ಗೂಗಲ್, ಹೊಂಡಾ, ಬೋಯಿಂಗ್ ಥರದ ಜಾಗತಿಕ ದೈತ್ಯ ಕಂಪನಿಗಳನ್ನು ಕಟ್ಟೋಕೆ ಭಾರತ ಮಾಡಬೇಕಿರೋದು ಏನು? – ವೆಂಬು ವಿಶ್ಲೇಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮೇಕ್ ಇನ್‌ ಇಂಡಿಯಾ, ಆತ್ಮನಿರ್ಭರ ಭಾರತದಂತಹ ಪರಿಕಲ್ಪನೆಗಳ ಮೂಲಕ ಭಾರತವು ಜಾಗತಿಕವಾಗಿ ʼಉತ್ಪಾದನಾ ಕೇಂದ್ರʼವಾಗ ಹೊರಟಿದೆ. ರಕ್ಷಣೆ, ಬಾಹ್ಯಾಕಾಶ, ನವೀಕರಿಸಬಹುದಾದ ಇಂಧನ ಕ್ಷೇತ್ರ, ತಂತ್ರಜ್ಞಾನ ಕ್ಷೇತ್ರ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಉತ್ಪಾದನೆ ಹೆಚ್ಚಿಸುವ ಮೂಲಕ ಜಗತ್ತಿಗೆ ಅತಿದೊಡ್ಡ ಪೂರೈಕೆದಾರನಾಗುವ ಕನಸು ಭಾರತದ್ದು. ಜಾಗತಿಕ ಪೂರೈಕೆ ಸರಪಳಿಯಲ್ಲಿ ನಿರ್ಣಾಯಕ ಸ್ಥಾನ ಪಡೆಯುವತ್ತ ಭಾರತ ಮುನ್ನುಗ್ಗುತ್ತಿರೋ ಈ ಹೊತ್ತಲ್ಲಿ ಜಾಗತಿಕವಾಗಿ ದೈತ್ಯ ಕಂಪನಿಗಳನ್ನು ಕಟ್ಟು ನಿಲ್ಲಿಸೋದು ಹೇಗೆ ಎಂಬುದಕ್ಕೆ, ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡೇ ʼಜೋಹೋʼ ಎಂಬ ಜಾಗತಿಕ ಮಟ್ಟದ ಕಂಪನಿಯೊಂದನ್ನು ಕಟ್ಟಿನಿಲ್ಲಿಸುವಲ್ಲಿ ಸಫಲರಾದ ಭಾರತದ ಯಶಸ್ವೀ ಉದ್ಯಮಿಗಳ ಸಾಲಿನಲ್ಲಿರುವ ಶ್ರೀಧರ ವೆಂಬು ವಿಶ್ಲೇಷಣೆ ಮಾಡಿದ್ದಾರೆ. ಗೂಗಲ್, ಹೊಂಡಾ, ಬೋಯಿಂಗ್ ಥರದ ಜಾಗತಿಕ ದೈತ್ಯ ಕಂಪನಿಗಳನ್ನು ಕಟ್ಟೋಕೆ ಭಾರತ ಮಾಡಬೇಕಿರೋದು ಏನು ಎಂಬುದನ್ನ ಅವರು ತಮ್ಮ ವಿಶ್ಲೇಷಣೆಯಲ್ಲಿ ವಿವರಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಶ್ರೀಧರ ವೆಂಬು ಅವರು Apple, Google, Pfizer, Samsung, Honda, Boeing, Siemens, TSMC ಅಥವಾ Huaweiನಂತಹ ಕಂಪನಿಗಳನ್ನು ಕಟ್ಟಲು ಭಾರತ ಮಾಡಬೇಕಿರೋದೇನು ಎಂಬುದನ್ನು ವಿವರಿಸಿದ್ದು ಅವುಗಳಲ್ಲಿ ಮೊದಲನೇಯ ಅಂಶವೆಂದರೆ ಜಾಗತಿಕ ದೈತ್ಯ ಕಂಪನಿಗಳೇಕೆ ಬೇಕು ಎನ್ನುವುದು. ಈ ಪ್ರಶ್ನೆಗೆ ಅವರು ನೀಡಿರೋ ಉತ್ತರ ಹೀಗಿದೆ. “ಇಂತಹ ಕಂಪನಿಗಳು ಆತಿಥೇಯ ದೇಶಗಳಿಗೆ ಅತ್ಯಂತ ಮುಖ್ಯವಾದದ್ದಾಗಿದೆ. ಏಕೆಂದರೆ ಅವುಗಳು ಆಧುನಿಕ ಜೀವನ ಮತ್ತು ದೇಶದ ಅಭಿವೃದ್ಧಿಗೆ ಅಗತ್ಯವಿರೋ ಸುಧಾರಿತ ಜ್ಞಾನ,  ಸಂಶೋಧನೆ ಮತ್ತು ಅಭಿವೃದ್ಧಿ (R&D) ಸಾಮರ್ಥ್ಯಗಳನ್ನು ಹೆಚ್ಚಿಸುತ್ತವೆ. ಇಂತಹ ಕಂಪನಿಗಳಲ್ಲಿ ಅತ್ಯಂತ ನಿರ್ಣಾಯಕ ಸಂಶೋಧನೆ ಮತ್ತು ಅಭಿವೃದ್ಧಿಗಳು ಸಂಭವಿಸುತ್ತವೆ. ಅಲ್ಲದೇ ಇವುಗಳು ಆತಿಥೇಯ ದೇಶಗಳಿಗೆ ಹೆಚ್ಚಿನ ತೆರಿಗೆ ಪಾವತಿಸುವ ಮೂಲಕ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡುತ್ತವೆ.

ಇನ್ನು ಎರಡನೇಯದು ಈ ಕಂಪನಿಗಳನ್ನು ಹುಟ್ಟುಹಾಕಬೇಕೆಂದರೆ ಮುಖ್ಯವಾಗಿ ಏನು ಮಾಡಬೇಕು ಎಂಬುದನ್ನು ಅವರು ವಿವರಿಸಿದ್ದು “ಭಾರತವು ಅಂತಹ ಕಂಪನಿಗಳನ್ನು ನಿರ್ಮಿಸಲು, ಭಾರತೀಯ ಖಾಸಗಿ ವಲಯವು ಆರ್ & ಡಿಯಲ್ಲಿ ಹೆಚ್ಚು ಹೂಡಿಕೆ ಮಾಡಬೇಕು. ಸರ್ಕಾರವು ಆರ್ & ಡಿಯಲ್ಲಿ ಹೂಡಿಕೆ ಮಾಡಲು ಕಂಪನಿಗಳನ್ನು ಪ್ರೋತ್ಸಾಹಿಸಬೇಕು ಮತ್ತು ಮನವೊಲಿಸಬೇಕು. ಕೈಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿಯು ಶೈಕ್ಷಣಿಕ ಸಂಶೋಧನೆಯಂತಲ್ಲ. ಅವುಗಳ ಮೇಲಿನ ಹೂಡಿಕೆ ಅಗಾಧ ಲಾಭ ತಂದುಕೊಡುತ್ತೆ. ಇವು ದೇಶದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತವೆ. ನಾವು 30ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗಬೇಕೆಂದರೆ ಖಾಸಗಿ ವಲಯದ R & D ಕಾರ್ಯಗಳನ್ನು ಹೆಚ್ಚಿಸಬೇಕು” ಎಂದಿದ್ದಾರೆ. ಈ ವಲಯದಲ್ಲಿ ಹೂಡಿಕೆ ಹೆಚ್ಚಿಸಿದರೆ ಅದಕ್ಕೆ ಅಗತ್ಯವಿರುವ ನುರಿತ ಉದ್ಯೋಗಿಗಳೂ ಕೂಡ ಬಂದೇ ಬರುತ್ತಾರೆ. ಇದರಿಂದ ಪ್ರತಿಭಾ ಪಲಾಯನವನ್ನೂ ತಡೆಯಬಹುದು. ಭಾರತ ಈ ನಿಟ್ಟಿನಲ್ಲಿ ಇನ್ನೂ ಸಾಧಿಸಬೇಕಿರೋದು ಬಹಳಷ್ಟಿದೆ. ಭಾರತೀಯ ಖಾಸಗಿ ವಲಯವು ಆರ್ & ಡಿಯಲ್ಲಿ ಸಾಕಷ್ಟು ಹೂಡಿಕೆ ಮಾಡುತ್ತಿಲ್ಲ. ನಾವು ಆರ್ & ಡಿ ಚಾಲಿತ ಸಂಸ್ಕೃತಿ ಮತ್ತು ಮಾನಸಿಕ ಅಭ್ಯಾಸಗಳನ್ನು ಕಂಪನಿಗಳಲ್ಲಿ ಸೃಷ್ಟಿಸಿಲ್ಲ. ಅದನ್ನು ಸೃಷ್ಟಿಸಿದರೆ ಖಂಡಿತವಾಗಿಯೂ ಗೂಗಲ್, ಹೊಂಡಾ, ಬೋಯಿಂಗ್ ಥರದ ಜಾಗತಿಕ ದೈತ್ಯ ಕಂಪನಿಗಳನ್ನು ಕಟ್ಟಲು ಸಾಧ್ಯವಿದೆ” ಎನ್ನುವುದು ಅವರ ಈ ವಿಶ್ಲೇಷಣೆಯ ಒಟ್ಟಾರೆ ಸಾರಾಂಶ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!