ಹೊಸದಿಗಂತ ಡಿಜಿಟಲ್ ಡೆಸ್ಕ್:
ಏನೇ ಹೇಳಿ, ಕೇಸರಿ ತುಂಬಾನೇ ದುಬಾರಿ. ಒಂದು ಕೆ.ಜಿ. ಕೇಸರಿಗೆ ಮೂರು ಸಾವಿರ ಡಾಲರ್!
ಹೌದು, ಕೆಂಪು ಚಿನ್ನ ಎಂದೇ ಕರೆಯಲಾಗುವ ಈ ಕೇಸರಿ ಇಷ್ಟೊಂದು ದುಬಾರಿ ಯಾಕೆ?
ಈ ಹಿಂದೆ ಕೇಸರಿಯನ್ನು ಪ್ರಾಚೀನ ಗ್ರೀಕರು ಮತ್ತು ರೋಮನ್ನರು ಸುಗಂಧ ದ್ರವ್ಯವಾಗಿ ಬಳಸುತ್ತಿದ್ದರು. ಇದಾದ ನಂತರ ಅಡುಗೆಗೆ, ಸೌಂದರ್ಯ ವರ್ಧಕವಾಗಿ ಕೇಸರಿಯನ್ನು ಬಳಸಲಾಗುತ್ತಿದೆ.
ಕೇಸರಿ ದುಬಾರಿ ಯಾಕೆ ನೋಡೋಣ ಬನ್ನಿ..
ಬೇರೆ ಬೆಳೆಗಳ ರೀತಿ ಕೇಸರಿ ಸುಲಭವಾಗಿ ಕೈಗೆ ಸಿಗುವಂಥದ್ದಲ್ಲ. ಪ್ರತಿ ಹೂವಿನಿಂದಲೂ ಕೇಸರಿ ಎಳೆಗಳನ್ನು ಸಂಗ್ರಹಿಸಿ, ಎಲ್ಲಾ ಕೊಯ್ಲುಗಳನ್ನು ಕೈಯಿಂದಲೇ ಮಾಡಬೇಕಾಗುತ್ತದೆ. ಯಾವುದೇ ಮಶೀನ್ನಿಂದ ಈ ಕೆಲಸ ಆಗುವುದಿಲ್ಲ.
150 ಹೂವುಗಳನ್ನು ಆರಿಸಿ, ಅದರಲ್ಲಿನ ಮಧ್ಯಭಾಗದಲ್ಲಿ ಸಿಗುವ ಕೇಸರಿ ಎಳೆಗಳನ್ನು ತೆಗೆದು ಇಟ್ಟರೆ ಇದು 1 ಗ್ರಾಂ ಕೇಸರಿಯಾಗಲಿದೆ. ಪ್ರತಿ ಹೂವಿನಲ್ಲಿಯೂ ಮೂರು ಎಳೆ ಕೇಸರಿ ಇರುತ್ತದೆ. ಇದನ್ನು ಕೈಯಿಂದ ಕೀಳುವಾಗಲೂ ಜಾಗರೂಕರಾಗಿ ಇರಬೇಕಾಗುತ್ತದೆ. ಪ್ರತಿ ಹೂವಿನಿಂದ 0.06 ಗ್ರಾಂನಷ್ಟು ಕೇಸರಿ ಮಾತ್ರ ಸಿಗುತ್ತದೆ. ಈ ಸೂಕ್ಷ್ಮ ಕೆಲಸ ಮಾಡಲು ಯಾವುದೇ ಯಂತ್ರಕ್ಕೂ ಸಾಧ್ಯವಿಲ್ಲ.
ಕೆಲಸಗಾರರು ಸತತವಾಗಿ 40 ಗಂಟೆ ಕೆಲಸ ಮಾಡಿದರೆ ಒಂದು ಕೆ.ಜಿ. ಕೇಸರಿ ಕೈಗೆ ಸಿಗುತ್ತದೆ. ಇದನ್ನು ಬೆಳೆಯುವುದು ಸುಲಭದ ಮಾತಲ್ಲ. ಬೆಳೆ ಹಾಕುವ ಮುನ್ನ ಸ್ವಲ್ಪ ಮಳೆಯಾಗಿದ್ದರೆ ದೊಡ್ಡ ಹೂವುಗಳು ಬೆಳೆಯುತ್ತವೆ. ಇಲ್ಲವಾದರೆ ಚಿಕ್ಕ ಹೂವುಗಳು ಬೆಳೆಯುತ್ತವೆ. ಹೂವುಗಳನ್ನು ಕೈಯಿಂದ ಕೀಳುವಾಗ ಕೇಸರಿ ಭಾಗ ಉದುರಿಹೋಗುವ ಸಾಧ್ಯತೆಯೂ ಇರುತ್ತದೆ. ಹೂವು ಸಂಪೂರ್ಣವಾಗಿ ಬೆಳೆದ ನಂತರ ಸಮಯಕ್ಕೆ ಇದನ್ನು ತೆಗೆದುಬಿಡಬೇಕು. ಇಲ್ಲವಾದರೆ ಹೂವು ಬಾಡಿ, ಕೇಸರಿ ಭಾಗ ಭೂಮಿ ಸೇರುತ್ತದೆ.
ಕೇಸರಿಯ ಕ್ವಾಲಿಟಿಗಾಗಿ ಇವನ್ನು ಬೆಳಗ್ಗೆಯೇ ಹಾರ್ವೆಸ್ಟ್ ಮಾಡಲಾಗುತ್ತದೆ. ಕೇಸರಿಯ ರುಚಿ ಮಳೆ, ವಾತಾವರಣ, ಉಷ್ಣತೆ ಹಾಗೂ ಮಣ್ಣಿನ ಮೇಲೂ ನಿರ್ಧರಿತವಾಗುತ್ತದೆ. ವಿಶ್ವದಲ್ಲೇ ಉತ್ತಮ ಕೇಸರಿ ಕಾಶ್ಮೀರದಲ್ಲಿ ಬೆಳೆಯಲಾಗುತ್ತದೆ. ಒಂದು ಕಿಲೋ ಕೇಸರಿ ಎಂದರೆ ಅದರಲ್ಲಿ 450,000 ಎಳೆಗಳಿರುತ್ತವೆ. ಇದನ್ನು ಸಂಗ್ರಹಿಸಲು 150,000 ಹೂವುಗಳ ಅವಶ್ಯಕತೆ ಇದೆ.ಇದೇ ಕಾರಣಕ್ಕೆ ಕೇಸರಿ ತುಂಬಾನೇ ದುಬಾರಿಯಾಗಿದೆ.