Tuesday, August 16, 2022

Latest Posts

ಯಾರೀ ಈಟಾಲ ರಾಜೇಂದರ್? ತೆಲಂಗಾಣದಲ್ಲಿ ಬಿಜೆಪಿಯೇಕೆ ಇವರ ಗೆಲುವಿಂದ ಉಬ್ಬಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವೆಂಬರ್ 2ರಂದು ಹೊರಬಿದ್ದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 13 ಉಪಚುನಾವಣೆ ಫಲಿತಾಂಶದ ಪೈಕಿ ಬಿಜೆಪಿಗೆ ಎಚ್ಚರಿಕೆಯೂ ಇದೆ, ಕೆಲವು ಆಶಾಭಾವದ ಸೂಚನೆಯೂ ಇದೆ.
ರಾಜಸ್ಥಾನ, ಪಶ್ಚಿಮ ಬಂಗಾಳ ಹಾಗೂ ಹಿಮಾಚಲಗಳಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದೆ.

ಅಲ್ಲೆಲ್ಲ ಬಿಜೆಪಿ ಪಾಳಯದಲ್ಲಿ ರಾಜ್ಯ ನಾಯಕತ್ವದ ಕೊರತೆ ಇರುವುದು ಆದರೆ ಆಶಾಭಾವದ ಸೂಚನೆ ಸಿಕ್ಕಿರುವುದು ತೆಲಂಗಾಣದಲ್ಲಿ. ಅದು ಕೇವಲ ಒಂದು ಗೆಲುವಿನ ಕತೆಯೇ ಆಗಿದ್ದಿರಬಹುದಾದರೂ ಆ ರಾಜ್ಯಕ್ಕೆ ಬಿಜೆಪಿ ಪರವಾಗಿ ನಾಯಕನೊಬ್ಬ ಸಿಕ್ಕಿರುವುದು ಗಮನೀಯ ಅಂಶ.

ಬಿಜೆಪಿ ನಾಯಕ ಈಟಾಲ ರಾಜೇಂದರ್ ಅವರು ಸತತ ಏಳನೇ ಬಾರಿಗೆ ತೆಲಂಗಾಣದ ಹುಜೂರಾಬಾದ್ ವಿಧಾನಸಭಾ ಸ್ಥಾನವನ್ನು ಗೆದ್ದಿದ್ದಾರೆ. ರಾಜೇಂದರ್ ಅವರು ತೆಲಂಗಾಣ ರಾಷ್ಟ್ರ ಸಮಿತಿಯ ಗೆಲ್ಲು ಶ್ರೀನಿವಾಸ್ ಯಾದವ್ ಅವರನ್ನು 23,855 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಈಟಾಲ ರಾಜೇಂದರ್ ಅವರು ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿಯಿಂದಲೇ ಬಿಜೆಪಿಗೆ ಬಂದಿರುವ ವ್ಯಕ್ತಿ. ಈ ಹಿಂದಿನ ಅವರ ಗೆಲುವೆಲ್ಲ ಟಿ ಆರ್ ಎಸ್ ಪಕ್ಷದಲ್ಲಿದ್ದಾಗ ಆಗಿದ್ದು. ಆದರೆ ಪಕ್ಷ ಬದಲಿಸಿದರೂ ಭಾರಿ ಅಂತರದಿಂದಲೇ ಗೆದ್ದಿದ್ದಾರೆ ಎಂಬಂಶವೇ ಇವರು ಮುಂಬರುವ ದಿನಗಳಲ್ಲಿ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರಿಗೆ ಸ್ಪರ್ಧೆ ಒಡ್ಡಬಹುದೆಂಬ ನಿರೀಕ್ಷೆ ಹುಟ್ಟಿಸಿದೆ.

ತೆಲಂಗಾಣದ ಪಾಲಿಗೆ ಈಟಾಲ ಅವರು ಹಿಮಂತ ಬಿಸ್ವ ಸರ್ಮ ಅವರಂತೆ ಆದಾರಾ ಎಂಬುದು ಈಗಿನ ಕೌತುಕದ ಪ್ರಶ್ನೆ. ಏಕೆಂದರೆ, ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಗೆ ಬೇರೂರುವುದಕ್ಕೆ ಸಾಧ್ಯವಾಗಿದ್ದು, ಹಿಮಂತ ಬಿಸ್ವ ಸರ್ಮ ಅವರು ಕಾಂಗ್ರೆಸ್ಸಿಗೆ ವಿದಾಯ ಹೇಳಿ ಬಿಜೆಪಿ ಸೇರಿದ ನಂತರವಷ್ಟೇ.

ಈಟಾಲ ರಾಜೇಂದರ್ ಈ ಹಿಂದೆ ಟಿ ಆರ್ ಎಸ್ ನ ಚಂದ್ರಶೇಖರ ಅವರ ಜತೆ ಪ್ರಭಾವಿ ಹುದ್ದೆಯಲ್ಲಿದ್ದವರು. ರಾಜೇಂದರ್ ವಿರುದ್ಧ ಭೂ ಒತ್ತುವರಿ ಆರೋಪ ಕೇಳಿ ಬಂದ ಹಿನ್ನೆಲೆ ಕೆಸಿಆರ್ ಅವರನ್ನು ರಾಜ್ಯ ಆರೋಗ್ಯ ಸಚಿವ ಸ್ಥಾನದಿಂದ ಕೈಬಿಡಲಾಗಿತ್ತು. ಪ್ರಭಾವಿ ನಾಯಕನನ್ನು ಒಲಿಸಿಕೊಳ್ಳಲು ಇದೇ ಸರಿಯಾದ ಅವಕಾಶ ಎಂದು ಯೋಚಿಸಿದ ಬಿಜೆಪಿ ಅವರನ್ನು ತನ್ನಲ್ಲಿಗೆ ಬರಮಾಡಿಕೊಂಡಿತು.

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಗಳೊಂದಿಗೆ ತೆಲಂಗಾಣದಲ್ಲಿ ಬಿಜೆಪಿ ಅದಾಗಲೇ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ನಗಣ್ಯ ಎಂದು ಪರಿಗಣಿಸಲಾಗಿದ್ದ ಪ್ರದೇಶದಲ್ಲಿ ಬಿಜೆಪಿ ಎರಡನೇ ಅತಿದೊಡ್ಡ ಆಟಗಾರನಾಗಿ ಹೊರಹೊಮ್ಮಿತ್ತು ಬಿಜೆಪಿ. ಇದೀಗ ಈಟಾಲ ಗೆಲುವು ತೆಲಂಗಾಣದಲ್ಲಿ ಬಿಜೆಪಿ ಕನಸಿಗೆ ಇನ್ನಷ್ಟು ಬಲ ತುಂಬಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss