ರಾಮ ಮಂದಿರಕ್ಕೆ ತೆರಳಲು ಕ್ಷಣಗಣನೆಯಲ್ಲಿದ್ದಾರೆ ಎಂದರು.
ರಾಜಕೀಯ ಬೇಳೆ ಬೇಯಿಸಲೆಂದೇ ಒಂದೇ ದೇಶಕ್ಕೆ ಎರಡೆರಡು ಕಾನೂನು ಸೃಷ್ಟಿಸಿದವರು ಇಂದು ಈ ದೇಶದ ಒಂದೇ ಕಾನೂನಿಗೆ ತಲೆಬಾಗುವಂತಾಗಿದೆ.ಈ ದೇಶದೊಳಗೆ ಬಂದು ಅಕ್ರಮವಾಗಿ ನೆಲೆಸಿರುವ ಪರದೇಶದ ಬಹುಸಂಖ್ಯಾತರನ್ನು ಹೊರದಬ್ಬುವ ಪ್ರಕ್ರಿಯೆಯೂ ನಿರಾತಂಕವಾಗಿ ನಡೆಯುತ್ತಿದೆ. ಪ್ರಮುಖ ಸಂದರ್ಭ ಇಡೀ ವಿಶ್ವವೇ ಭಾರತದ ನಿಲುವಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಂಘದ ನೂರಾರು ಪೂರ್ಣ ಗಣವೇಷಧಾರಿ ಸ್ವಯಂಸೇವಕರ ಪಥಸಂಚಲನ ಅರೆಕಾಡುವಿನಿಂದ ಮರಗೋಡು ವರೆಗೆ ಸಾಗಿತು. ಸಂಚಲನ ಸಾಗುವ ಮಾರ್ಗದಲ್ಲಿ ಸ್ಥಳೀಯರು ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಸಂಘಚಾಲಕ್ ಚಕ್ಕೇರ ಮನು, ಕುಟ್ಟಂಡ ಮಿರನ್, ಚಂದ್ರ ಉಡೋತ್, ಶಿವರಾಜ್ , ಮುಖ್ಯ ಶಿಕ್ಷಕ್ ಅರುಣ್ ಸೇರಿದಂತೆ ಸಂಘ ಪರಿವಾರದ ಮುಖಂಡರು, ಸ್ಥಳೀಯರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss