Tuesday, August 16, 2022

Latest Posts

ಕೋವಿಡ್ ಬಿಕ್ಕಟ್ಟಿನಲ್ಲೂ ಜನರಲ್ಲಿ ವಿಶ್ವಾಸದ ಬದಲು ಭೀತಿ ಹರಡುವ ಉದ್ದೇಶ ಏನು: ವಿಪಕ್ಷಕ್ಕೆ ಯೋಗಿ ಪ್ರಶ್ನೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………….

ಹೊಸ ದಿಗಂತ ಆನ್ ಲೈನ್ ಡೆಸ್ಕ್

ಕೋವಿಡ್ ಬಿಕ್ಕಟ್ಟಿನಲ್ಲಿರುವಾಗ ನೀವು ಜನರು ಮತ್ತು ಆರೋಗ್ಯ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಮೂಡಿಸುವ ಬದಲು ಭೀತಿ -ಹತಾಶೆ ಹರಡುತ್ತಿರುವ ಉದ್ದೇಶವೇನು ಎಂಬುದಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿರೋಧಪಕ್ಷಗಳನ್ನು ಪ್ರಶ್ನಿಸಿದ್ದಾರೆ.
ಆರೋಗ್ಯ ಕಾರ್ಯಕರ್ತರು ಮತ್ತು ಜನರಲ್ಲೀಗ ಆತ್ಮಸ್ಥೈರ್ಯಮತ್ತು ಆತ್ಮವಿಶ್ವಾಸ ಮೂಡಿಸಬೇಕಾದುದು ಅಗತ್ಯ. ಇದರಿಂದಲೇ ಈ ಸಂಕಟದಿಂದ ಮೇಲೆದ್ದು ಬರಲು ಸಾಧ್ಯವಿದೆ.ಆದರೆ ದುರದೃಷ್ಟವಶಾತ್ ವಿರೋಧಪಕ್ಷಗಳು ದುರುದ್ದೇಶಪೂರ್ವಕವಾಗಿ ಜನರಲ್ಲಿ ಮತ್ತು ಆರೋಗ್ಯ ಕಾರ್ಯಕರ್ತರಲ್ಲಿ ಭೀತಿ ಮತ್ತು ಹತಾಶೆಯನ್ನು ಹರಡುತ್ತಿವೆ. ಜನರು ಭೀತಿಯುಕ್ತ ಸ್ಥಿತಿಯಿಂದ ಮೇಲೆದ್ದು ಬರಲು ಅವರಿಗೆ ನೈತಿಕ ಬಲ ನೀಡದೆ ಈ ರೀತಿ ಭೀತಿ ಮೂಡಿಸಲಾಗುತ್ತಿದೆ.ಇಂತಹ ಭೀತಿ ಹರಡಿದ್ದರಿಂದಾಗಿಯೇ ಜನರು ರೆಮ್ಡಿಸಿವರ್ ಮತ್ತು ಆಕ್ಸಿಜನ್‌ಗಾಗಿ ಮುಗಿಬೀಳುವಂತಾಯಿತು.ಇದರಿಂದ ಅಗತ್ಯವಿರುವವರಿಗೆ ಇವು ಲಭಿಸದೆ ಅನ್ಯಾಯವಾಗಿ ಸಾವುಗಳು ಸಂಭವಿಸುವಂತಾಯಿತು. ವಿಪಕ್ಷಗಳ ಇಂತಹ ಹೀನ ರಾಜಕೀಯ ಅಕ್ಷಮ್ಯ . ಆದಾಗ್ಯೂ ದೇವರ ದಯೆಯಿಂದ ಜನರು ಮಾತ್ರ ಸಹಕಾರ ನೀಡಿದ್ದರಿಂದ ಇದೀಗ ಪರಿಸ್ಥಿತಿ ಪೂರ್ಣ ನಿಯಂತ್ರಣಕ್ಕೆ ಬರುತ್ತಿದೆ ಎಂದು ಯೋಗಿ ತಿಳಿಸಿದರು. ಅವರು ಉತ್ತರಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿಯ ಖುದ್ದು ಅಧ್ಯಯನಕ್ಕಾಗಿ ಜನರ ಭೇಟಿ ನಡೆಸುತ್ತಿದ್ದಾರೆ.
ಇದು ಬಿಜೆಪಿ ಲಸಿಕೆ, ಇದರ ವಿಶ್ವಾಸಾರ್ಹತೆ ಮತ್ತು ಪರಿಣಾಮ ಶಂಕಾರ್ಹ ಎಂದೆಲ್ಲ ,ಕೋವಿಡ್ ಲಸಿಕೆಯ ವಿರುದ್ಧ ವಿರೋಧಪಕ್ಷಗಳು ಅಪನಂಬಿಕೆ ಹುಟ್ಟಿಸುವ ರೀತಿಯಲ್ಲಿ ಪ್ರಚಾರ ನಡೆಸಿದ್ದರಿಂದ ಜನರು ಲಸಿಕೆ ಪಡೆಯಲು ಹಿಂಜರಿಕೆ ವ್ಯಕ್ತಪಡಿಸಿದ್ದರು. ಅಲ್ಲದೆ ಲಸಿಕೆ ತೆಗೆದುಕೊಂಡರೆ ಮಕ್ಕಳಾಗುವುದಿಲ್ಲ ಎಂಬಿತ್ಯಾದಿ ಸುಳ್ಳು ಪ್ರಚಾರ ನಡೆಸಿ, ಮುಸ್ಲಿಂ ಸಮುದಾಯದಲ್ಲಿ ತಪ್ಪು ತಿಳುವಳಿಕೆ ಮೂಡಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಉತ್ತರಪ್ರದೇಶದಲ್ಲಿ ಈವರೆಗೆ 4.50ಕೋಟಿ ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 1.5ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಇದೀಗ ರಾಜ್ಯದಲ್ಲಿ 18ರಿಂದ ೪೪ವರ್ಷ ಪ್ರಾಯದವರಿಗೂ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಿದೆ ಎಂದ ಅವರು, ಈಗ ೩ನೇ ಅಲೆ ಮತ್ತು ಬ್ಲ್ಯಾಕ್ ಫಂಗಸ್ ನಂತಹ ಎರಡು ಸಂಭವನೀಯ ಅಪಾಯಗಳ ಬಗ್ಗೆ ಜನತೆ ಕಟ್ಟೆಚ್ಚರ ವಹಿಸಬೇಕಾಗಿದೆ ಎಂದರು.
ಮೂರನೇ ಅಲೆಯಲ್ಲಿ ಮಕ್ಕಳಿಗೆ ಅಪಾಯವಿದೆ ಎಂದು ಎಚ್ಚರಿಸಲಾಗಿರುವುದನ್ನು ಉಲ್ಲೇಖಿಸಿದ ಅವರು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಮಕ್ಕಳ ತೀವ್ರ ನಿಗಾ ಘಟಕ(ಐಸಿಯು)ಗಳನ್ನು ಹಾಗೂ ಆಕ್ಸಿಜನ್ ಸ್ಥಾವರಗಳನ್ನು ಸ್ಥಾಪಿಸಲು ಸರ್ವ ಯತ್ನಗಳನ್ನು ಮಾಡಲಾಗುತ್ತಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss