ಶಿಕ್ಷಣ ಕೇಸರೀಕರಣದಲ್ಲಿ ತಪ್ಪೇನು? ಪಾಶ್ಚಾತ್ಯ ಶಿಕ್ಷಣ ಪದ್ಧತಿಯು ನಮ್ಮ ಸಂಪ್ರದಾಯ, ಸಂಸ್ಕೃತಿ ಕಡೆಗಣಿಸಿದೆ: ವೆಂಕಯ್ಯ ನಾಯ್ಡು

ಹರಿದ್ವಾರ: ದೇಶದ ಶಿಕ್ಷಣ ವ್ಯವಸ್ಥೆಯನ್ನು ಕೇಸರೀಕರಣ ಮಾಡಲಾಗುತ್ತಿದೆ ಎಂದು ನಮ್ಮ ಮೇಲೆ ಆರೋಪಿಸಲಾಗುತ್ತಿದೆ. ಆದರೆ ಕೇಸರೀಕರಣದಲ್ಲಿ ಯಾವ ತಪ್ಪು ಇದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಶ್ನಿಸಿದ್ದಾರೆ.
ಉತ್ತರಾಖಂಡದ ಹರಿದ್ವಾರದಲ್ಲಿನ ದೇವ್ ಸಂಸ್ಕೃತಿ ವಿಶ್ವ ವಿದ್ಯಾಲಯದಲ್ಲಿ ದಕ್ಷಿಣ ಏಷ್ಯಾ ಶಾಂತಿ ಹಾಗೂ ಸಮನ್ವಯತೆ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ವೆಂಕಯ್ಯ ನಾಯ್ಡು, ಸರ್ವೇ ಜನಾ ಸುಖಿನೋ ಭವಂತು ಮತ್ತು ವಸುದೈವ ಕುಟುಂಬಕಂ, ಇವು ನಮ್ಮ ಪುರಾತನ ಪಠ್ಯಗಳಲ್ಲಿ ಇದ್ದ ತತ್ವಗಳು. ಇವು ಇಂದಿಗೂ ಭಾರತದ ವಿದೇಶಾಂಗ ನೀತಿಯ ಮಾರ್ಗದರ್ಶಿ ತತ್ವಗಳಾಗಿವೆ ಎಂದು ಹೇಳಿದರು.
ಇದೇ ವೇಳೆ ಶತಮಾನಗಳ ವಸಾಹತುಶಾಹಿ ಆಡಳಿತವು ನಮ್ಮನ್ನು ಕೀಳು ಜನಾಂಗ ಎಂದು ನೋಡಿಕೊಳ್ಳುವಂತೆ ನಮಗೆ ಕಲಿಸಿದೆ. ನಮ್ಮದೇ ಸಂಸ್ಕೃತಿ, ಸಾಂಪ್ರದಾಯಿಕ ವಿವೇಕವನ್ನು ತಿರಸ್ಕರಿಸುವಂತೆ ಕಲಿಸಲಾಗಿದೆ. ಇದು ದೇಶವಾಗಿ ನಮ್ಮ ಪ್ರಗತಿಯನ್ನು ನಿಧಾನಗೊಳಿಸಿತು. ಶಿಕ್ಷಣದ ಮಾಧ್ಯಮವಾಗಿ ವಿದೇಶಿ ಭಾಷೆಯನ್ನು ಹೇರಿಕೆ ಮಾಡಿರುವುದು, ದೇಶದ ವಿಶಾಲ ಜನಸಂಖ್ಯೆಯನ್ನು ಶಿಕ್ಷಣದ ಹಕ್ಕಿನಿಂದ ವಂಚಿತರನ್ನಾಗಿಸಿ ಉಳ್ಳವರಿಗೆ ಅಥವಾ ಸಣ್ಣ ವರ್ಗಕ್ಕೆ ಮಾತ್ರ ಶಿಕ್ಷಣವನ್ನು ಸೀಮಿತಗೊಳಿಸಿದೆ ಎಂದು ಹೇಳಿದರು.
ಅಲ್ಲದೆ ತಮ್ಮ ಸ್ವಂತ ಅಸ್ಮಿತೆಯ ಬಗ್ಗೆ ಹೆಮ್ಮೆ ಪಡುವುದನ್ನು ಕಲಿಯಬೇಕು ಎಂದು ಹೇಳಿರುವ ಅವರು,
ಭಾರತದ 75ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮೆಕಾಲೆ ಶಿಕ್ಷ ವ್ಯವಸ್ಥೆಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು‌ಕರೆ ನೀಡಿದರು.
ನಾವು ನಮ್ಮ ಪರಂಪರೆ, ಸಂಸ್ಕೃತಿ, ನಮ್ಮ ಪೂರ್ವಜರ ಬಗ್ಗೆ ಹೆಮ್ಮೆ ಪಡಬೇಕು. ನಮ್ಮ ಬೇರುಗಳಿಗೆ ಹಿಂದಿರುಗಬೇಕು. ನಾವು ನಮ್ಮ ವಸಾಹತುಶಾಹಿ ಮನಸ್ಥಿತಿಯನ್ನು ತ್ಯಜಿಸಬೇಕು ಮತ್ತು ತಮ್ಮ ಭಾರತೀಯ ಅಸ್ಮಿತೆಯಲ್ಲಿ ಹೆಮ್ಮೆ ಪಡೆಯುವಂತೆ ನಮ್ಮ ಮಕ್ಕಳಿಗೆ ಕಲಿಸಬೇಕು. ನಾವು ಎಷ್ಟು ಸಾಧ್ಯವೋ ಅಷ್ಟು ಭಾರತೀಯ ಭಾಷೆಗಳನ್ನು ಕಲಿಯಬೇಕು. ನಾವು ನಮ್ಮ ಮಾತೃಭಾಷೆಯನ್ನು ಪ್ರೀತಿಸಬೇಕು. ನಮ್ಮ ಶಾಸನಗಳ ಬಗ್ಗೆ ತಿಳಿಯಲು ನಾವು ಸಂಸ್ಕೃತವನ್ನು ಕಲಿಯಬೇಕು. ಇವೆಲ್ಲವೂ ಜ್ಞಾನದ ಖಜಾನೆಗಳಾಗಿವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!