ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಒಂದು ಅಲ್ಪಸಂಖ್ಯಾತ ಸಮುದಾಯಕ್ಕೆ ಬಿರಿಯಾನಿ ನೀಡಿದ್ದಾರೆ. ಉಳಿದ ಅಲ್ಪಸಂಖ್ಯಾತ ಸಮುದಾಯಗಳಿಗೆ ಉಪ್ಪಿನಕಾಯಿ ಕೊಟ್ಟು ಚಪ್ಪರಿಸಿಕೊಳ್ಳಿ ಎಂದು ಹೇಳಿದ್ದಾರೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿಂದು ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇಂತಹ ಬಜೆಟ್ ಕೊಟ್ಟವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಸಿದ್ದರಾಮಯ್ಯ ಅವರ ಹದಿನಾರನೇ ಬಜೆಟ್ ಎಂದು ಎಲ್ಲರೂ ಹೇಳಿದ್ದಾರೆ. ಅದನ್ನು ದಾಖಲೆ ಎಂದು ಹೊಗಳುತ್ತಿದ್ದಾರೆ. ಆದರೆ, ಮುಸ್ಲಿಮರಿಗೆ ಹದಿನಾರು ಕಾರ್ಯಕ್ರಮಗಳನ್ನು ಕೊಟ್ಟು ತಮ್ಮ ನಿರ್ದಿಷ್ಟ ಕಾರ್ಯಸೂಚಿ ಏನು ಎಂಬುದನ್ನು ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಸಮಾಜವನ್ನು ಹೇಗೆ ಒಡೆಯಬೇಕು ಎಂಬುದನ್ನು ಅವರು ಕಣ್ಣಿಗೆ ಕಟ್ಟುವಂತೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಬಜೆಟ್ ಕೇವಲ ಘೋಷಣೆಗಳಿಗೆ ಸೀಮಿತವಾದ ಪುಸ್ತಕ. ಬಜೆಟ್ನಲ್ಲಿ ಕೇವಲ ಒಂದು ಸಮುದಾಯದ ತುಷ್ಟೀಕರಣ ಮಾಡಲಾಗಿದೆ. ಬಹುಸಂಖ್ಯಾತ ಸಮುದಾಯಗಳನ್ನು ತುಚ್ಛೀಕರಣ ಮಾಡಿದ್ದಾರೆ. ಇದು ಯಾವ ರೀತಿಯ ಸಾಮಾಜಿಕ ನ್ಯಾಯ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.