ಹೊಸದಿಗಂತ ವರದಿ, ಶಿವಮೊಗ್ಗ:
ತಜ್ಞರ ಸಲಹೆ ಸೂಚನೆ ಆಧರಿಸಿ ವೀಕೆಂಡ್ ಕರ್ಫ್ಯೂ ವಿಧಿಸಲಾಗಿದೆ ವಿನಃ ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲವೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.
ಬುಧವಾರ ನಗರದಲ್ಲಿ ಆಯೋಜಿಸಿರುವ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಯಾರು ಏನು ಕಾರ್ಯಕ್ರಮ ಮಾಡುತ್ತಾರೆಂದು ನೋಡಿ ಕರ್ಫೂ ವಿಧಿಸಿಲ್ಲ. ಜನರ ಆರೋಗ್ಯ ದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದರು.
ಬೆಂಗಳೂರಿನಲ್ಲಿ ವಿಕೇಂಡ್ ಕರ್ಫ್ಯೂ ವಿಸ್ತರಣೆ ನಿರ್ಧಾರ ಸರಿಯಾಗಿದೆ. ಪ್ರತಿದಿನ ಸಾವಿರಾರು ಪ್ರಕರಣ ವರದಿಯಾಗುತ್ತಿದೆ. ಬೆಂಗಳೂರು ರೆಡ್ ಜ಼ೋನ್ ನಲ್ಲಿದೆ. ಹಾಗಾಗಿ ನಿಗಾ ವಹಿಸಲಾಗಿದೆ. ಎರಡನೇ ಅಲೆ ಬಂದಾಗ ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ದಕ್ಕೆ ಬೆಲೆ ತೆತ್ತಿದ್ದೇವೆ. ಎಲ್ಲರೂ ಈ ಬಗ್ಗೆ ಗಮನ ಹರಿಸದಿದ್ದರೆ ಬೆಲೆ ತೆತ್ತ ಬೇಕಾಗುತ್ತದೆ ಎಂದರು.
ಕೊರೋನ ತಡೆಗಟ್ಟಲು ಸರ್ಕಾರ ನಿಯಮ ರೂಪಿಸುತ್ತದೆ. ಪೊಲೀಸರು ನೋಡಿಕೊಳ್ಳುತ್ತಾರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತದೆ ಎಂದು ಕೊಂಡರೆ ಪರಿಸ್ಥಿತಿ ಹದಗೆಡುತ್ತದೆ. ಹಾಗಾಗಿ ಸರ್ಕಾರದ ಕ್ರಮಕ್ಕೆ ಎಲ್ಲರೂ ಸಹಕರಿಸಬೇಕು. ತಜ್ಞರೊಂದಿಗೆ ಚರ್ಚಿಸಿಯೇ ಸರ್ಕಾರ ಕ್ರಮ ತೆಗೆದುಕೊಂಡಿದೆ. ಹಾಗಾಗಿ ಕಾಂಗ್ರೆಸ್ಸಿಗರಿಗೆಂದೇ ಪ್ರತ್ಯೇಕ ನಿಯಮ ರೂಪಿಸಲು ಬರುವುದಿಲ್ಲ.
ಮತಾಂತರ ಕಾಯ್ದೆ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದರು.