ಹೈಕೋರ್ಟ್ ಜಡ್ಜ್ ಗಳ ನೇಮಕ ವಿಳಂಬವಾಗುತ್ತಿರುವುದು ಏಕಾಗಿ? ಮುಖ್ಯ ನ್ಯಾಯಮೂರ್ತಿ ಮಾತುಗಳಲ್ಲಿದೆ ಉತ್ತರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಚ್ಚ ನ್ಯಾಯಾಲಯಗಳಲ್ಲಿ ಖಾಲಿ ಇರುವ ಉನ್ನತ ಹುದ್ದೆಗಳಿಗೆ ಶೀಘ್ರವಾಗಿ ಹೆಸರುಗಳನ್ನು ಸೂಚಿಸುವಂತೆ ಸಿಜೆಐ ಎನ್.ವಿ.ರಮಣ ಅವರು ಮುಖ್ಯ ನ್ಯಾಯಾಧೀಶರುಗಳಲ್ಲಿ ವಿನಂತಿಸಿದ್ದಾರೆ.

39ನೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು “ಇನ್ನೂ ಖಾಲಿ ಇರುವ ಉನ್ನತ ಹುದ್ದೆಗೆ ಹೆಸರುಗಳನ್ನು ಶೀಘ್ರವಾಗಿ ರವಾನಿಸಲು ನಾನು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ವಿನಂತಿಸುತ್ತೇನೆ. ದೇಶದ 25 ಹೈಕೋರ್ಟ್‌ಗಳಲ್ಲಿ 35% ರಷ್ಟು ಹುದ್ದೆಗಳು ಖಾಲಿ ಇವೆ. ಅಂಕಿಅಂಶಗಳ ಪ್ರಕಾರ ಒಟ್ಟು ಮಂಜೂರಾದ 1104 ನ್ಯಾಯಾಧೀಶರಲ್ಲಿ, 387 ಖಾಲಿ ಹುದ್ದೆಗಳಿವೆ. ಕೆಲವು ಹೈಕೋರ್ಟ್‌ ಗಳಲ್ಲಿ ಹೆಚ್ಚಿನಸಂಖ್ಯೆಯಲ್ಲಿಉನ್ನತ ಹುದ್ದೆಗಳು ಖಾಲಿ ಇವೆ. ಉದಾಹರಣೆಗೆ ಪಾಟ್ನಾ (49%), ರಾಜಸ್ಥಾನ (48%), ಕಲ್ಕತ್ತಾ (45%), ಅಲಹಾಬಾದ್ (41%), ದೆಹಲಿ (42%), ಪಂಜಾಬ್ ಮತ್ತು ಹರಿಯಾಣ (42%) ಮತ್ತು ಬಾಂಬೆ (39%)” ಎಂದು ಉಲ್ಲೇಖಿಸಿದ್ದಾರೆ.

ಸಾಮಾನ್ಯವಾಗಿ ಹೈಕೋರ್ಟ್‌ಗಳಿಂದ ಬಂದ ಹೆಸರುಗಳನ್ನು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತದೆ. ಕೆಂದ್ರ ಸರ್ಕಾರವು ಈ ಹೆಸರುಗಳನ್ನು ಅಂಗೀಕರಿಸುವ ಅಥವಾ ಮರುಪರಿಶೀಲನೆಗೆ ಕಳುಹಿಸುವ ಅಧಿಕಾರವನ್ನು ಹೊಂದಿದೆ. ಆದರೆ ಸುಪ್ರಿಂ ಕೋರ್ಟ್‌ನ ಕೊಲಿಜಿಯಂ ಹೆಸರುಗಳನ್ನು ಪುನರುಚ್ಚರಿಸಿದರೆ ಕೇಂದ್ರ ಸರ್ಕಾರವು ಅವುಗಳನ್ನು ನೇಮಕಾತಿ ಮಾಡಲೇಬೇಕಾಗುತ್ತದೆ.

“ಖಾಲಿ ಇರುವ ಸ್ಥಾನಗಳ ಭರ್ತಿಗೆ ಹೆಸರು ಶಿಫಾರಸ್ಸು ಮಾಡುವಂತೆ ನಾನು ಈ ಹಿಂದೆ ನಡೆದ ಆನ್‌ ಲೈನ್‌ ಸಮ್ಮೇಳನದಲ್ಲೂ ಹೇಳಿದ್ದೆ. ನಾವೆಲ್ಲರೂ ಒಟ್ಟಾಗಿ ಪ್ರಯತ್ನಿಸಿದರೆ ಒಂದೇ ವರ್ಷದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬಹುದು. ಇದಕ್ಕೆ ತಮ್ಮೆಲ್ಲರ ಸಂಪೂರ್ಣ ಸಹಕಾರ ಅಗತ್ಯ” ಎಂದು ಸಿಜೆಐ ರಮಣ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರುಗಳಿಗೆ ವಿನಂತಿಸಿದರು.

ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ನ್ಯಾಯಾಲಯಗಳ ಕಾರ್ಯನಿರ್ವಹಣೆಗೆ ಎದುರಾಗಿದ್ದ ಸಮಸ್ಯೆಗಳನ್ನು ಉಲ್ಲೇಖಿಸಿ ಸಾಂವಿಧಾನಿಕ ನ್ಯಾಯಾಲಯಗಳು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವಲ್ಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ತೋರಿದ ದೃಢತೆ ಮತ್ತು ನಿರ್ಣಯವನ್ನು ಶ್ಲಾಘಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!