ಗುಜರಾತ್ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಕೊಡುತ್ತಿರುವ ಒಳನೋಟವೇನು?

ಹೊಸ ದಿಗಂತ ಡಿಜಿಟಲ್ ವಿಶ್ಲೇಷಣೆ

ಪ್ರಧಾನಿ ನರೇಂದ್ರ ಮೋದಿಯವರು ಹಿಂದೆ ಮುಖ್ಯಮಂತ್ರಿಯಾಗಿದ್ದ ರಾಜ್ಯ ಎಂಬ ಕಾರಣಕ್ಕೆ ಗುಜರಾತಿನ ಚುನಾವಣೆಗಳು ರಾಜಕೀಯವಾಗಿ ಸ್ವಲ್ಪ ಹೆಚ್ಚಿನ ಗಮನವನ್ನೇ ಸೆಳೆಯುತ್ತ ಬಂದಿವೆ. ಈ ಬಾರಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಯಾವುದೇ ನೆಲದಲ್ಲಿ ಎರಡು ದಶಕಗಳಿಗಿಂತ ಹೆಚ್ಚು ಕಾಲ ಪಕ್ಷವೊಂದು ಆಡಳಿತದಲ್ಲಿದೆ ಎಂದಾದಾಗ ಸಹಜವಾಗಿಯೇ ಅದಕ್ಕೆ ಸವಾಲು ಎದುರಾಗುತ್ತದೆ. ವಿಶೇಷ ಕಾರಣವಿರದಿದ್ದರೂ ಒಮ್ಮೆ ಬದಲಾಯಿಸಿ ನೋಡೋಣ ಎಂಬ ಮನೋಭಾವ ಮತದಾರರಲ್ಲಿ ಬಂದರೆ ಅಧಿಕಾರ ಕಳೆದುಕೊಳ್ಳುವುದಕ್ಕಷ್ಟೇ ಸಾಕು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ತನ್ನನ್ನು ಗುಜರಾತಿನಲ್ಲಿ ಪರ್ಯಾಯ ಎಂದು ಬಿಂಬಿಸಿಕೊಂಡು ಕಣಕ್ಕೆ ಇಳಿದಿದೆ.

ಈ ಸವಾಲನ್ನು ಗುಜರಾತಿನಲ್ಲಿ ಬಿಜೆಪಿ ಎದುರಿಸುತ್ತಿರುವ ಬಗೆ ಯಾವುದು? ಗುರುವಾರ ಬಿಡುಗಡೆ ಆಗಿರುವ 160 ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಇದಕ್ಕೆ ಉತ್ತರ ಹೇಳುತ್ತಿದೆ. ಯಾವೆಲ್ಲ ಸೆಲಿಬ್ರಿಟಿಗಳಿಗೆ ಟಿಕೆಟ್ ಸಿಕ್ಕಿದೆ ಎಂಬುದು ಈ ಪಟ್ಟಿ ಹೊರಬಂದ ನಂತರ ಚರ್ಚೆ ಆಗುತ್ತಿದೆ, ಆದರೆ ಯಾರಿಗೆ ಸಿಗಲಿಲ್ಲ ಎಂಬುದರಲ್ಲೇ ಬಿಜೆಪಿ ಹೇಗೆ ಆಡಳಿತ ವಿರೋಧಿ ಭಾವವನ್ನು ಎದುರಿಸಲಿದೆ ಎಂಬುದಕ್ಕೆ ಉತ್ತರವಿದೆ.

ಬರೋಬ್ಬರಿ 38 ಶಾಸಕರಿಗೆ ಟಿಕೆಟ್ ನಿರಾಕರಿಸಿರುವ ಬಿಜೆಪಿ ಅಲ್ಲೆಲ್ಲ ಹೊಸಮುಖಗಳನ್ನು ಇಳಿಸಿದೆ. ಗುಜರಾತಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಇದೇ ಮಾದರಿ ಅನುಸರಿಸುತ್ತ ಬರುತ್ತಿದೆ ಬಿಜೆಪಿ. ಇಲ್ಲಿನ ತರ್ಕವೇನೆಂದರೆ, ಗುಜರಾತಿನಲ್ಲಿ ಯಾವುದೇ ನೀತಿಯ ಕುರಿತಾದ ಬಹುದೊಡ್ಡ ಆಡಳಿತ ವಿರೋಧಿ ಅಲೆಯೇನೂ ಇಲ್ಲ. ಅಲ್ಲಿ ಇರಬಹುದಾದ ಆಡಳಿತ ವಿರೋಧಿ ಭಾವನೆಗಳೇನಿದ್ದರೂ ತಮ್ಮ ನಿರ್ದಿಷ್ಟ ಪ್ರತಿನಿಧಿ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ ಎಂಬುದರ ಬಗ್ಗೆ. ಹೀಗಿರುವಾಗ, ಶಾಸಕ ಸ್ಥಾನಕ್ಕೇ ಹೊಸಮುಖ ಬರುವುದಾದರೆ ಮತದಾರನ ಅಸಮಾಧಾನ ಕಡಿಮೆಯಾಗುತ್ತದೆ. ಹೊಸಬರಿಗೆ ಅವಕಾಶ ಕೊಡೋಣ ಎಂಬ ಭಾವವೂ ಜಾಗೃತವಾಗುತ್ತದೆ.

ಉದಾಹರಣೆಗೆ, ತೂಗುಸೇತುವೆ ಹರಿದುಬಿದ್ದು ಸಾವುನೋವು ಸಂಭವಿಸಿದ ಮೊರ್ಬಿಯಲ್ಲಿ ಹಾಲಿ ಬಿಜೆಪಿ ಶಾಸಕನಿಗೆ ಟಿಕೆಟ್ ಸಿಕ್ಕಿಲ್ಲ. ಬದಲಿಗೆ, ಸೇತುವೆ ಬಿದ್ದ ಸಂದರ್ಭದಲ್ಲಿ ಅಲ್ಲಿಹೋಗಿ ರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆಂದು ಪ್ರಚಾರವಾಗಿರುವ ಮಾಜಿ ಶಾಸಕರೊಬ್ಬರಿಗೆ ಈ ಬಾರಿ ಅಲ್ಲಿಂದ ಟಿಕೆಟ್ ಸಿಕ್ಕಿದೆ. ಹೀಗಾಗಿ ಮೊರ್ಬಿ ಘಟನೆ ನಂತರ ಸ್ಥಳೀಯ ಬಿಜೆಪಿ ವಿರುದ್ಧ ಇದ್ದಿರಬಹುದಾದ ಜನರ ಆಕ್ರೋಶ-ಅಸಮಾಧಾನಗಳು ತುಸು ತಗ್ಗಿಬಿಡುತ್ತವೆ.

ಗುಜರಾತ್ ಮುಖ್ಯಮಂತ್ರಿ ಪದವಿಯಿಂದ ನರೇಂದ್ರ ಮೋದಿ ದೆಹಲಿ ಗದ್ದುಗೆಗೆ ನಿರ್ಗಮಿಸಿದ ನಂತರ ಗುಜರಾತಿನ ಮುಖ್ಯಮಂತ್ರಿ ಸ್ಥಾನದಲ್ಲಿ ಹಲವರು ಬಂದು ಬದಲಾಗಿರುವುದರ ಹಿಂದೆಯೂ, ಜನರಿಗೆ ಆಗಾಗ ಬದಲಾವಣೆಗಳನ್ನು ಕೊಟ್ಟು ಸಮಾಧಾನ ಮಾಡುವ ಕಾರ್ಯತಂತ್ರ ಇರುವಂತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!