Wednesday, June 29, 2022

Latest Posts

ರಾಹುಲ್ ಗಾಂಧಿಗೆ ಗಿರಿರಾಜಸಿಂಗ್ ಇಟಾಲಿಯನ್ ನಲ್ಲಿ ಪ್ರತ್ಯುತ್ತರದ ಟ್ವೀಟ್ ಮಾಡಿದ್ದೇಕೆ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

“ರಾಜ್ಯಗಳು ನಮಗೆ ಒದಗಿಸಿದ ಅಂಕಿಅಂಶಗಳ ಪ್ರಕಾರ ಆಮ್ಲಜನಕ ಕೊರತೆಯಿಂದ ಯಾವ ಸಾವುಗಳೂ ವರದಿಯಾಗಿಲ್ಲ” ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ನೀಡಿದ ಉತ್ತರವನ್ನೀಗ ಪ್ರತಿಪಕ್ಷಗಳು ರಾಜಕೀಯ ಗುರಾಣಿ ಮಾಡಿಕೊಳ್ಳುವುದಕ್ಕೆ ಹೊರಟಿವೆ.

ಕೋವಿಡ್ ಹೆಚ್ಚಿನ ಸಾವುಗಳೆಲ್ಲ ಆಮ್ಲಜನಕ ಕೊರತೆ ಸಂಬಂಧವೇ ಆಗಿರುವುದು ಕಣ್ಣಿಗೆ ಕಟ್ಟಿದಂತೆ ಇರುವಾಗ ಕೇಂದ್ರ ಹೀಗೆ ಹೇಳುವುದು ಸರಿಯೇ ಎಂಬ ವಾದ ಪ್ರತಿಪಕ್ಷಗಳದ್ದು. ಇದರಲ್ಲಿ ಕೇಂದ್ರ ಸರ್ಕಾರದ ಅಂಕಿಅಂಶ ಏನೂ ಇಲ್ಲ, ರಾಜ್ಯಗಳು ಕೊಟ್ಟಿದ್ದನ್ನೇ ನಾವು ಹೇಳುತ್ತಿದ್ದೇವೆ ಎಂಬುದು ಕೇಂದ್ರದ ಸಮಜಾಯಿಷಿ.

ಈ ಬಗ್ಗೆ ಕೇಂದ್ರ ಸಚಿವರಿಗೂ, ರಾಹುಲ್ ಗಾಂಧಿಯವರಿಗೂ ಹೊತ್ತಿಕೊಂಡ ಟ್ವಿಟರ್ ಜಟಾಪಟಿ ಹೀಗಿದೆ.

ರಾಹುಲ್ ಗಾಂಧಿ ಟ್ವೀಟ್ ನಲ್ಲಿ ಹೇಳಿದ್ದು- “ಕೊರತೆಯಿರುವುದು ಕೇವಲ ಆಮ್ಲಜನಕದ್ದಲ್ಲ, ಸಂವೇದನಾಶೀಲತೆ ಮತ್ತು ಸತ್ಯದ್ದು- ಆಗಲೂ, ಈಗಲೂ”. 

ಇದಕ್ಕೆ ಸಚಿವ ಗಿರಿರಾಜ ಸಿಂಗ್ ಇಟಾಲಿಯನ್ ನಲ್ಲಿ ಟ್ವೀಟ್ ಮಾಡಿ ಟಾಂಗ್ ಕೊಟ್ಟರು. ಅವರ ಟ್ವೀಟ್ ಸಾರ ಹೀಗಿತ್ತು- “ನಾನು ಈ ರಾಜಕುಮಾರನ ಬಗ್ಗೆ ಹೇಳುತ್ತೇನೆ… ಅವನಿಗೆ ಆಗಲೂ ಮೆದುಳಿನ ಕೊರತೆ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಆಮ್ಲಜನಕದಿಂದ ಮೃತಪಟ್ಟವರ ಬಗ್ಗೆ ಮಾಹಿತಿ ಪಟ್ಟಿ ನೀಡಿರುವುದು ರಾಜ್ಯ ಸರ್ಕಾರಗಳು. ಅದು ಸರಿಯಿಲ್ಲವಾದರೆ ನಿಮ್ಮ ಪಕ್ಷದ ಆಡಳಿತದಲ್ಲಿರುವ ರಾಜ್ಯಗಳಿಗೆ ಪರಿಷ್ಕರಿಸಿದ ಪಟ್ಟಿಗಳನ್ನು ಸಲ್ಲಿಸಲು ಹೇಳಿ. ಅಲ್ಲಿಯವರೆಗೆ ಸುಳ್ಳು ಹೇಳುವುದು ನಿಲ್ಲಿಸಿ”

ಇನ್ನು, ಶಿವಸೇನೆ ಮತ್ತು ಆಪ್ ನಂಥ ಪಕ್ಷಗಳೂ ಈ ವಿಷಯದಲ್ಲಿ ಕೇಂದ್ರವನ್ನು ಅಣಕಿಸಿವೆ. ಇಲ್ಲಿಯೂ ವಿರೋಧಾಭಾಸ ಇರುವುದನ್ನು ಬಿಜೆಪಿ ಸಾಮಾಜಿಕ ಮಾಧ್ಯಮದಲ್ಲಿ ಎತ್ತಿ ತೋರಿಸಿದೆ. 

ತಮ್ಮಲ್ಲಿ ಆಮ್ಲಜನಕ ಕೊರತೆಯಿಂದ ಯಾವುದೇ ಸಾವಾಗಿಲ್ಲ ಎಂದು ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಹೈಕೋರ್ಟ್ ಗೆ ತನ್ನ ಉತ್ತರ ಸಲ್ಲಿಸಿತ್ತು.

ಅಂತೆಯೇ, ಯಾವಾಗ ಆಮ್ಲಜನಕದ ಲೆಕ್ಕ ಪರಿಶೋಧನೆ ಶುರುವಾಯಿತೋ ಅದರ ಮರುದಿನವೇ ದೆಹಲಿ ಸರ್ಕಾರ ಏಕಾಏಕಿ ತನ್ನ ಆಮ್ಲಜನಕ ಬೇಡಿಕೆ ಕಡಿತಗೊಳಿಸಿ ಸಂಶಯಕ್ಕೆ ಕಾರಣವಾಗಿತ್ತು.

ಇವರ್ಯಾರೂ ತಮ್ಮ ತಮ್ಮ ರಾಜ್ಯಗಳಿಂದ ಆಮ್ಲಜನಕ ಕೊರತೆಯ ಅಂಕಿಅಂಶವನ್ನು ಕೇಂದ್ರಕ್ಕೆ ವರದಿ ಮಾಡದೇ ಈಗ ರಾಜಕೀಯ ದಾಳಿ ನಡೆಸುತ್ತಿರುವುದೇಕೆ ಎಂದು ಬಿಜೆಪಿ ಪ್ರಶ್ನಿಸುತ್ತಿದೆ.

ಕೋವಿಡ್ ಪ್ರಕರಣ ಮತ್ತು ಸಾವುಗಳ ವಿಚಾರದಲ್ಲಿ ಕೇಂದ್ರ ಸರ್ಕಾರದ್ದು ಎಂದು ಪ್ರತ್ಯೇಕ ಪಟ್ಟಿ ಇರುವುದಿಲ್ಲ. ರಾಜ್ಯಗಳೆಲ್ಲ ಏನು ಕಳುಹಿಸಿದ್ದಾವೋ ಅದನ್ನೇ ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ಪ್ರಕಟಿಸುತ್ತದೆ. 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss