ಮನೆಗಳನ್ನು ಕಾಪಾಡುವಂತೆ ನಾವು ಮಠವನ್ನು ಕಾಪಾಡಿಕೊಳ್ಳಬೇಕು: ಡಿ.ಕೆ. ಶಿವಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾವು ನಮ್ಮ ಮನೆಗಳನ್ನು ಕಾಪಾಡಿಕೊಳ್ಳುವಂತೆ ನಮ್ಮ ಮಠಗಳನ್ನು ಕಾಪಾಡಿಕೊಳ್ಳಬೇಕು. ಇದು ನಮ್ಮೆಲ್ಲರ ಕರ್ತವ್ಯ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಗಳು ಸನ್ಯಾಸ ಸ್ವೀಕಾರ ಮಾಡಿ 50 ವರ್ಷಗಳು ಪೂರೈಸಿರುವ ಶುಭ ಸಂವತ್ಸರದ ಸಂದರ್ಭದಲ್ಲಿ ಶೃಂಗೇರಿಯಲ್ಲಿ ಶನಿವಾರ ಏರ್ಪಡಿಸಿದ್ದ “ಸುವರ್ಣ ಭಾರತೀ ಮಹೋತ್ಸವ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಹಿರಿಯರು, ಮನೆ ಹುಷಾರು, ಮಠ ಹುಷಾರು ಎಂದು ಹೇಳಿದ್ದಾರೆ. ನಾವು ನಮ್ಮ ಮನೆಗಳನ್ನು ಕಾಪಾಡಿಕೊಳ್ಳುವಂತೆ ನಮ್ಮ ಮಠಗಳನ್ನು ಕಾಪಾಡಿಕೊಳ್ಳಬೇಕು. ಇದು ನಮ್ಮೆಲ್ಲರ ಕರ್ತವ್ಯ. ನೀವು ಇಲ್ಲಿಗೆ ಬಂದು ಹಾಗೇ ಹೋಗಬೇಡಿ. ನೀವು ನೂರು ರೂಪಾಯಿ ಸಂಪಾದನೆ ಮಾಡಿದರೆ, ಒಂದು ರೂಪಾಯಿಯಾದರೂ ಧರ್ಮ ಉಳಿಸುವ ಮಠಕ್ಕೆ ನೀಡಬೇಕು. ಆಗ ಮಾತ್ರ ಮಠ ಉಳಿಯಲು ಸಾಧ್ಯ ಎಂದು ಕರೆ ನೀಡಿದರು.

ಇದು ಭಾಗ್ಯ ಇದು ಭಾಗ್ಯ, ಇದು ಭಾಗ್ಯವಯ್ಯ, ಪದುಮನಾಭನ ಪಾದ ಭಜನೆ ಪರಮ ಸುಖವಯ್ಯ ಎಂಬ ಪುರಂದರ ದಾಸರ ಪದಗಳಂತೆ ಇಂತಹ ದೊಡ್ಡ ಭಕ್ತಿ ಸಾಗರದಲ್ಲಿ ವಿಧುಶೇಖರಭಾರತೀ ಮಹಾಸ್ವಾಮೀಜಿಗಳು ನೀಡಿರುವ ಪ್ರವಚನ ಕೇಳಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನೆಮ್ಮದಿ ಪಡೆದುಕೊಳ್ಳಲು ನಾನು ಭಾಗವಹಿಸಿರುವುದು ನನ್ನ ಭಾಗ್ಯವಾಗಿದೆ ಎಂದರು.

ಭಾರತೀತೀರ್ಥ ಮಹಾಸ್ವಾಮೀಜಿಗಳು ಸಮಾಜದಲ್ಲಿ ಧರ್ಮವನ್ನು ಉಳಿಸಲು ಸನ್ಯಾಸತ್ವ ಸ್ವೀಕರಿಸಿ 50 ವರ್ಷಗಳು ಪೂರೈಸಿವೆ. ಇವರು ಶಾರದ ಪೀಠದ 36ನೇ ಅಧ್ಯಕ್ಷರಾಗಿ ನಮ್ಮ ಕಣ್ಣಿಗೆ ದೇವರ ರೂಪದಲ್ಲಿ ಕಾಣುತ್ತಿದ್ದಾರೆ. ಅವರಲ್ಲಿ ನಾವು ಶಂಕರಚಾರ್ಯರನ್ನು ಕಾಣುತ್ತಿದ್ದೇವೆ. ವಿಧುಶೇಖರಭಾರತೀ ಸ್ವಾಮೀಜಿಗಳು ದೇಶ ಸುತ್ತಿ ನಮ್ಮ ಧರ್ಮ ಕಾಪಾಡಲು ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಇಲ್ಲಿಗೆ ಬಂದಾಗ ನನಗೆ ಶಾಲೆಯಲ್ಲಿ ಕಲಿತ ಶ್ಲೋಕ ನೆನಪಾಯಿತು. ವಿದ್ಯಾ ದದಾತಿ ವಿನಯಂ ವಿನಯಾ ದದಾತಿ ಪಾತ್ರತಾಂ। ಪಾತ್ರತ್ವಂ ಧನಮಾಪ್ನೋತಿ ಧನಧರ್ಮಂ ತತಃ ಸುಖಮ್. ಅಂದರೆ ಮನುಷ್ಯನಿಗೆ ವಿದ್ಯೆ ಇದ್ದರೆ ವಿನಯ ಬರುತ್ತದೆ. ವಿನಯವಿದ್ದರೆ ಯೋಗ್ಯತೆ ಬರುತ್ತದೆ. ಯೋಗ್ಯತೆಯಿಂದ ಹಣ, ಹಣದಿಂದ ಧರ್ಮ, ಧರ್ಮದಿಂದ ಸುಖ ಪಡೆಯುತ್ತೇವೆ. ಅದರಂತೆ ಸುಖ ಪಡೆಯಲು ನಾವು ಇಲ್ಲಿಗೆ ಬಂದಿದ್ದೇವೆ. ನಾವು ನಮ್ಮ ಮನಸ್ಸಿನ ಶಾಂತಿ ಪಡೆಯಲು, ನಮ್ಮ ಕಷ್ಟಗಳ ನಿವಾರಣೆಗೆ ದೇವಾಲಯಕ್ಕೆ ಹೋಗುತ್ತೇವೆ. ಇಂತಹ ಪವಿತ್ರ ಶಾರದ ಪೀಠ ಸನ್ನಿದಿಯಲ್ಲಿ ನಾವೆಲ್ಲರೂ ಸೇರಿರುವುದು ನಮ್ಮ ಭಾಗ್ಯ ಎಂದರು.

ಶ್ರೀಗಳು ಹೇಳಿಕೊಟ್ಟ ಪಾಠ ಕಲಿತು, ಅವರು ಹೇಳಿದ ಸ್ತೋತ್ರಗಳನ್ನು ಅರ್ಥ ಮಾಡಿಕೊಂಡು ಬದುಕಿನಲ್ಲಿ ಬದಲಾವಣೆ ಮಾಡಿಕೊಳ್ಳಲು ಪ್ರಯತ್ನಿಸಿದ್ದೇವೆ. ನಾನು ಇಲ್ಲಿಗೆ ಬಂದಾಗ ಶ್ರೀಗಳು ಮಾತನಾಡುತ್ತಿದ್ದರು. ಮಾನವ ಧರ್ಮಕ್ಕೆ ಜಯವಾಗಲಿ, ವಿಶ್ವಕ್ಕೆ ಧರ್ಮದಿಂದ ಶಾಂತಿ ಸಿಗಲಿ ಎಂದು ಸಂದೇಶ ಸಾರಿದರು. ನಾನು ಗಂಟೆಗಟ್ಟಲೆ ಧರ್ಮದ ವಿಚಾರವಾಗಿ ಮಾತನಾಡಬಲ್ಲೆ. ನಮ್ಮ ಅನುಷ್ಠಾನ ಮಾಡುವಲ್ಲಿ ಮಠ ಕೆಲಸ ಮಾಡಿಕೊಂಡು ಬಂದಿದೆ ಎಂದು ಹೇಳಿದರು.

ಭಾರತೀತೀರ್ಥ ಮಹಾಸ್ವಾಮಿಗಳ ಪವಾಡ ಕಣ್ಣಾರೆ ಕಂಡಿದ್ದೇನೆ
ನಾನು ತಿರುಪತಿಗೆ ಹೋಗಿ ಮರಳುವಾಗ ನನ್ನ ಸ್ನೇಹಿತರು ಆದಿಕೇಶವಲು ಎಂಬುವವರ ಮನೆಗೆ ಭಾರತೀ ಶ್ರೀಗಳು ಹೋಗಿ ಅಲ್ಲಿ 2 ದಿನ ತಂಗಿದ್ದರು. ಅಲ್ಲಿ ದೇವಾಲಯದಲ್ಲಿ ಒಂದು ಹೂವಿನ ಹಾರ ಹಾಕಿದ್ದರು. 2 ದಿನಗಳ ನಂತರ ನಾನು ಕುಟುಂಬ ಸಮೇತರಾಗಿ ಹೋದಾಗ ಚಿತ್ತೂರಿನಲ್ಲಿ ಜನಸಾಗರವೇ ಸೇರಿತ್ತು. ಕಾರಣ ಅಲ್ಲಿ ಸ್ವಾಮೀಜಿಗಳು ಹಾಕಿದ್ದ ಹೂವಿನ ಹಾರ ಬೆಳೆಯುತ್ತಿತ್ತು. ಅದನ್ನು ನಾನು ಕಣ್ಣಾರೆ ಕಂಡಿದ್ದೆ. ಭಾರತೀ ಶ್ರೀಗಳ ಆ ಪವಾಡವನ್ನು ನಾನು ಕಣ್ಣಾರೆ ಕಂಡಿದ್ದೆ. ಅಷ್ಟು ದೊಡ್ಡ ಶಕ್ತಿ ಶಾರದ ಪೀಠದಲ್ಲಿದೆ ಎಂದರು.

ಯಾರ ಮಾತಿಗೂ ನಾವು ಅಂಜುವ ಅಗತ್ಯವಿಲ್ಲ. ನಾವು ಯಾರ ಅಣತಿಯಂತೆ ಇರುವುದು ಬೇಡ. ಯಾರನ್ನೂ ನಂಬಿ ನಾವು ಬದುಕುವುದು ಬೇಡ. ನಮ್ಮ ಜೀವನವನ್ನು ನಾವು ನಂಬೋಣ. ನಮ್ಮ ಧರ್ಮ, ದೇವರಲ್ಲಿ ವಿಶ್ವಾಸವಿಟ್ಟು ಬದುಕಿದಾಗ ಒಳ್ಳೆಯದಾಗುತ್ತದೆ. ಭಾರತೀ ಶ್ರೀಗಳು ಅನೇಕ ಶಿಷ್ಯಕೋಟಿಗಳನ್ನು ಬೆಳೆಸಿದ್ದಾರೆ, ವಿಧುಶೇಖರಭಾರತೀ ಸ್ವಾಮೀಜಿಗಳ ವಯಸ್ಸಿಗೆ ಅವರಲ್ಲಿರುವ ಪಾಂಡಿತ್ಯಕ್ಕೆ ನಾನು ಶರಣಾಗಿದ್ದೇನೆ. ಶ್ರೀಗಳ ಪಾದಗಳಿಗೆ ಸಾಷ್ಟಾಂಗ ನಮಸ್ಕಾರಗಳು. ಮುಂದಿನ ಐವತ್ತು ಅರವತ್ತು ವರ್ಷಗಳ ಕಾಲ ಈ ಮಠವನ್ನು ಇನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿ, ಧರ್ಮ ಕಾಪಾಡುವ ಕೆಲಸ ಮುಂದುವರಿಯಲಿ. ನಮ್ಮ ಸಂಸ್ಕೃತಿ ಈ ದೇಶದ ಆಸ್ತಿ. ಅದನ್ನು ಕಾಪಾಡುವ ಕೆಲಸ ಮಠದಿಂದ ಆಗಲಿ. ನಾನು ಕೂಡ ಶ್ರೀಗಳ ಭಕ್ತನಾಗಿ ಅವರ ಪಾದಗಳ ಮುಂದೆ ಕೂತಿದ್ದೇನೆ ಎಂದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!