ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………
ಹೊಸ ದಿಗಂತ ವರದಿ, ಉಡುಪಿ:
ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ ದಾಖಲೆ ಪ್ರಮಾಣದಲ್ಲಿ ಸೋಂಕಿತರ ಪ್ರಮಾಣ ಏರಿಕೆಯಾಗಿದೆ. ಈ ದಿನ 1655 ಮಂದಿಗೆ ಸೋಂಕು ದೃಢವಾಗಿದ್ದು, ಮೂವರು ಸಾಂಕ್ರಾಮಿಕ ಸೋಂಕಿಗೆ ಬಲಿಯಾಗಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ಈವರೆಗೆ ಒಟ್ಟು 35365 ಮಂದಿಗೆ ಸೋಂಕು ಪತ್ತೆಯಾಗಿದೆ. ಹೊಸದಾಗಿ ಸೋಂಕು ದೃಢಪಟ್ಟವರಲ್ಲಿ 879 ಮಂದಿ ಉಡುಪಿ, 399 ಜನ ಕುಂದಾಪುರ, 371 ಮಂದಿ ಕಾರ್ಕಳ ತಾಲೂಕಿನವರಾಗಿದ್ದಾರೆ. ಏಳು ಮಂದಿಗೆ ಹೊರ ಜಿಲ್ಲೆಯವರು ಸೇರಿದ್ದಾರೆ. ಇವರಲ್ಲಿ 409 ಜನರಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೆ, ಉಳಿದವರಲ್ಲಿ ಲಕ್ಷಣಗಳು ಗೋಚರಿಸಿಲ್ಲ. ಸೋಂಕಿತರಲ್ಲಿ 48 ಮಂದಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಿಲ್ಲೆಯಲ್ಲಿ 206 ಸೋಂಕಿತರ ಸಾವು
ಬುಧವಾರ 433 ಮಂದಿ ಸೇರಿ, ಒಟ್ಟು 31233 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 3926 ಮಂದಿ ಸಕ್ರಿಯ ಸೋಂಕಿತರು ಜಿಲ್ಲೆಯಲ್ಲಿದ್ದಾರೆ. ಈ ದಿನ 81ವರ್ಷ ವಯಸ್ಸಿನ, 65ರ ಹರೆಯ ಮತ್ತು 53ರ ಹರೆಯದ ಮೂವರು ಪುರುಷರು ಆಸ್ಪತ್ರೆಗಳಲ್ಲಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಮೂವರಿಗೆ ಕೋವಿಡ್ ಸೋಂಕಿನ ತೀವ್ರತೆಯ ಜೊತೆಗೆ ಅನ್ಯ ಕಾಯಿಲೆಗಳು ಕೂಡ ಬಾಧಿಸಿದ್ದವು. ಇವರೊಂದಿಗೆ ಜಿಲ್ಲೆಯಲ್ಲಿ ಸೋಂಕು ತಗುಲಿದ 206 ರೋಗಿಗಳು ಮೃತಪಟ್ಟಂತಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಬಾಕಿ ಉಳಿದ ಪ್ರಕರಣಗಳು
ಒಂದೇ ದಿನದಲ್ಲಿ 1655 ಮಂದಿಗೆ ಸೋಂಕು ದೃಢಪಟ್ಟಿರುವುದು ಕಾಣಿಸಿದರೂ ಎಲ್ಲವೂ ಒಂದೇ ದಿನ ದೃಢಪಟ್ಟ ಪ್ರಕರಣಗಳಲ್ಲ. ಜಿಲ್ಲೆಯಲ್ಲಿ ಕಳೆದ ಏಳೆಂಟು ದಿನಗಳಿಂದ 650-700 ಪ್ರಕರಣಗಳು ಖಚಿತವಾಗುತ್ತಿವೆ. ಆದರೆ ಆರೋಗ್ಯ ಇಲಾಖೆಯ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಲಾಗದೇ ಮೂರು ದಿನಗಳಿಂದ ಕೆಲವು ಪ್ರಕರಣಗಳು ಬಾಕಿಯಾಗಿದ್ದವು. ಇನ್ನು ಕೆಲವು ಪ್ರಕರಣಗಳು ವಿಳಾಸ ದೃಢೀಕರಿಸುವುದು ಇತ್ಯಾದಿ ವಿಳಂಬದಿಂದಾಗಿ ಅಪ್ಲೋಡ್ ಮಾಡಲಾಗಿರಲಿಲ್ಲ. ಆದ್ಯತೆಯ ಮೇರೆಗೆ ಎಲ್ಲ ಪ್ರಕರಣಗಳನ್ನು ಇಂದು ಪೋರ್ಟಲ್ಗೆ ಅಪ್ಲೋಡ್ ಮಾಡಿರುವುದರಿಂದ ಒಂದೇ ದಿನ ಇಷ್ಟೊಂದು ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ ‘ಹೊಸದಿಗಂತ’ಕ್ಕೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರತಿನಿತ್ಯ 650-700 ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಮುಂದೆ 10-12 ದಿನಗಳ ಕಾಲ ಇದೇ ರೀತಿ ಸೋಂಕಿನ ಪ್ರಮಾಣ ಮುಂದುವರಿಯುವ ಸಾಧ್ಯತೆ ಇದೆ. ಆದ್ದರಿಂದ ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದು. ಅವಶ್ಯ ವಸ್ತುಗಳ ಖರೀದಿಗಾಗಿ ಹಾಗೂ ಅನಿವಾರ್ಯ ಸಂದರ್ಭಗಳಲ್ಲಿ ಹೊರಗೆ ಬಂದಾಗ ಕಡ್ಡಾಯ ಮಾಸ್ಕ್ ಧರಿಸಿ, ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.