Wednesday, August 10, 2022

Latest Posts

ಯಾರು ಸಾಲಗಾರರು?: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸರಣಿ ಟ್ವೀಟ್ ಪ್ರಶ್ನಾಸ್ತ್ರಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್, ಬೆಂಗಳೂರು:

ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕೆಂಬ ಮಜಾವಾದಿ ರಾಜಕಾರಣಿಗಳ ಪಟ್ಟಿಯಲ್ಲಿ ಮೊದಲ ಶ್ರೇಣಿಯಲ್ಲಿ ನಿಲ್ಲುವವರು ಸಿದ್ದರಾಮಯ್ಯ ಎಂದು ಬಿಜೆಪಿ ಕರ್ನಾಟಕ ಸರಣಿ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ.
ತಾವು ಮುಖ್ಯಮಂತ್ರಿಯಾಗಿದ್ದ ಕೇವಲ 4ವರ್ಷದ ಅವಧಿಯಲ್ಲಿ ಸಾಲ ಎತ್ತುವಳಿಯನ್ನು 4ಲಕ್ಷ ಕೋಟಿ ರೂ.ಗೆ ತಲುಪಿಸಿದ್ದೇ ಸಿದ್ದರಾಮಯ್ಯ ಅವರ ಸಾಧನೆ.
ರಾಜ್ಯ ಏಕೀಕರಣಗೊಂಡ ಬಳಿಕ 2013ರ ಅಂತ್ಯದ ವೇಳೆಗೆ ರಾಜ್ಯದ ಒಟ್ಟು ಸಾಲ ಎತ್ತುವಳಿ 1ಲಕ್ಷ ಕೋಟಿ ರೂ. ಮಾತ್ರ. ಆದರೆ ಸಿದ್ದರಾಮಯ್ಯ ಹಾಗೂ ಮೈತ್ರಿ ಸರಕಾರದ ಅವಧಿಯಲ್ಲಿ ಈ ಮೊತ್ತ 3ಲಕ್ಷ ಕೋಟಿ ರೂ. ತಲುಪಿತು. ಈಗ ಹೇಳಿ ರಾಜ್ಯಕ್ಕೆ ಸಾಲ ಭಾಗ್ಯ ನೀಡಿದ್ದು ಯಾರು? ನಿಮ್ಮ ಆರ್ಥಿಕತೆಗೆ ನೊಬೆಲ್ ಪ್ರಶಸ್ತಿಯೇ ಕೊಡಬೇಕೆಂದು ಉಲ್ಲೇಖಿಸಿದೆ.
ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಮಾಡಿದ ಅತಿದೊಡ್ಡ ಸಾಧನೆ ಎಂದರೆ, ರಾಜ್ಯದ ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೂ 44ಸಾವಿರಕ್ಕೂ ಅಧಿಕ ಸಾಲದ ಹೊರೆ ಹೇರಿದ್ದು. ಅಕ್ಕಿ ಕೊಟ್ಟೆ, ಎಣ್ಣೆ ಕೊಟ್ಟೆ ಎಂದು ರಾಜ್ಯದ ಜನತೆಯ ಮೇಲೆ ಮಂಕುಬೂದಿ ಎರಚುತ್ತಾ ಎಲ್ಲರನ್ನು ಸಾಲದ ಸುಳಿಗೆ ದೂಡಿಬಿಟ್ಟರು. ವಿತ್ತೀಯ ಶಿಸ್ತನ್ನೇ ಹದಗೆಡಿಸಿದರು ಎಂದು ಬಿಜೆಪಿ ಹೇಳಿದೆ.
ಕೃಷ್ಣಾ ಕಣಿವೆ ನೀರಾವರಿ ಯೋಜನೆಗೆ ವಾರ್ಷಿಕ 10ಸಾವಿರ ಕೋಟಿ ರೂ. ಅನುದಾನ ನೀಡುತ್ತೇನೆಂದು ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದಿರಿ. ಆದರೆ ಕೊಟ್ಟಿದ್ದು ಬಿಡಿಗಾಸು. ಅಂಗೈಯಲ್ಲಿ ಆಕಾಶ ತೋರಿಸುವ ವಿಚಾರದಲ್ಲಿ ನೀವು ಪ್ರವೀಣರಲ್ಲವೇ? ಎಂದು ಸಿದ್ದರಾಮಯ್ಯರನ್ನು ಬಿಜೆಪಿ ಪ್ರಶ್ನಿಸಿದೆ.
ಅಧಿಕಾರವಧಿಯಲ್ಲಿ ಕೊನೆಯಲ್ಲಿ ‘ಮುಖ್ಯಮಂತ್ರಿ 1ಲಕ್ಷ ಮನೆ’ ಯೋಜನೆಯನ್ನು ಬೆಂಗಳೂರು ನಗರದ ಬಡವರಿಗೆ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಆದರೆ ಬಜೆಟ್‌ನಲ್ಲಿ ಸೂಕ್ತ ಅನುದಾನ ಕಾಯ್ದಿರಿಸಲಿಲ್ಲ. ಮನೆಕಟ್ಟುವುದಕ್ಕೆ ಆಯ್ದುಕೊಂಡ ಜಾಗವೇ ವಿವಾದಗ್ರಸ್ಥವಾಗಿತ್ತು. ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ಅವರಿಗೆ ಪಿಎಚ್‌ಡಿ ನೀಡಬಹುದು ಎಂದು ಕುಹಕವಾಡಿದೆ.
ಇನ್ನೆಷ್ಟು ದಿನ ಸಂತೆ ಭಾಷಣ ಹೊಡೆಯುತ್ತೀರಿ ಸಿದ್ದರಾಮಯ್ಯ ಅವರೇ? ನೀವು ಘೋಷಣೆ ಮಾಡಿದ 15ಲಕ್ಷ ಮನೆ ಎಲ್ಲಿದೆ? ಭೂಮಿಯ ಮೇಲಿದೆಯೋ ಮಂಗಳ ಗ್ರಹದಲ್ಲಿದೆಯೋ? ಕೇವಲ ಘೋಷಣೆ ಮಾಡಿದ ಮಾತ್ರಕ್ಕೆ ಮನೆ ನಿರ್ಮಾಣವಾಗುತ್ತದೆಯೋ? ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತದೆಯೇ? ಎಂದು ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಪ್ರಶ್ನಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss