ಹೊಸದಿಗಂತ ಡಿಜಿಟಲ್ ಡೆಸ್ಕ್:
ಏನಾದರು ತೀರ್ಮಾನ ಮಾಡುತ್ತಾರಾ ಅಂತ ವಿಜಯದಶಮಿ ತನಕ ನೋಡುತ್ತೇನೆ.ನಾನು ಟೆಕ್ನಿಕಲಿ ಹಾಗೂ ಮೆಂಟಲಿ ಎರಡೂ 100% ಜೆಡಿಎಸ್‌ನಲ್ಲಿ ಇದ್ದೇನೆ. ನಾನೇ ಅಧ್ಯಕ್ಷ ಅಂತ ಹೇಳಿದ್ದೇನೆ. ನನ್ನನ್ನು ಅಧ್ಯಕ್ಷ ಸ್ಥಾನದಿಂದ ತೆಗೆಯೋಕೆ ಆಗಲ್ಲ ಎಂದು ಅವರಿಗೆ ಗೊತ್ತಿದೆ ಎಂದು ಸಿಎಂ ಇಬ್ರಾಹಿಂ (CM Ibrahim) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು,26ರ ನಂತರ ಕಾನೂನು ಹೋರಾಟದ ಬಗ್ಗೆ ತೀರ್ಮಾನ ಮಾಡುತ್ತೇನೆ. ದೇವೇಗೌಡರ (HD Deve Gowda) ಮೇಲೆ ನನಗೆ ಭರವಸೆ ಇದೆ. ಆದರೆ ಕುಮಾರಸ್ವಾಮಿ (HD Kumaraswamy) ಅವರ ಮೇಲೆ ನನಗೆ ಭರವಸೆ ಇಲ್ಲ ಎಂದರು.
ನನ್ನನ್ನು ಅಧ್ಯಕ್ಷ ಸ್ಥಾನದಿಂದ ವಿಸರ್ಜನೆ ಮಾಡೋಕೆ ಬರೋದಿಲ್ಲ, ಆಗೋದೆ ಇಲ್ಲಾ. ಒಡೆದು ಆಮ್ಲೆಟ್ ಮಾಡೋದಿಕ್ಕೆ ಇದೇನು ಕೋಳಿ ಮೊಟ್ಟೆನೇನ್ರಿ? ಅದು ಎಲೆಕ್ಟೆಡ್ ಬಾಡಿ. ಎಲೆಕ್ಟೆಡ್ ಬಾಡಿ ತೆಗೆಯಬೇಕಾದರೆ ಅದಕ್ಕೆ ಪ್ರೊಸೀಜರ್ ಇದೆ. ನಾವು ರೂಲ್ಸ್ ಪ್ರಕಾರ ಪಾರ್ಟಿ ನಡೆಸಬೇಕೆ ಹೊರತು ನನ್ನ ಇಚ್ಛೆ ಪ್ರಕಾರ ಪಾರ್ಟಿ ನಡೆಸಲು ಆಗಲ್ಲ. ಕೋರ್ ಕಮಿಟಿ ಜಿ.ಟಿ.ದೇವೇಗೌಡರನ್ನು ದೇವೇಗೌಡರು ನೇಮಕ ಮಾಡಿದ್ದಲ್ಲ. ನಾನು ಮಾಡಿದ್ದು. ಜನತಾದಳದಲ್ಲಿ ರಾಜ್ಯದ ಅಧಿಕಾರ ರಾಜ್ಯದ ಅಧ್ಯಕ್ಷರಿಗೆ ಇರುತ್ತೆ. ರಾಜ್ಯದ ಅಧ್ಯಕ್ಷರು ಸಂವಿಧಾನಕ್ಕೆ ವಿರುದ್ಧ ಹೋದರೆ 2/3 ಮೆಂಬರ್ಸ್ ಕೈಯಲ್ಲಿ ನೋಟಿಸ್ ಕೊಟ್ಟು ಮೀಟಿಂಗ್ ಕರೆದು ಮೀಟಿಂಗ್‌ನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿ ಆಮೇಲೆ ತೆಗೆಯಬೇಕು ಎಂದು ಹೇಳಿದರು.
ನಿರ್ಧಾರ ಮರುಪರಿಶೀಲನೆ ಮಾಡಿ ಎಂದು ದೇವೇಗೌಡರಿಗೆ ಕೈ ಮುಗಿದು ಮನವಿ ಮಾಡುತ್ತೇನೆ. ಕೇರಳ ಸಿಎಂ ಸ್ಟೇಟ್‌ಮೆಂಟ್ ನೋಡಿ ಮನಸ್ಸಿಗೆ ನೋವಾಯಿತು. ಇವತ್ತು ಉದಯಪುರಕ್ಕೆ ಹೋಗುತ್ತಿದ್ದೇನೆ. 25ಕ್ಕೆ ವಾಪಾಸ್ ಬಂದು 26ಕ್ಕೆ ಬಾಂಬೆಗೆ ಹೋಗುತ್ತೇನೆ. 27ಕ್ಕೆ ಕೇರಳ ಜೆಡಿಎಸ್ ನಾಯಕರ ಸಭೆ ನಡೆಸುತ್ತೇನೆ. ಇವತ್ತು ರಾಜ್ಯದಲ್ಲಿ ನಾವು ಯಾವ ಸಿದ್ಧಾಂತಕ್ಕಾಗಿ ನಿಂತಿದ್ದೇವೆ. ದೇವೇಗೌಡರು ಆ ಸಿದ್ಧಾಂತಕ್ಕಾಗಿ ನಿಲ್ಲಬೇಕು ಅನ್ನೋದೆ ನಮ್ಮ ಇಚ್ಛೆ. ಬೇರೆ ಬೇರೆ ರಾಜ್ಯದ ಜೆಡಿಎಸ್ (JDS) ನಾಯಕರನ್ನು, ಬೇರೆ ಪಕ್ಷದ ನಾಯಕರನ್ನು ಭೇಟಿ ಮಾಡುತ್ತೇನೆ. ನಾನು ಕೂತ ಕಡೆ ಕೂರಲ್ಲ, ತ್ರಿಲೋಕ ಸಂಚಾರಿ ಎಂದರು.
ದೇವೇಗೌಡರನ್ನು ಪ್ರಧಾನ ಮಂತ್ರಿ ಮಾಡಿದ್ದು ಹೇಗೆ ಅಂತ ಅವರಿಗೆ ಗೊತ್ತಿದೆ. 95ರಲ್ಲಿ ಜನತಾದಳ ನಾನು ಕಟ್ಟಿದ್ದು. ಹೇಗೆ ಅಂತ ಅವರಿಗೆ ಗೊತ್ತಿದೆ. ಅವರಿಗೇನೂ ಹೊಸ ಅನುಭವ ಅಲ್ಲ. ಆದರೆ ಏನು ಮಾಡೋದು ಕುಮಾರಸ್ವಾಮಿ ಅವರ ಒತ್ತಡ. ಕುಮಾರಸ್ವಾಮಿ ಅವರು ನನ್ನ ಸಹೋದರ ಇದ್ದ ಹಾಗೆ. ಅವರಿಗೂ ಹೇಳುತ್ತೇನೆ. ದಯವಿಟ್ಟು ಬೇಡ, ಚಿಂತನೆ ಮಾಡಿ. ಬಂಡವಾಳವೇ ನನ್ನ ಕೈಯಲ್ಲಿ ಇರುವಾಗ ರಾಜ್ಯಾಧ್ಯಕ್ಷ ಪದವಿ ಯಾವ ಲೆಕ್ಕಾ ಎಂದು ಹೇಳಿದರು.
ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ದುಷ್ಟ ಶಕ್ತಿಗಳ ಸಂಹಾರ ಆಗಲಿ. ಶಿಷ್ಟ ಶಕ್ತಿಗಳು ಭಾರತದಲ್ಲಿ ತಲೆ ಎತ್ತಲಿ. ಕಾಂಗ್ರೆಸ್ ಸೇರಿದಂತೆ ಎಲ್ಲಾ ಕಡೆಯಿಂದ ಕಾಲ್ ಬರುತ್ತಿದೆ. ಸಿದ್ದರಾಮಯ್ಯ ಅವರು ನನಗೆ ಕಾಲ್ ಮಾಡಿಲ್ಲ. ನಾನು ಸಿದ್ದರಾಮಯ್ಯ ಅವರಿಗೆ ಕಾಲ್ ಮಾಡಲು ಹೋಗಲಿಲ್ಲ. ಅಮಿತ್ ಶಾ, ಮೋದಿ ಬಗ್ಗೆ ನನಗೆ ವೈಯುಕ್ತಿಕವಾಗಿ ಗೌರವ ಇದೆ. ಆದರೆ ನಮ್ಮ ಸಿದ್ಧಾಂತ ಬೇರೆ ಬೇರೆ ಎಂದು ಸ್ಪಷ್ಟನೆ ನೀಡಿದರು.