CINE | ತಮ್ಮ ಸಿನಿಮಾಗೆ ʼಗೌರಿʼ ಹೆಸರು ಯಾಕೆ? ಇಂದ್ರಜಿತ್‌ ಲಂಕೇಶ್‌ ಉತ್ತರ ಇಲ್ಲಿದೆ..

ದಿಗಂತ ವರದಿ ಹುಬ್ಬಳ್ಳಿ:

ಇಂದಿನ ಯುವ ಜನತೆಗೆ ಉತ್ತಮ ಸಂದೇಶ ನೀಡುವ ಹಾಗೂ ಯುವ ಪ್ರತಿಭೆಗಳಾದ ಸಮರ್ಜಿತ ಲಂಕೇಶ್, ಸಾನ್ಯ ಅಯ್ಯರ್ ಅಭಿನಯದ ಗೌರಿ ಚಲನಚಿತ್ರ ಜುಲೈನಲ್ಲಿ ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರಿ ಚಲನಚಿತ್ರ ನೈಜ ಘಟನೆಯನ್ನು ಆಧರಿಸಿದ್ದು, ನನ್ನ ಅಕ್ಕ ಗೌರಿ ಮೇಲಿನ ಅಭಿಮಾನದಿಂದಾಗಿ ಸಿನಿಮಾಕ್ಕೆ ಈ ಹೆಸರು ಇಟ್ಟಿದ್ದೇನೆ. ಇದರಲ್ಲಿ ಗೌರಿಯ ಕೆಲ ಸೂಕ್ಷ್ಮ ಅಂಶಗಳು ಅಡಕವಾಗಿವೆ. ಆದರೆ, ಚಿತ್ರ ಅವರ ಜೀವನ ಚರಿತ್ರೆಯಲ್ಲ ಎಂದು ಸ್ಪಷ್ಟಪಡಿಸಿದರು.

ಈ ಚಲನಚಿತ್ರದಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದ್ದು, ಅನುಭವಿ ನಟರು ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಇದರ ಜೊತೆಗೆ ಯುವ ತಂತ್ರಜ್ಞರಿಗೂ ಅವಕಾಶ ನೀಡಲಾಗಿದೆ. ಸರಿ ಸುಮಾರು ೭೦-೮೦ ಕಲಾವಿದರು ಅಭಿನಯಿಸಿದ್ದಾರೆ ಎಂದರು.

ಈಗಾಗಲೇ ಚಿತ್ರದ ಟೈಮ್ ಬರುತ್ತೆ ಎಂಬ ಹಾಡು ಎಲ್ಲೆಡೆ ಸದ್ದು ಮಾಡುತ್ತಿದೆ. ಇಂದು ಉತ್ತರ ಕರ್ನಾಟಕ ಭಾಷಾ ಶೈಲಿಯ ಧೂಳು ಎಬ್ಬಿಸುವ ಹಾಡನ್ನು ಬಿಡುಗಡೆ ಮಾಡಲಾಯಿತು. ಈ ಹಾಡು ಪ್ರೇಕ್ಷಕರ ಮೆಚ್ಚುಗೆ ಪಡೆಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ನಟಿ ಸಾನ್ಯ ಅಯ್ಯರ್ ಮಾತನಾಡಿ, ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಸಿನಿಮಾ ಪ್ರಿಯರು ಮೊದಲಿಂದಲೂ ಚಿತ್ರರಂಗಕ್ಕೆ ಪ್ರೊತ್ಸಾಹ ನೀಡುತ್ತ ಬಂದಿದ್ದಾರೆ. ನನಗೂ ಕೂಡ ಅಪಾರ ಗೌರವ ನೀಡಿದ್ದಾರೆ. ಇದು ಖುಷಿಯ ವಿಚಾರವಾಗಿದೆ ಎಂದರು.

ಸಿನಿಮಾದಲ್ಲಿ ಕೆಲಸ ಮಾಡುತ್ತಿರುವಾಗ ನಮ್ಮ ಕೆಲಸವನ್ನು ನಿರ್ದೇಶಕರಾದ ಇಂದ್ರಜಿತ್ ಲಂಕೇಶ್ ಅವರು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅವರ ಕೆಲ ಕಾರ್ಯಗಳು ನಮಗೆ ಸ್ಪೂರ್ತಿ ನೀಡಿವೆ. ನನಗೆ ಚಿತ್ರರಂಗಕ್ಕೆ ಲಂಕೇಶ್ ಅವರು ರೆಡ್ ಕಾರ್ಪೆಟ್ ಹಾಕಿ ಅವಕಾಶ ನೀಡಿದ್ದಾರೆ ಎಂದು ಹೇಳಿದರು.

ಚಿತ್ರದ ನಾಯಕ ನಟ ಸಮರ್ಜಿತ ಲಂಕೇಶ್ ಮಾತನಾಡಿ, ನಮ್ಮ ತಂದೆಯ ನಿರ್ದೇಶನದ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿರುವುದು ನನಗೆ ಖುಷಿ ತಂದಿದೆ. ಇಷ್ಟಪಟ್ಟು ದೊಡ್ಡ ಸಿನಿಮಾವನ್ನು ಮಾಡಿದ್ದೇವೆ. ಇದೊಂದು ಉತ್ತಮ ಸಂದೇಶವಿರುವ ಚಿತ್ರವಾಗಿದೆ. ನನ್ನ ವೃತ್ತಿಯಲ್ಲಿಯೇ ಉತ್ತಮವಾದ ಸಿನಿಮಾ ಇದಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!