ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಮಹತ್ವದ ತೀರ್ಮಾನಗಳೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಇಂದು ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು, ಇಲ್ಲಿ ಕೆಲವೊಂದು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಕಾನೂನು ಸಚಿವ ಮಾಧುಸ್ವಾಮಿ, 23 ಸಾವಿರ ಕೋಟಿ ರೂಪಾಯಿಯ ಪರಿಷ್ಕೃತ ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆಗೆ ಸಂಪುಟ ಸಭೆಯಲ್ಲಿ ಸಮ್ಮತಿ ಸಿಕ್ಕಿದೆ. ಯೋಜನೆ ಆರಂಭವಾದಾಗ 15 ಸಾವಿರ ಕೋಟಿ ಅಂದಾಜು ಮಾಡಲಾಗಿತ್ತು. ಆದರೆ ಈಗ 23 ಸಾವಿರ ಕೋಟಿಗೆ ಬಂದು ನಿಂತಿದೆ. ಯೋಜನೆಗೆ ಸಂಬಂಧಿಸಿದ 99% ಟೆಂಡರ್​ಗಳು ನೀಡಲಾಗಿದೆ ಎಂದರು.

ಇನ್ನು ಬಳ್ಳಾರಿ ವಿಮ್ಸ್​ ಆಸ್ಪತ್ರೆಗೆ 108 ಕೋಟಿ ರೂ. ಅನುದಾನ ನೀಡಿದ್ದು, 2ನೇ ಹಂತದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಹಣಕಾಸು ವೆಚ್ಚ ನೀಡಲಾಗಿದೆ. ಅದೇ ರೀತಿ ಕೊಪ್ಪಳ ಜಿಲ್ಲೆ ಯಲಬುರ್ಗಾದಲ್ಲಿ ಅಂದಾಜು 15 ಕೋಟಿ ವೆಚ್ಚದಲ್ಲಿ ನ್ಯಾಯಾಲಯ ನಿರ್ಮಾಣ ಮಾಡಲಾಗುವುದು. ಬೆಳಗಾವಿ, ಧಾರವಾಡ, ಕಲಬುರಗಿ ಜಿಲ್ಲೆಗಳಲ್ಲಿ 1,000 ಬೆಡ್​ಗಳುಳ್ಳ ನೂತನ ಹಾಸ್ಟೆಲ್ ನಿರ್ಮಾಣ ಮಾಡಲಾಗುವುದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಸತ್ತೂರು ಗ್ರಾಮದಲ್ಲಿ ವಸತಿ ಯೋಜನೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಸತ್ತೂರಿನಲ್ಲಿ 258 ಎಕರೆಯಲ್ಲಿ ನಿವೇಶನಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ನಾರಾಯಣಪುರ ಉಪಕಾಲುವೆ ನಿರ್ಮಾಣ. ದೇವದುರ್ಗದ ಬಳಿ ಆರು ಕಾಲುವೆ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಸೇಡಂ-ಚಿಂಚೋಳಿಯಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ 13.82 ಕೋಟಿ ರೂಪಾಯಿ ಅನುದಾನ ನೀಡಲು ತೀರ್ಮಾನ. ತುಂಗಾ ನದಿಗೆ ಹೊಸ ಸೇತುವೆ ನಿರ್ಮಿಸಲು ಸಂಪುಟ ಒಪ್ಪಿದ್ದು, ಇದಕ್ಕಾಗಿ 25.6 ಕೋಟಿ ರೂ. ಅನುದಾನ ನೀಡಲು ತೀರ್ಮಾನಿಸಲಾಗಿದೆ. ಲಾನ್ ಟೆನಿಸ್ ಅಸೋಸಿಯೇಷನ್‌ಗೆ ತಿಮ್ಮಸಂದ್ರದಲ್ಲಿ 7 ಎಕರೆ ಭೂಮಿ ನೀಡಲು ಸಂಪುಟ ಸಭೆ ನಿರ್ಧಾರ ಮಾಡಿದೆ ಎಂದರು.

ವಿದ್ಯುತ್ ಕಂಪನಿಗಳ ನಷ್ಟ ಭರಿಸಲು ಸಂಪುಟ ಸಭೆ ನಿರ್ಧರಿಸಿದ್ದು, ಸರ್ಕಾರದಿಂದ 8,064 ಕೋಟಿ ರೂಪಾಯಿ ಹಣಕಾಸು ನೆರವು ನೀಡಲಾಗುತ್ತಿದೆ. ಅಮೃತ ಸ್ವಾಭಿಮಾನ ಯೋಜನೆ ಅನುಷ್ಠಾನಕ್ಕೆ ಯೋಜನೆಯಡಿ 92 ಕೋಟಿ ರೂ. ಸಹಾಯಧನ ಘೋಷಣೆ ಮಾಡಲಾಗಿದೆ. ಕೆಇಬಿಗೆ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯಲು ಖಾತರಿಯಾಗಿದ್ದು, 3,000 ಕೋಟಿ ಸಾಲ ಪಡೆಯಲು ರಾಜ್ಯ ಸರ್ಕಾರ ಖಾತರಿ ಪಡಿಸಿದೆ. ಪ್ರತಿ ಕುರಿಗಾಹಿ 20 ಕುರಿ ಸಾಕಲು ಅವಕಾಶವಿದ್ದು, ಕುರಿಗಾಹಿಗಳಿಗೆ 1 ಲಕ್ಷ 70 ಸಾವಿರ ಸಹಾಯಧನ ನೀಡಲಾಗುತ್ತೆ. ಬಿಎಂಟಿಸಿಗೆ 921 ಹೊಸ ಎಲೆಕ್ಟ್ರಿಕ್ ಬಸ್ ಖರೀದಿಗೆ ಒಪ್ಪಿಗೆ ಸೂಚಿಸಿದ್ದು, ಕೇಂದ್ರದ ಸಹಾಯಧನ ನೆರವಿನಲ್ಲಿ ಎಲೆಕ್ಟ್ರಿಕ್ ಬಸ್ ಖರೀದಿಸಲಾಗುವುದು ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ಒಲಿಂಪಿಕ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌, ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ವಿಜೇತರಿಗೆ ಸರ್ಕಾರದಿಂದ ನೇರ ನೇಮಕಾತಿಗೆ ನಿರ್ಧರಿಸಲಾಗಿದೆ. ಎ, ಬಿ, ಸಿ ಗ್ರೂಪ್‌ನಡಿ ಉದ್ಯೋಗ ನೀಡಲು ತಿರ್ಮಾನಿಸಲಾಗಿದೆ. ಇನ್ನು ಅದೇ ರೀತಿಯಾಗಿ 42 ಕೈದಿಗಳ ಬಿಡುಗಡೆಗೆ ರಾಜ್ಯಪಾಲರಿಗೆ ಶಿಫಾರಸಿಗೆ ನಿರ್ಧಾರ ಮಾಡಲಾಗಿದೆ. ಗಣರಾಜ್ಯೋತ್ಸವ ಹಿನ್ನೆಲೆ ಸನ್ನಡತೆ ಆಧಾರದಲ್ಲಿ ಕೈದಿಗಳ ರಿಲೀಸ್‌ ಮಾಡಲಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!