ಕೊಡಗಿನಲ್ಲಿ ವೀಕೆಂಡ್ ಕಫ್ರ್ಯೂ ಅವೈಜ್ಞಾನಿಕ: ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟ ಅಸಮಾಧಾನ

ಹೊಸದಿಗಂತ ವರದಿ, ಕೊಡಗು:

ಕೋವಿಡ್ ಅತಿರೇಕವಿಲ್ಲದೆ ಸಹಜ ಸ್ಥಿತಿಯಲ್ಲಿರುವ ಕೊಡಗು ಜಿಲ್ಲೆಯಲ್ಲೂ ವೀಕೆಂಡ್ ಕಫ್ರ್ಯೂ ವಿಧಿಸಿರುವುದು ಅವೈಜ್ಞಾನಿಕ ಕ್ರಮವಾಗಿದೆ ಮತ್ತು ಜನರನ್ನು ಸಂಕಷ್ಟಕ್ಕೆ ಸಿಲುಕಿಸುವ ಆದೇಶವಾಗಿದೆ ಎಂದು ಕೊಡಗು ಜಿಲ್ಲಾ ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟ ಆರೋಪಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಅವರು, ವೀಕೆಂಡ್ ಕಫ್ರ್ಯೂಗೆ ನಮ್ಮ ಬೆಂಬಲವಿಲ್ಲ, ಪ್ರವಾಸೋದ್ಯಮಕ್ಕೆ ಅಡಚಣೆ ಉಂಟು ಮಾಡಿದರೆ ಹೋರಾಟ ರೂಪಿಸಲು ಸಿದ್ಧವೆಂದು ಎಚ್ಚರಿಕೆ ನೀಡಿದರು.
ಕಳೆದ 2 ವರ್ಷಗಳಿಂದ ಕೋವಿಡ್ ಲಾಕ್‍ಡೌನ್’ನಿಂದ ಕೊಡಗಿನ ಜನ ಮತ್ತು ಪ್ರವಾಸೋದ್ಯಮವನ್ನೇ ನಂಬಿ ಬದುಕು ಸಾಗಿಸುತ್ತಿರುವ ಸಣ್ಣ ವ್ಯಾಪಾರಿಗಳು, ಟ್ಯಾಕ್ಸಿ, ಆಟೋರಿಕ್ಷಾ ಮಾಲಕ, ಚಾಲಕರು ಹಾಗೂ ಹೋಟೆಲ್ ಉದ್ಯಮಿಗಳು ಆರ್ಥಿಕ ಹಿನ್ನಡೆಯನ್ನು ಅನುಭವಿಸಿದ್ದಾರೆ. ಎಲ್ಲರೂ ಸಂಕಷ್ಟದಲ್ಲಿದ್ದು, ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮತ್ತೆ ನಷ್ಟಕ್ಕೆ ದೂಡಿ ಸಾಲಗಾರರನ್ನಾಗಿ ಮಾಡಲು ವೀಕೆಂಡ್ ಕಫ್ರ್ಯೂನಂತಹ ಕ್ರಮಗಳನ್ನು ಸರಕಾರ ಕೈಗೊಂಡಿದೆ ಎಂದು ಟೀಕಿಸಿದರು.
ಕೊಡಗಿನಲ್ಲಿ ಸೋಂಕು ಅತಿಯಾಗಿ ವ್ಯಾಪಿಸದಿದ್ದರೂ ಕಫ್ರ್ಯೂ ಅನ್ವಯವಾಗುವಂತೆ ಮಾಡಿರುವುದು ಸರಿಯಲ್ಲ, ಜಿಲ್ಲಾಡಳಿತ ಇಲ್ಲಿನ ನೈಜ ಸ್ಥಿತಿಗತಿಯ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಿಕೊಡಬೇಕಾಗಿತ್ತು. ಇನ್ನು 3- 4 ತಿಂಗಳಿನಲ್ಲಿ ಮತ್ತೆ ಮಳೆಯ ವಾತಾವರಣ ಸೃಷ್ಟಿಯಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಆರ್ಥಿಕ ಚಟುವಟಿಕೆಯ ಕಾಲದಲ್ಲಿ ಇಲ್ಲಸಲ್ಲದ ನಿರ್ಬಂಧಗಳನ್ನು ಹೇರುವ ಮೂಲಕ ಸರಕಾರ ಜನ ಸಾಮಾನ್ಯರನ್ನು ಕಷ್ಟಕ್ಕೆ ದೂಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣ ವೀಕೆಂಡ್ ಕಫ್ರ್ಯೂವನ್ನು ಕೈಬಿಡಬೇಕು ಮತ್ತು ಪ್ರವಾಸೋದ್ಯಮಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ ಮಂಜುನಾಥ್ ಕುಮಾರ್, ಜಿಲ್ಲೆಯ ಪ್ರವಾಸೋದ್ಯಮ ಅವಲಂಬಿತರು ಕಫ್ರ್ಯೂ ನಿಯಮ ಪಾಲಿಸಲು ತಯಾರಿಲ್ಲವೆಂದರು.
ಪ್ರವಾಸೋದ್ಯಮದ ವಿರುದ್ಧ ಕ್ರಮಕ್ಕೆ ಮುಂದಾದರೆ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಉಪಾಧ್ಯಕ್ಷ ವರ್ಧನ್, ಖಜಾಂಚಿ ಪದ್ಮಾ ಮಧುಕುಮಾರ್, ಸಂಘಟನಾ ಕಾರ್ಯದರ್ಶಿ ನಾಣಿ ಹಾಗೂ ಪ್ರಮುಖರಾದ ಸದಾ ಮುದ್ದಪ್ಪ ಉಪಸ್ಥಿತರಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!