130ಕ್ಕೂ ಅಧಿಕ ಸ್ಥಾನ ಗೆದ್ದು ಅಧಿಕಾರಕ್ಕೆ ಬರಲಿದ್ದೇವೆ: ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 
 
ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ.ಯಾರೂ ಏನೇ ಹೇಳಲಿ 130ಕ್ಕೂ ಅಧಿಕ ಸ್ಥಾನ ಗೆದ್ದು ಅಧಿಕಾರಕ್ಕೆ ಬರಲಿದ್ದೇವೆ ಎಂದುಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಪ್ರಚಾರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲಿ ಇಂಥ ಭ್ರಷ್ಟ ಸರ್ಕಾರ ನಾನು ಎಂದಿಗೂ ನೋಡಿಲ್ಲ. ವಿಧಾನಸೌಧದ ಗೋಡೆಗಳು ಕೂಡ ಲಂಚ, ಲಂಚ ಎಂದು ಪಿಸುಗುಡುತ್ತಿವೆ. ಬಸವರಾಜ ಬೊಮ್ಮಾಯಿಯಷ್ಟು ಭ್ರಷ್ಟ ಮುಖ್ಯಮಂತ್ರಿಯನ್ನು ನಾನು ನೋಡಿಲ್ಲ. ಈಗ ನನ್ನ ಹೇಳಿಕೆ ಟ್ವಿಸ್ಟ್ ಮಾಡಿದ್ದಾರೆ. ನನ್ನನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ‌. ನಾನು ಲಿಂಗಾಯತ ವಿರೋಧಿಯಲ್ಲ. ನಾನು ಲಿಂಗಾಯತರಿಗೆ ಅಪಾರ ಗೌರವ ನೀಡುತ್ತೇನೆ. ಲಿಂಗಾಯತರ ನಾಯಕರ ಬಗ್ಗೆಯೂ ಗೌರವ ಇದೆ ಎಂದರು.

2013ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ 165 ಭರವಸೆಗಳನ್ನು ಕೊಟ್ಟಿದ್ದೆವು. ಅದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಜತೆಗೆ 30 ಜನಪರ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ವಿಧಾನಸೌಧದಲ್ಲಿ ಲಂಚ ಹೊಡೆಯೋದು ಕಡಿಮೆ ಮಾಡಿ ಎಂದು ಯಡಿಯೂಪ್ಪ ಅವರಿಗೆ ಸಲಹೆ ಕೊಟ್ಟಿದ್ದೆ. ಆದರೆ, ಅವರು ಲಂಚ ಪಡೆಯೋದು ಕಡಿಮೆ‌ ಮಾಡಲಿಲ್ಲ. ಹಾಗಾಗಿ ಏಳು ಕೆಜಿ ಅಕ್ಕಿ ಬದಲಿಗೆ, ನಾಲ್ಕು ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಅವರು ಲಂಚ ಹೊಡೆಯೋದನ್ನು ಬಿಟ್ಟರೆ ಹತ್ತು ಕೆಜಿ ಅಕ್ಕಿ ಕೊಡಬಹುದು ಎಂದು‌ ಸದನದಲ್ಲೇ ಹೇಳಿಕೆ ನೀಡಿದ್ದೆ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಯಾರು ಎಷ್ಟೇ ವಿರೋಧ ಮಾಡಿದರೂ ಬಡವರ ಪರ ಕೆಲಸ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅಚ್ಛೇ ದಿನ್ ಆಯೆಗಾ ಅಂದ್ರು, ಅಚ್ಛೇ ದಿನ್ ಬಂತಾ? ಮೋದಿ ಅವರು ದೇಶದ ಜನಕ್ಕೆ ಯಾಕೆ ಸುಳ್ಳು ಹೇಳಿದರು. ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಅಂದರು. ಆದರೆ, ರೈತರು ಸಾಲ ದುಪ್ಪಟ್ಟಾಯ್ತು, ರೈತರ ಒಂದು ರೂಪಾಯಿ ಕೂಡ ಸಾಲ ಮನ್ನಾ ಮಾಡಲಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!