ಶರೀಫುಲ್ ತನ್ನ ಹೆಂಡತಿಯ ಕೈಯನ್ನೇ ಕತ್ತರಿಸಿದ್ದೇಕೆ? – ಹೀಗೊಂದು ವಿಕ್ಷಿಪ್ತ, ಬರ್ಬರ ಪ್ರಕರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಈಕೆಯ ಹೆಸರು ರೇಣುಕಾ ಖಾತುನ್.. ಎರಡು ವರ್ಷಗಳ ಹಿಂದೆ ಕೋಲ್ಕತ್ತಾದ ಆರ್‌ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ ನರ್ಸಿಂಗ್‌ ಪದವಿ ಪಡೆದುಕೊಂಡಿದ್ದ ರೇಣುಕಾ ದುರ್ಗಾಪುರದ ಸಣ್ಣ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಳು. ಕೆಲದಿನಗಳ ಹಿಂದೆ ಆಕೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಶುಶ್ರೂಷಕಿ ಕೆಲಸ ಸಿಕ್ಕಿತ್ತು. ಆಕೆ ಖುಷಿಯಿಂದಲೇ ಹೊಸ ಕೆಲಸಕ್ಕೆ ಸಿದ್ಧಳಾಗಿದ್ದಳು. ಈ ನಡುವೆ ರೇಣುಕಾ ಬಾಳಲ್ಲಿ ಘೋರ ದುರಂತವೊಂದು ನಡೆದುಹೋಗಿದೆ. ರೇಣುಕಾ ಸರ್ಕಾರಿ ಕೆಲಸಕ್ಕೆ ಸೇರಿದ ಮೇಲೆ ತನ್ನನ್ನು ತೊರೆಯಬಹುದು ಎಂದು ಶಂಕಿಸಿದ ಆಕೆಯ ಪತಿ ಶರೀಫುಲ್ ತನ್ನ ಇಬ್ಬರು ಸ್ನೇಹಿತರ ಜೊತೆಗೂಡಿ ಆಕೆಯ ಬಲಗೈಯ್ಯನ್ನೇ ಕತ್ತರಿಸಿ ಪೈಶಾಚಿಕತೆಯನ್ನು ಮೆರೆದಿದ್ದಾನೆ. ವಿಕೃತ ಮನಸ್ಥಿತಿಯ ವ್ಯಕ್ತಿಯನ್ನು ವಿವಾಹವಾದ ತಪ್ಪಿಗೆ ರೇಣುಕಾ ಬಾಳಿಡೀ ಪರಿತಪಿಸುವಂತಹ ಸ್ಥಿತಿ ಎದುರಾಗಿದೆ.
ಕಳೆದ ಶನಿವಾರ ಕೋಲ್ಕತ್ತಾದಿಂದ 170 ಕಿಮೀ ದೂರದಲ್ಲಿರುವ ಪೂರ್ವ ಬುರ್ದ್ವಾನ್‌ನ ಕೇತುಗ್ರಾಮ್ ಗ್ರಾಮದಲ್ಲಿ ಈ ಭಯಾನಕ ಘಟನೆ ನಡೆದಿದೆ. ರೇಣುಕಾ ಮೇಲೆ ಆಕೆಯ ಪತಿ ಸಂಶಯ ಹೊಂದಿದ್ದ. ಅವಳು ತನ್ನನ್ನು ತೊರೆಯದಂತೆ ಮಾಡಲು ಯೋಜನೆಯೊಂದನ್ನು ಹಾಕಿಕೊಂಡಿದ್ದ. ಒಂದೊಮ್ಮೆ ಆಕೆ ಶಾಶ್ವತವಾಗಿ ವಿಕಲಾಂಗಳಾದರೆ ತನ್ನನ್ನು ಬಿಟ್ಟುಹೋಗಲಾರಳು ಎಂದು ಆಲೋಚಿಸಿದ್ದ ಶರೀಫುಲ್ ಈ ಭೀಬತ್ಸ ಕೃತ್ಯ ಎಸಗಿದ್ದಾನೆ. ಅದಕ್ಕೂ ಕೆಲದಿನಗಳ ಮುನ್ನ ರೇಣುಕಾ ಪತಿಯೊಂದಿಗೆ ಜಗಳವಾಡಿಕೊಂಡು ತವರಿಗೆ ಹೋಗಿದ್ದಳು. ಆದರೆ ಶನಿವಾರ ಪತ್ನಿ ಮನೆಗೆ ಬಂದಿದ್ದ ಆತ ತನ್ನೊಂದಿಗೆ ಮರಳುವಂತೆ ಮನವೊಲಿಸಿದ್ದ. ಅಲ್ಲದೆ ತನ್ನ ಇಬ್ಬರು ಸ್ನೇಹಿತರನ್ನು ಮನೆಗೆ ಕರೆದು ಪತ್ನಿಗೆ ಔತಣಕೂಟವನ್ನು ಏರ್ಪಡಿಸಿದ್ದ.
ಪತ್ನಿಗೆ ತನ್ನ ಸಂಚಿನ ಕುರಿತಾಗಿ ಕೊಂಚವೂ ಅನುಮಾನ ಬಾರದಂತೆ ನೋಡಿಕೊಂಡಿದ್ದ. ರೇಣುಕಾ ಮಲಗಿದ್ದ ವೇಳೆ ಸ್ನೇಹಿತರೊಂದಿಗೆ ದಾಳಿ ನಡೆಸಿದ ಆತ ಆಕೆಯ ತಲೆಯನ್ನು ದಿಂಬಿನಿಂದ ಒತ್ತಿಹಿಡಿದು, ಆಕೆಯ ಬಲಗೈಯನ್ನು ಸುತ್ತಿಗೆಯಿಂದ ಛಿದ್ರಗೊಳಿಸಿ ಬಳಿಕ ಹರಿತವಾದ ಆಯುಧದಿಂದ ಮಣಿಕಟ್ಟಿನವರೆಗೆ ಕತ್ತರಿಸಿಹಾಕಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ  ರೇಣುಕಾರನ್ನು ನೆರೆಹೊರೆಯವರು ಮತ್ತು ಅಕೆಯ ಸಹೋದರ ಕತ್ತರಿಸಿದ ಮಣಿಕಟ್ಟಿನೊಂದಿಗೆ ಹೆಚ್ಚಿನ ಚಿಕಿತ್ಸೆಗೆ ಅಲ್ಲಿಂದ 115 ಕಿಮೀ ದೂರದಲ್ಲಿರುವ ದುರ್ಗಾಪುರದ ಐಕ್ಯೂ ಸಿಟಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗಾಗಲೆ ಕೈ ಮರುಸ್ಥಾಪನೆ ಶಸ್ತ್ರಚಿಕಿತ್ಸೆಗೆ ತಡವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಭಾನುವಾರ ರೇಣುಕಾ ಅವರ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಆಕೆಯ ಪತಿ ಶರೀಫುಲ್, ಆತನ ಪೋಷಕರು ಮತ್ತು ಅವರ ಇಬ್ಬರು ಸ್ನೇಹಿತರಿಗಾಗಿ ಹುಡುಕಾಟ ಆರಂಭಿಸಿದ್ದಾರೆ, ಅವರೆಲ್ಲರೂ ತಲೆಮರೆಸಿಕೊಂಡಿದ್ದಾರೆ. ಹೊಸ ಕೆಲಸಕ್ಕೆ ಸೇರಿ ಭವಿಷ್ಯದ ಬಗ್ಗೆ ನಾನಾ ಕನಸು ಕಂಡಿದ್ದ ಯುವತಿಯ ಬಾಳಿನಲ್ಲಿ ಮಾತ್ರ ಗಾಢ ಅಂಧಕಾರ ಕವಿದಿದೆ. ಶರೀಫುಲ್ ನ ಬಣ್ಣದ ಮಾತುಗಳ ಹಿಂದೆ ಅವಿತಿದ್ದ ಕ್ರೂರ ಮನಸ್ಥಿತಿಯನ್ನು ಅರ್ಥೈಸಿಕೊಳ್ಳದೆ ಆತನ ಹಿಂದೆ ಹೊರಟ ರೇಣುಕಾ ಇಂದು ಬಲಗೈಯನ್ನು ಕಳೆದುಕೊಂಡು ದಾರುಣ ಸ್ಥಿತಿಯನ್ನು ಎದುರಿಸುವಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!