ಹೊಸದಿಗಂತ ವರದಿ, ವಿಜಯಪುರ:
ಸಂವಿಧಾನ ರಕ್ಷಣೆ ಮಾಡುವುದು ಕಾಂಗ್ರೆಸ್ ಸರ್ಕಾರ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದಾರೆ. ಆದರೆ ಕಾಂಗ್ರೆಸ್ನವರು ಅಂಬೇಡ್ಕರ್ ಅವರನ್ನು ಸೋಲಿಸಲು ಕಾರಣವೇನು ಎಂಬುದು ಖರ್ಗೆ ಅವರಿಗೆ ಕೇಳಬೇಕಿತ್ತು ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.
ಜಿಲ್ಲೆಯ ಸಿಂದಗಿ ತಾಲೂಕಿನ ಮೋರಟಗಿ ಗ್ರಾಮದಲ್ಲಿ ಉಪ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ನಿನ್ನೆ ಮೊನ್ನೆ ಕಾಂಗ್ರೆಸ್ ನಾಯಕರು ಈ ಗ್ರಾಮಕ್ಕೆ ಬಂದು ಹೋಗಿದ್ದಾರೆ. ಬಾಬು ಜಗಜೀವನ ರಾಮ್ ಅವರನ್ನು ಕುತಂತ್ರದಿಂದ ಸೋಲಿಸಿದ್ದರಲ್ಲ ಕಾಂಗ್ರೆಸ್ನವರಿಗೆ ಅದನ್ನು ಕೇಳಬೇಕಿತ್ತು ಎಂದರು.
ಪ್ರಧಾನಿ ಮೋದಿ ಅವರು ದೀನ ದಲಿತರಿಗಾಗಿ ಸಾಕಷ್ಟು ಯೋಜನೆಗಳನ್ನು ತಂದಿದ್ದಾರೆ ಎಂದು ಹೇಳಿದರು.
ಸಿಂದಗಿ ಉಪ ಚುನಾವಣೆಯಲ್ಲಿ ನಮ್ಮ ವಿರುದ್ಧ ಇಬ್ಬರು ಅಭ್ಯರ್ಥಿಗಳು ಇದ್ದಾರೆ. ಅವರು ಗೆದ್ದರೆ ಸರ್ಕಾರದ ಭಾಗವಾಗುವುದಿಲ್ಲ. ನಮ್ಮ ಅಭ್ಯರ್ಥಿ ರಮೇಶ ಭೂಸನೂರ ಗೆದ್ದರೆ ಮಾತ್ರ ಸರ್ಕಾರದ ಭಾಗವಾಗುತ್ತಾರೆ. ಈ ನಿಟ್ಟಿನಲ್ಲಿ ಮತದಾರರು ಭೂಸನೂರ ಅವರಿಗೆ ಆಶೀರ್ವದಿಸಬೇಕು ಎಂದು ಕೋರಿದರು.