ಭಾರತದೊಂದಿಗೆ ಯುದ್ಧದಿಂದ ಪಾಕಿಸ್ತಾನಕ್ಕೆ ನಷ್ಟವೇ ಆಗಿದೆ ಎನ್ನುತ್ತಲೇ ಮತ್ತೆ ಕಾಶ್ಮೀರವನ್ನು ಪ್ರಸ್ತಾಪಿಸಿದ ಪಾಕ್ ಪ್ರಧಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನವೆಂಬರ್ ಅಂತ್ಯದಲ್ಲಿ ಭದ್ರತಾ ಪಡೆಗಳೊಂದಿಗಿನ ಕದನ ವಿರಾಮವನ್ನು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಕೊನೆಗೊಳಿಸಿದ ನಂತರ ಪಾಕಿಸ್ತಾನವು ಭಯೋತ್ಪಾದನೆ-ಸಂಬಂಧಿತ ಹಿಂಸಾಚಾರ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಅದರ ಜೊತೆಗೆ ಪಾಕಿಸ್ತಾನ ತೀವ್ರ ಆರ್ಥಿಕ/ಆಹಾರ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಜನರ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿರುವ ಬೆನ್ನಲ್ಲೇ ಪಾಠ ಕಲಿತ ಪಾಕ್‌ ಪ್ರಧಾನಿ ಭಾರತದೊಂದಿಗೆ ಪ್ರಾಮಾಣಿಕ ಮಾತುಕತೆಗೆ ಬದ್ಧವಾಗಿದೆ ಎಂಬ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.

ಕಾಶ್ಮೀರದಂತಹ ಜ್ವಲಂತ ಸಮಸ್ಯೆ ಪರಿಹರಿಸಲು ನಾವು ಪ್ರಧಾನಿ ಮೋದಿಯವರೊಂದಿಗೆ ʻಗಂಭೀರ ಮತ್ತು ಪ್ರಾಮಾಣಿಕ ಮಾತುಕತೆʼಗೆ ಸಿದ್ಧ ಎಂದು ದುಬೈ ಮೂಲದ ಅರೇಬಿಕ್ ನ್ಯೂಸ್ ಟೆಲಿವಿಷನ್ ಚಾನೆಲ್ ಅಲ್ ಅರೇಬಿಯಾಗೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸಂದೇಶ ನೀಡಿದ್ದಾರೆ.

ಮುಂದುವರೆದು ಮಾತನಾಡಿದ ಶರೀಫ್‌, ಶಾಂತಿಯುತವಾಗಿ ಬದುಕುವ ಜವಾಬ್ದಾರಿ ಎಲ್ಲರ ಮೇಲಿದೆ. ನಾವು ಭಾರತದೊಂದಿಗೆ ಇದುವರೆಗೂ ಮೂರು ಯುದ್ಧಗಳನ್ನು ಮಾಡಿದ್ದೇವೆ ಮತ್ತು ಪ್ರತಿ ಬಾರಿ ಜನರಿಗೆ ಹೆಚ್ಚು ದುಃಖ, ಬಡತನ ಮತ್ತು ನಿರುದ್ಯೋಗವನ್ನೇ ಕೊಟ್ಟಿದ್ದೇವೆ. ಇದರಿಂದ ತಕ್ಕ ಪಾಠ ಕಲಿತು ನೆಮ್ಮದಿಯಿಂದ ಬದುಕುತ್ತೇವೆ ಎಂದು ಪ್ರಾರ್ಥಿಸಿದರು. ನಾನು ಪ್ರಧಾನಿ ಮೋದಿಯವರಿಗೆ ನೀಡಲು ಬಯಸುವ ಸಂದೇಶವೆಂದರೆ, ನಮ್ಮ ನೈಜ ಸಮಸ್ಯೆಗಳನ್ನು ಪರಿಹರಿಸಲು ನಾವು ಸಮರ್ಥರಾಗಿದ್ದು, ಶಾಂತಿಯಿಂದ ಬದುಕಲು ಬಯಸುತ್ತೇವೆ. ಮದ್ದುಗುಂಡುಗಳ ದಾಳಿಯಿಂದ ಅಮೂಲ್ಯ ಸಂಪನ್ಮೂಲಗಳನ್ನು ವ್ಯರ್ಥ ಮಾಡಬಯಸುವುದಿಲ್ಲ ಎಂದರು.

ಇದೇ ಸಮಯದಲ್ಲಿ ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿದ ಷರೀಫ್‌, ಭಾರತದಲ್ಲಿ ಅಲ್ಪಸಂಖ್ಯಾತರು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಆರೋಪಿಸಿದರು. ಕಾಶ್ಮೀರದಲ್ಲಿ ದಿನದಿಂದ ದಿನಕ್ಕೆ ಮಾನವ ಹಕ್ಕುಗಳ ಭೀಕರ ಉಲ್ಲಂಘನೆಯಾಗುತ್ತಿದೆ. ಭಾರತವು 2019ರ ಆಗಸ್ಟ್‌ ತಿಂಗಳಲ್ಲಿ ಭಾರತೀಯ ಸಂವಿಧಾನದ 370ನೇ ವಿಧಿ ನಿಯಮ ಕಾಶ್ಮೀರಿ ಜನತೆಗೆ ನೀಡಿದ ಹಕ್ಕುಗಳನ್ನು ಕಸಿದುಕೊಂಡಿದೆ ಎಂದು ಆರೋಪಿಸಿದರು.

ಷರೀಫ್‌ ಈ ಹೇಳಿಕೆ ಬೆನ್ನಲ್ಲೇ ನಾನಾ ರೀತಿಯ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ. ಶಾಂತಿ ಮಂತ್ರ ಜಪಿಸುವುದಾದರೆ, ಭಯೋತ್ಪಾದನೆಗೆ ನೀರೆರೆದು ಪಾಕ್‌ ಇದುವರೆಗೂ ಸಾಕುತ್ತಿರಲಿಲ್ಲ. ಜೊತೆಗೆ ಮೋಸ್ಟ್‌ ವಾಂಟೆಡ್‌ ಉಗ್ರರನ್ನು ಇಷ್ಟು ಹೊತ್ತಿಗಾಗಲೇ ಭಾರತಕ್ಕೆ ಹಸ್ತಾಂತರ ಮಾಡಬೇಕಿತ್ತು. ಪ್ರಾಮಾಣಿಕ ಮಾತುಕತೆ ಎಂಬ ಹೆಸರಿನಲ್ಲಿ ಮತ್ತೆ ಕಾಶ್ಮೀರದ ಹೆಸರನ್ನು ಪ್ರಸ್ತಾಪ ಮಾಡಿರುವುದರ ಉದ್ದೇಶ ಏನು? ಇದೆಲ್ಲಾ ಪಾಕ್‌ನ ಕುತಂತ್ರಿ ಬುದ್ದಿ ಎಂಬ ಸಂದೇಶಗಳು ಹರಿದಾಡುತ್ತಿವೆ.  ಭಯೋತ್ಪಾದನೆ ತಾಣವಾಗಿರುವ ಪಾಕಿಸ್ತಾನ ಮತ್ತೊಮ್ಮೆ ತನ್ನ ನರಿ ಬುದ್ದಿ ತೋರಿಸಲು ಮಾತುಕತೆ ಮಾರ್ಗ ಆಯ್ದುಕೊಂಡಿದೆ ಎಂಬ ಟೀಕೆಗಳು ಬರುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!