2028ರ ಒಲಂಪಿಕ್ಸ್‌ ನಲ್ಲಿ ಕ್ರಿಕೆಟ್?‌ 1900 ರ ಒಲಂಪಿಕ್‌ ಬಳಿಕ ಕ್ರಿಕೆಟ್‌ಗೆ ಮತ್ಯಾಕೆ ಅವಕಾಶ ಸಿಕ್ಕಿಲ್ಲ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕ್ರಿಕೆಟ್ ಪ್ರಪಂಚದಾದ್ಯಂತ ದೊಡ್ಡ ಸಂಖ್ಯೆ ಅಭಿಮಾನಿಗಳನ್ನು ಹೊಂದಿರುವ ಕ್ರೀಡೆ. ಫುಟ್ಬಾಲ್‌ ಬಳಿಕ ಜಗತ್ತಿನಲ್ಲೇ ಅತ್ಯುನ್ನತ ಜನಪ್ರಿಯ ಕ್ರೀಡೆ. ಜಾಗತಿಕವಾಗಿ ಅಷ್ಟೆಲ್ಲಾ ಅಭಿಮಾನಿಗಳನ್ನು ಹೊಂದಿದ್ದರೂ, ಒಲಿಂಪಿಕ್ಸ್‌ನಲ್ಲಿ ಛಾಪು ಮೂಡಿಸುವಲ್ಲಿ ಮಾತ್ರ ಕ್ರಿಕೆಟ್ ಸಂಪೂರ್ಣ ವಿಫಲವಾಗಿದೆ. 2028ರ ಒಲಂಪಿಕ್ಸ್‌ ನಲ್ಲಿ ಕ್ರಿಕೆಟ್‌ ಗೆ ಅವಕಾಶ ಸಿಗಲಿದೆಯೆ ಎಂಬ ವಿಚಾರ ಇದೀಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

ಶತಮಾನದ ಹಿಂದೆಯೇ ಒಲಂಪಿಕ್‌ನಲ್ಲಿ ಕ್ರಿಕೆಟ್!
ಅಚ್ಚರಿಯೆಂದರೆ ಶತಮಾನಗಳಷ್ಟು ಹಿಂದೆಯೆ ಕ್ರಿಕೆಟ್‌ ಒಲಂಪಿಕ್‌ ನ ಭಾಗವಾಗಿತ್ತು. 1900 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಆಡಲಾಗಿತ್ತು.

ನಾಲ್ಕು ತಂಡಗಳು ಭಾಗಿಯಾಗಿದ್ದ ಸ್ಪರ್ಧೆಯಲ್ಲಿ, ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂ ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದರಿಂದ, ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ನಡುವೆ ಏಕಮಾತ್ರ ಪಂದ್ಯವನ್ನು ಆಡಿಸಲಾಗಿತ್ತು. ಆದಾಗ್ಯೂ, ಪಂದ್ಯವು ಪ್ರಥಮ ದರ್ಜೆ ಪಂದ್ಯವಾಗಿ ಅರ್ಹತೆ ಪಡೆಯಲಿಲ್ಲ ಏಕೆಂದರೆ ಇದು ಕೇವಲ ಎರಡು ತಂಡಗಳ ನಡುವಿನ ಸ್ಪರ್ಧೆಯಾಗಿತ್ತು. ಎರಡು ದಿನ ನಡೆದ ಪಂದ್ಯವನ್ನು ಅಂತಿಮವಾಗಿ ಗ್ರೇಟ್ ಬ್ರಿಟನ್ 158 ರನ್‌ಗಳಿಂದ ಗೆದ್ದುಕೊಂಡಿತು, ಫ್ರಾನ್ಸ್ ತನ್ನ ಎರಡು ಇನ್ನಿಂಗ್ಸ್‌ಗಳಲ್ಲಿ ಕೇವಲ 104 ರನ್ ಗಳನ್ನು ಕಲೆಹಾಕಿ ಸೋಲೊಪ್ಪಿಕೊಂಡಿತ್ತು. ಆ ಬಳಿಕ ಕ್ರಿಕೆಟ್‌ ಗೆ ಒಲಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾಗಿಯಾಗುವ ಅವಕಾಶ ದೊರಕಲೇ ಇಲ್ಲ.

ಒಲಂಪಿಕ್‌ ನಲ್ಲಿ ಕ್ರಿಕೆಟ್‌ ಸೇರ್ಪಡೆಯಾಗದಿರಲು ಕಾರಣಗಳೇನು?
ಪ್ರಪಂಚದಾದ್ಯಂತ 105 ದೇಶಗಳಲ್ಲಿ ಕ್ರಿಕೆಟ್ ಆಡಲಾಗುತ್ತಿದ್ದರೂ ಬೆರಳೆಣಿಕೆಯ ತಂಡಗಳು ಮಾತ್ರವೇ ಟೆಸ್ಟ್ ಕ್ರಿಕೆಟ್‌ ಆಡುವ ಸ್ಥಾನಮಾನವನ್ನು ಹೊಂದಿವೆ. ಇದಲ್ಲದೆ, ವಿಶ್ವಕಪ್ ನಂತಹ ಅತ್ಯನ್ನತ ಟೂರ್ನಿಗಳಲ್ಲಿಯೂ ಗರಿಷ್ಠ 10-12 ತಂಡಗಳನ್ನು ಮಾತ್ರ ಆಡುತ್ತವೆ.‌ ಒಲಿಂಪಿಕ್ಸ್‌ನಲ್ಲಿ ಪ್ರಾಬಲ್ಯ ಸಾಧಿಸಿರುವ ಅಮೆರಿಕಾ, ಚೀನಾ, ಫ್ರಾನ್ಸ್‌ ನಂತಹ ಪ್ರಭಾವಿ ದೇಶಗಳಲ್ಲಿ ಈ ಕ್ರೀಡೆ ಅಷ್ಟೇನು ಜನಪ್ರಿಯವಲ್ಲ. ಕ್ರಿಕೆಟ್‌ ತಂಡಗಳನ್ನೇ ಹೊಂದಿರದ ನೂರಾರು ದೇಶಗಳು ಒಲಂಪಿಕ್‌ ನಲ್ಲಿ ಸ್ಪರ್ಧಿಸುತ್ತವೆ. ಅವುಗಳ ಹಿತಾಸಕ್ತಿಗಳನ್ನು ಕಡೆಗಾಣಿಸಿ ಕೆಲವೇ ರಾಷ್ಟ್ರಗಳಿಗಾಗಿ ಕ್ರಿಕೆಟ್‌ ಸೇರ್ಪಡೆಗೊಳಿಸಲು ಸಾಧ್ಯವಾಗಿಲ್ಲ.

ಅಲ್ಲದೆ ಒಲಂಪಿಕ್ಸ್‌ ಆಯೋಜನೆಯಾಗುವ ಬಹುತೇಕ ಆತಿಥೇಯ ರಾಷ್ಟ್ಗಳು ಕ್ರಿಕೆಟ್ ಆಡುವ ದೇಶಗಳಲ್ಲ. ಅಲ್ಲದೆ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೊಳಿಸಲು ಪ್ರತ್ಯೇಕ ಕ್ರೀಡಾಂಗಣದ ಅವಶ್ಯಕತೆಯಿದೆ. ಜೊತೆಗೆ ಪಂದ್ಯಗಳಿಗೆ ಹೆಚ್ಚಿನ ಸಮಯವೂ ಹಿಡಿಯುತ್ತದೆ.  ಮುಖ್ಯವಾಗಿ ಹೆಚ್ಚಿನ ತಾಂತ್ರಿಕ ನೆರವು ಬೇಕಾಗುತ್ತದೆ. ಇವೆಲ್ಲವೂ ಅಪಾರ ವೆಚ್ಚದಾಯಕ. ಈ ಎಲ್ಲಾ ಕಾರಣಗಳಿಂದಾಗಿ ಕ್ರಿಕೆಟ್‌ ಅನ್ನು ಹೊರಗಿಡಲಾಗಿದೆ.
ಒಲಂಪಿಕ್ಸ್‌ನಲ್ಲಿ ಕ್ರಿಕೆಟ್‌ನ ಸೇರ್ಪಡೆಯನ್ನು ಮುಂದೂಡಲು ಮತ್ತೊಂದು ಕಾರಣ ಕ್ರಿಕೆಟ್‌ ಬಿಡುವಿಲ್ಲದ ಅಂತಾರಾಷ್ಟ್ರೀಯ ವೇಳಾಪಟ್ಟಿ.  ಪ್ರಪಂಚದಾದ್ಯಂತದ ಹಲವಾರು T20 ಲೀಗ್‌ಗಲ್ಲಿ ಪಾಲ್ಗೊಳ್ಳುವ ಆಟಗಾರರು ಮಾನಸಿಕ- ದೈಹಿಕವಾಗಿ ಬಳಲಿರುತ್ತಾರೆ. ಅಲ್ಲದೆ ಒಲಂಪಿಕ್ಸ್‌ ಆಡುವುದಕ್ಕೆ ಸಿದ್ಧತೆ ನಡೆಸಲು ಸಾಕಷ್ಟು ಸಮಯಾವಕಾಶ ನೀಡಬೇಕಿರುತ್ತದೆ. ಅಲ್ಲದೆ ಒಲಂಪಿಕ್ಸ್‌ ನಲ್ಲಿ ಭಾಗವಹಿಸುವುದು ಆಟಗಾರರಿಗೆ ಅಷ್ಟೇನು ಲಾಭದಾಯವಲ್ಲ. ಈ ಕಾರಣದಿಂದ ಬಹುತೇಕ ಕ್ರಿಕೆಟ್‌ ಮಂಡಳಿಗಳು ನಿರಾಸಕ್ತಿ ತೋರುತ್ತವೆ.

2028ರ ಲಾಸ್ ಏಂಜಲೀಸ್‌ ಒಲಂಪಿಕ್ಸ್ವ ನಲ್ಲಿ ಕ್ರಿಕೆಟ್?
ವಿಶ್ವ ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆ ಮಾಡುವ ಮಾತುಕತೆಗಳು ನಡೆಯುತ್ತಿವೆ. 2028ರ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅಧಿಕೃತವಾಗಿ ಸೇರ್ಪಡೆಗೊಳಿಸಲು ಬಿಡ್‌ ಮಾಡಲಾಗಿದೆ ಎಂದು ಐಸಿಸಿ ಅಧ್ಯಕ್ಷ ಗ್ರೆಗ್ ಬ್ಲಾರ್ಕೆ ಹೇಳಿದ್ದಾರೆ.

ಅದಾಗ್ಯೂ ಕ್ರಿಕೆಟ್‌ ಸೇರಿಸುವ ಬಗ್ಗೆ ಯಾವುದೇ ಖಚಿತಗಳು ಇಲ್ಲ. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಪ್ರಕಾರ, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕಾರ್ಯಕ್ರಮಕ್ಕೆ ತಾತ್ಕಾಲಿಕವಾಗಿ ಸೇರಿಸಲಾದ 28 ಕ್ರೀಡೆಗಳಲ್ಲಿ ಪಟ್ಟಿಯಲ್ಲಿ ಕ್ರಿಕೆಟ್ ಇಲ್ಲದಿರುವುದು ಅಭಿಮಾನಿಗಳಿಗೆ ನಿರಾಸೆ ತಂದಿದೆ.‌ 2028 ರ ಲಾಸ್ ಏಂಜಲೀಸ್ ಗೇಮ್ಸ್‌ನಲ್ಲಿ ಕ್ರಿಕೆಟ್ ಅನ್ನು ಸೇರಿಸಲು IOC ಅನ್ನು ಮನವೊಲಿಸುವಲ್ಲಿ ICC ವಿಫಲವಾಗಿದೆ ಎನ್ನಲಾಗುತ್ತದೆ. ಆದರೂ ಕ್ರಿಕೆಟ್‌ ಸೇರ್ಪಡೆಗಾಗಿ ಮಾತುಕತೆಗಳು ಪ್ರಗತಿಯಲ್ಲಿವೆ. ಈ ಒಲಿಂಪಿಕ್ಸ್ನಲ್ಲಿ ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬ್ಯಾಸ್ಕೆಟ್ ಬಾಲ್ ಸೇರಿದಂತೆ ಹೊಸ ಕ್ರಿಡೆಗಳಿಗೆ ಅವಕಾಶ ನೀಡಲಾಗಿದೆ.
ಐಪಿಎಲ್‌ ಸೇರಿದಂತೆ ಜಾಗತಿಕ ಟೂರ್ನಿಗಳಲ್ಲಿ ಟಿ20 ಮಾದರಿಯ ಕ್ರಿಕೆಟ್‌ ಅದ್ಭುತ ಯಶಸ್ಸು ಸಾಧಿಸಿದೆ. ಒಂದೊಮ್ಮೆ ಒಲಿಂಪಿಕ್ಸ್‌ ನಲ್ಲಿ ಕ್ರಿಕೆಟ್ ಸೇರ್ಪಡೆ ಆದರೆ  ಟಿ20 ಮಾದರಿ  ಕ್ರಿಕೆಟ್ ಒಲಂಪಿಕ್ ರಾಷ್ಟ್ಗಳಲ್ಲೂ ಹೆಚ್ಚಿನ ಪ್ರಸಿದ್ಧಿಗೆ ಬರಬಹುದು ಎಂಬ ಲೆಕ್ಕಾಚಾರಗಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!