ತುಂಬಾ ಮನೆಗಳಲ್ಲಿ ತೆಂಗಿನಕಾಯಿಯನ್ನು ದೇವರ ಪೀಠದಲ್ಲಿಟ್ಟು ನಿತ್ಯ ಪೂಜಿಸುತ್ತಾರೆ. ತೆಂಗಿನಕಾಯಿಗೆ ಮೂರು ಕಣ್ಣು ಇರುವುದರಿಂದ ಅದು ಶಿವನ ಪ್ರತಿರೂಪ ಎನ್ನುತ್ತಾರೆ. ದೇವಸ್ಥಾನಕ್ಕೆ ಹೋದವರು ಹಣ್ಣು-ಕಾಯಿ ಮಾಡಿಸದೇ ವಾಪಸ್ ಬರುವುದೇ ಇಲ್ಲ. ಹಿಂದೂ ಧರ್ಮದಲ್ಲಿ ತೆಂಗಿನಕಾಯಿ ಇಲ್ಲದೇ ಯಾವುದೇ ಧಾರ್ಮಿಕ ಕಾರ್ಯ ಪೂರ್ಣವಾಗುವುದಿಲ್ಲ.
ಹಾಗಾದರೆ ಏಕೆ ಈ ತೆಂಗಿನಕಾಯಿಗೆ ಅಷ್ಟೊಂದು ಪ್ರಾಮುಖ್ಯತೆ?
ಹಿಂದೂಗಳು ತೆಂಗಿನ ಮರವನ್ನು ಕಲ್ಪವೃಕ್ಷ ಎನ್ನುತ್ತಾರೆ. ಅಂದರೆ ಕೇಳಿದ್ದನ್ನು ಕೊಡುವ ಮರ ಎಂದರ್ಥ. ತೆಂಗಿನ ಮರವನ್ನು ದೇವರೇ ಸೃಷ್ಟಿಸಿದ್ದು ಎಂಬ ನಂಬಿಕೆ ಇದೆ. ಅದಕ್ಕೆ ಪೌರಾಣಿಕ ಕಥೆ ಕೂಡ ಒಂದಿದೆ.
ತ್ರಿಶಂಕು ರಾಜನು ಸ್ವರ್ಗಕ್ಕೆ ಹೋಗುವುದನ್ನು ತಡೆಯಲು ವಿಶ್ವಾಮಿತ್ರ ಮಹರ್ಷಿ ತೆಂಗಿನ ಮರವನ್ನು ಸೃಷ್ಟಿಸಿ ಅದರ ಮೇಲೆ ತ್ರಿಶಂಕುವನ್ನು ಕೂರಿಸಿದ್ದರಂತೆ.
ಹಳೆ ಕಾಲದಲ್ಲಿ ದೇವರಿಗೆ ನರ ಬಲಿ, ಪ್ರಾಣಿ ಬಲಿ ನೀಡುವ ಪದ್ಧತಿಯಿತ್ತು. ಇದು ತಪ್ಪು ಎಂದು ತಿಳಿಯತೊಡಗಿದಂತೆ ಬಲಿ ಕೊಡುವ ಬದಲು ತೆಂಗಿನಕಾಯಿಯನ್ನು ದೇವರಿಗೆ ಒಡೆದು ನೈವೇದ್ಯ ಮಾಡುವ ಪದ್ಧತಿ ಬಂತು.