ಮಹಾರಾಷ್ಟ್ರ ರಾಜಕಾರಣದ ಚರ್ಚಾವ್ಯಕ್ತಿ ಏಕನಾಥ ಶಿಂಧೆ ಯಾರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮಹಾರಾಷ್ಟ್ರದ ಅಘಾಡಿ ಸರ್ಕಾರದ ಪರಿಸ್ಥಿತಿ ಅತಂತ್ರವಾಗಿದೆ. ಆಡಳಿತಾರೂಢ ಎಂವಿಎ ಮೈತ್ರಿಕೂಟದ ಪ್ರಮುಖ ಪಕ್ಷ ಶಿವಸೇನೆಯ 37 ಶಾಸಕರು ಪಕ್ಷದಿಂದ ಬಂಡಾಯವೆದ್ದು ಸೂರತ್‌ ನಿಂದ ಗುವಾಹಟಿಯೆಡೆಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ. ಶಿವಸೇನೆಯ ಈ ಬಂಡಾಯದ ಹಿಂದೆ ಒಬ್ಬ ವ್ಯಕ್ತಿಯ ಹೆಸರು ಕೇಳಿ ಬರುತ್ತಿದೆ. ಅವರೇ ಏಕಾನಾಥ ಶಿಂಧೆ.

ಭಾಳಾ ಸಾಹೇಬ್‌ ಠಾಕ್ರೆಯವರ ಮಾರ್ಗದರ್ಶನದಲ್ಲಿ ಮುಂಚಿನಿಂದಲೂ ಶಿವಸೇನೆಯ ನಾಯಕರುಗಳ ಸಾಲಿನಲ್ಲಿ ನಿಂತಿರುತ್ತಿದ್ದ ಶಿಂಧೆ, ಭಾಳಾ ಸಾಹೇಬರ ಮರಣಾನಂತರ ಉದ್ಧವ್‌ ಠಾಕ್ರೆ ಶಿವಸೇನೆಯ ಮುಖ್ಯಸ್ಥರಾದ ಮೇಲೆ ಉದ್ಧವ್‌ರ ನಂತರ ಸಾಲಿನಲ್ಲಿ ಗುರುತಿಸಿಕೊಂಡಿದ್ದರು. ಉದ್ಧವ್‌ ರನ್ನು ಬಿಟ್ಟರೆ ಮುಂದಿನ ನಾಯಕ ಏಕನಾಥ ಶಿಂಧೆಯೇ ಅನ್ನುವಷ್ಟರ ಮಟ್ಟಿಗಿನ ಪ್ರಭಾವಿ ನಾಯಕ. ಪ್ರಸ್ತುತ ಅಘಾಡಿ ಸರ್ಕಾರದ ಪ್ರಮುಖ ಹುದ್ದೆಗಳಲ್ಲೊಂದಾದ ನಗರಾಭಿವೃದ್ಧಿ ಖಾತೆಯ ಸಚಿವರುರಾಗಿದ್ದ 58 ವರ್ಷದ ಶಿಂಧೆ ಶಿವ ಸೇನೆಯಿಂದ ಬಂಡಾಯವೆದ್ದು 26 ಶಾಸಕರನ್ನು ಒಡಗೂಡಿಸಿಕೊಂಡು ಹೊರಬಂದಿದ್ದಾರೆ.

1964ರಲ್ಲಿ ಮಹಾರಾಷ್ಟ್ರದ ಮರಾಠಾ ಕುಂಟುಂಬವೊಂದರಲ್ಲಿ ಜನಿಸಿದ ಇವರು ಕಿರಿಯವಯಸ್ಸಿನಲ್ಲೇ ಕುಟುಂಬದ ಜವಾಬ್ದಾರಿಯನ್ನು ಹೆಗಲಿಗೆತ್ತಿಕೊಂಡು ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿ ಕೆಲಸದ ದಾರಿಹಿಡಿದರು. ಥಾಣೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಭಾಳಾ ಸಾಹೇಬ್‌ ಠಾಕ್ರೆ ಮತ್ತು ಥಾಣೆಯ ಜಿಲ್ಲಾ ಮುಖ್ಯಸ್ಥ ಆನಂದ್ ದಿಘೆ ಅವರ ಪ್ರಭಾವಕ್ಕೆ ಒಳಗಾಗಿ 1980ರ ದಶಕದಲ್ಲಿ ಶಿವಸೇನೆ ಸೇರಿದರು. ಹೀಗೆ ರಾಜಕೀಯದಲ್ಲಿ ಹೆಜ್ಜೆಯಿಟ್ಟ ಶಿಂಧೆ ಮುಂದೆ 1997ರಲ್ಲಿ ಥಾಣೆಯ ಮುನ್ಸಿಪಲ್ ಕಾರ್ಪೊರೇಷನ್‌ಗೆ ಕಾರ್ಪೋರೇಟರ್‌ ಆಗಿ ಮೊದಲ ಬಾರಿಗೆ ಆಯ್ಕೆಯಾಗುವ ಮೂಲಕ ರಾಜಕೀಯ ವೃತ್ತಿಜೀವನ ಪ್ರಾರಂಭಿಸಿದರು. 2001ರಲ್ಲಿ ಮುನ್ಸಿಪಲ್‌ ಹೌಸ್‌ ನ ನಾಯಕರಾಗಿ 2002ರಲ್ಲಿ ಮತ್ತೊಮ್ಮೆ ಥಾಣೆಯ ಕಾರ್ಪೋರೇಟರ್‌ ಆಗಿ ಆಯ್ಕೆಯಾದ ಶಿಂಧೆ ಥಾಣೆಯನ್ನು ಶಿವಸೇನೆಯ ಭದ್ರಕೋಟೆಯನ್ನಾಗಿಸುವಲ್ಲಿ ಶ್ರಮಿಸಿದರು.

ಅವರ ಪ್ರಭಾವವನ್ನು ಗಮನಿಸಿದ ಶಿವಸೇನೆ 2004ರಲ್ಲಿ ಅವರಿಗೆ ವಿಧಾನಸಭೆಗೆ ಟಿಕೇಟ್‌ ನೀಡಿತು. 2004ರಲ್ಲಿ ಥಾಣೆಯ ಕೊಪ್ರಿ-ಪಚ್ಪಖಾಡಿ ಕ್ಷೇತ್ರದಿಂದ ಮೊದಲ ಬಾರಿಗೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಶಿಂಧೆ ಮುಂದಿನ ನಾಲ್ಕು ಚುನಾವಣೆಗಳಲ್ಲೂ ಜಯಭೇರಿ ಬಾರಿಸಿದರು. ಮುಂದೆ 2014ರಲ್ಲಿ ಶಿವಸೇನೆ ಶಾಸಕಾಂಗ ಪಕ್ಷದ ನಾಯಕರಾಗಿ ನೇಮಕಗೊಂಡರು. 2019ರಲ್ಲಿ ಉದ್ಧವ್‌ ಠಾಕ್ರೆ ಮಹಾರಾಷ್ಟ್ರ ವಿಕಾಸ ಆಘಾಡಿ ಮೈತ್ರಿಕೂಟದಲ್ಲಿ ಮುಖ್ಯಮಂತ್ರಿಯಾಗುವವರೆಗೂ ಅವರು ವಿರೋಧ ಪಕ್ಷದ ನಾಯಕರಾಗಿ ನೇಮಕಗೊಂಡಿದ್ದರು. ಪ್ರಸ್ತುತ ಬಂಡಾಯವೆದ್ದಿರುವ ಅವರನ್ನು ಪಕ್ಷದ ನಾಯಕ ಸ್ಥಾನದಿಂದ ತೆಗೆದುಹಾಕಲಾಗಿದೆ.

ನಾವು ಭಾಳಾ ಸಾಹೇಬರ ಕಟ್ಟರ್‌ ಹಿಂದುತ್ವದ ಹಿಂಬಾಲಕರು, ಅಧಿಕಾರಕ್ಕೊಸ್ಕರ ಸಿದ್ಧಾಂತದಲ್ಲಿ ಒಪ್ಪಿಗೆ ಮಾಡಿಕೊಳ್ಳುವುದಿಲ್ಲ ಎಂದು ಸೂರತ್‌ ನಲ್ಲಿ ಬಂಡಾಯವೆದ್ದು ಕುಳಿತಿರುವ ಶಿಂಧೆ ಹೇಳುತ್ತಿದ್ದಾರೆ. ಮಹಾರಾಷ್ಟ್ರದ ರಾಜಕೀಯ ವಿಪ್ಲವ ಇನ್ನು ಏನೆಲ್ಲಾ ಬದಲಾವಣೆಗೊಳಪಡಬಹುದು ಎಂಬುದನ್ನು ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!