ಯುಪಿ ಕಾಂಗ್ರೆಸ್ ಅಭ್ಯರ್ಥಿ ಅರ್ಚನಾ ಗೌತಮ್ ಗೆ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ ಧೈರ್ಯದ ಮಾತುಗಳೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಚುನಾವಣೆ ಕಣ ರಂಗೇರಿದ್ದು, ರಾಜಕೀಯ ಪಕ್ಷಗಳು ಗೆಲುವಿಗೆ ರಣತಂತ್ರ ರೂಪಿಸುತ್ತಿದೆ. ಇದರ ಭಾಗವಾಗಿ ಈಗಾಗಲೇ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಅದರಂತೆ ಸದ್ಯ ಎಲ್ಲೆಡೆ ವೈರಲ್ ಆಗಿರುವ ಸುದ್ದಿ ಹಸ್ತಿನಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಡೆಲ್ ಮತ್ತು ನಟಿ ಅರ್ಚನಾ ಗೌತಮ್ ಆಯ್ಕೆ.
ಹೌದು, ಅರ್ಚನಾ ಗೌತಮ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಅವರ ಮಾಜಿ ‘ಮಿಸ್ ಬಿಕಿನಿ ಇಂಡಿಯಾ’ ಆಗಿದ್ದ ಅವರ ಮಾದಕ ಫೋಟೋಗಳು ಸಾಮಾಜಿಕ ತಾಣದಲ್ಲಿ ಹರಿದಾಡಿ ವೈರಲ್ ಆಗಿದ್ದು,. ಅವಹೇಳನಕಾರಿ ಕಾಮೆಂಟ್‌ಗಳಿಂದ ವ್ಯಾಪಕವಾಗಿ ಟೀಕಿಸಲಾಗಿತ್ತು.
ಆದರೆ ಯಾವುದೇ ಟೀಕೆಗೆ ತಲೆಕೆಡಿಸದೆ ಚುನಾವಣೆ ಸ್ಪರ್ದಿಸುವಂತೆ ಅರ್ಚನಾ ಗೌತಮ್ ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಧೈರ್ಯದ ಮಾತುಗಳನ್ನು ಹೇಳಿದ್ದಾರೆ. ಈ ಮೂಲಕ ಭಯಪಡಬೇಡಿ, ಚುನಾವಣೆ ಎದುರಿಸಿ ಎಂದು ಸ್ಪೂರ್ತಿ ಮಾತುಗಳನ್ನಾಡಿದ್ದಾರೆ.
ಪಶ್ಚಿಮ ಉತ್ತರ ಪ್ರದೇಶದ ಬಹುಪಾಲು ಗ್ರಾಮೀಣ ಭಾಗದ ಸಂಪ್ರದಾಯವಾದಿ ಮತದಾರರಿರುವ ಕ್ಷೇತ್ರದಲ್ಲಿ 26 ವರ್ಷದ ಅರ್ಚನಾ ತಮ್ಮ ಮೊದಲ ರಾಜಕೀಯ ಅಗ್ನಿ ಪರೀಕ್ಷೆಗೆ ಇಳಿದಿದ್ದಾರೆ.
‘ಗ್ರೇಟ್ ಗ್ರ್ಯಾಂಡ್ ಮಸ್ತಿ’ ಮತ್ತು ‘ಹಸೀನಾ ಪಾರ್ಕರ್’ ನಂತಹ ಚಲನಚಿತ್ರಗಳಲ್ಲಿ ನಟಿಸಿದ ಅರ್ಚನಾ ಕಳೆದ ವರ್ಷ ನವೆಂಬರ್‌ನಲ್ಲಿ ಕಾಂಗ್ರೆಸ್‌ಗೆ ಸೇರಿದ್ದರು. 2018 ರ ಮಿಸ್ ಬಿಕಿನಿ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತರಾಗಿರುವ ಹಿನ್ನೆಲೆ ಅವರನ್ನು ರಾಜಕೀಯ ಪ್ರತಿಸ್ಪರ್ಧಿಗಳು ಟ್ರೋಲ್ ಮಾಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರ್ಚನಾ ಗೌತಮ್, ನಾನು ಪ್ರಿಯಾಂಕಾ ದೀದಿಯೊಂದಿಗೆ ಮಾತನಾಡಿದಾಗ, ಅವರು ನನಗೆ ಹೇಳಿದರು, ‘ಅರ್ಚನಾ, ನೀವು ಈ ಜಗತ್ತಿಗೆ ಕಾಲಿಡುತ್ತಿದ್ದೀರಿ ಆದರೆ ಅರೆಮನಸ್ಸಿನಿಂದ ಬರಬೇಡಿ. ನಿಮ್ಮ ಚಿತ್ರಗಳು ಮತ್ತು ವಿಡಿಯೋಗಳಿಂದಾಗಿ ಟ್ರೋಲಿಂಗ್ ಇರುತ್ತದೆ. ಆದರೆ ನೀವು ಭಯಪಡುವ ಅಗತ್ಯವಿಲ್ಲ, ನೀವು ದೃಢವಾಗಿ ಉಳಿಯಬೇಕು ಎಂದಿದ್ದಾರೆ. ನಾನು ಈಗಾಗಲೇ ಪ್ರಿಯಾಂಕಾ ಅವರ ಮಾತುಗಳಿಂದ ಧೈರ್ಯಶಾಲಿಯಾಗಿದ್ದೇನೆ ಮತ್ತು ನನ್ನನ್ನು ತಡೆಯಲು ಆಗುವುದಿಲ್ಲ ಎಂದು ಹೇಳಿದರು.
ನನ್ನ ತಂದೆ ಒಬ್ಬ ರೈತ, ನನ್ನ ತಾಯಿ ಗೃಹಿಣಿ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಾನು ಭಾರತವನ್ನು ಪ್ರತಿನಿಧಿಸಿದ್ದಕ್ಕಾಗಿ ಜನರು ಹೆಮ್ಮೆಪಡಬೇಕು ಎಂದು ಟೀಕಾಕಾರರಿಗೆ ಅರ್ಚನಾ ತಿರುಗೇಟು ನೀಡಿದ್ದಾರೆ.
ನನ್ನ ಬಗ್ಗೆ ನಿಂದನೆ ಮತ್ತು ಅಸಭ್ಯ ಹೇಳಿಕೆಗಳನ್ನು ನೀಡುವವರು, ನಾನು ಎರಡು ವೃತ್ತಿಪರ ಜೀವನವನ್ನು ಹೊಂದಿದ್ದೇನೆ ಮತ್ತು ಎರಡೂ ಪರಸ್ಪರ ಭಿನ್ನವಾಗಿದೆ ಎಂದು ಹೇಳಲು ಬಯಸುತ್ತೇನೆ. ನಾನು ನನ್ನ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ್ದೇನೆ ಎಂದು ಅರ್ಚನಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!