ಹೊಸದಿಗಂತ ಕಲಬುರಗಿ:
ನಾಡಿಗೆ ಅನ್ನ ನೀಡುವ ರೈತರು ನಿಮಗೆ ಮತ ಹಾಕಿಲ್ಲವೇ.? ಹಿಂದುಗಳು ನಿಮಗೆ ಮತ ಹಾಕಿಲ್ಲವೆ.? ನಾಡಿನ ರೈತರನ್ನು ಹಾಗೂ ಹಿಂದುಗಳನ್ನು ಕಂಡರೆ ನಿಮಗೆ ಯಾಕಿಷ್ಟು ದ್ವೇಷ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ಬಿಜೆಪಿ ಪಕ್ಷದ ವತಿಯಿಂದ ನಗರದ ಜಗತ್ ವೃತ್ತದಲ್ಲಿ ಹಮ್ಮಿಕೊಂಡಿದ್ದ “ನಮ್ಮ ಭೂಮಿ ನಮ್ಮ ಹಕ್ಕು”ವಕ್ಫ್ ವಿರುದ್ಧದ ಜನಾಂದೋಲನದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು,ನಾಡಿಗೆ ಅನ್ನ ನೀಡುವ ರೈತರ ಆಶೀರ್ವಾದದಿಂದ ನೀವು ಮುಖ್ಯಮಂತ್ರಿ ಆಗಿದ್ದಿರಾ. ಆದರೆ, ನೀವು ಒಂದು ಕೋಮಿನ, ಒಂದು ಧರ್ಮದ ಮುಖ್ಯಮಂತ್ರಿಯಂತೆ ವರ್ತನೆ ತೋರುತ್ತಿರುವುದು ರಾಜ್ಯದ ಜನರಿಗೆ ಹಾಗೂ ನಮಗೆ ಅನುಮಾನ ಹುಟ್ಟಿಸಿದೆ ಎಂದರು.
ನಾಡಿನ ಅನ್ನದಾತನ ಜಮೀನು, ಹಿಂದು ಧರ್ಮದ ಮಠ ಮಂದಿರಗಳನ್ನು ಕಬಳಿಸಲು ಹೊರಟಿರುವ ನೀವು, ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಪಾಠವನ್ನು ಎದುರಿಸುವ ಸನ್ನಿವೇಶ ಇದೀಗ ದೂರಿಲ್ಲ. ಅಧಿಕಾರ ಶಾಶ್ವತವಲ್ಲ. ಅಧಿಕಾರದ ಅವಧಿಯಲ್ಲಿ ರಾಜ್ಯಕ್ಕೆ ನೀವು ನೀಡುವ ಕೊಡುಗೆ ಶಾಶ್ವತವಾಗಿರಲಿದೆ ಎಂದ ಅವರು, ರಾಜ್ಯದ ರೈತರ ಕಣ್ಣಲ್ಲಿ ನೀರು ತಂದಿರುವ ನಿಮಗೆ ದೇವರು ಒಳ್ಳೆಯದು ಮಾಡುವುದಿಲ್ಲ ಎಂದರು.
ವೇದಿಕೆಯಲ್ಲಿ ಮಾಜಿ ಸಚಿವರಾದ, ಬಿ.ಶ್ರೀರಾಮುಲು, ಭೈರತಿ ಬಸವರಾಜ, ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ, ಶಾಸಕರಾದ ಬಸವರಾಜ ಮತ್ತಿಮಡು, ಅವಿನಾಶ್ ಜಾಧವ್, ಮಾಜಿ ಸಂಸದ ಭಗವಂತ ಖೂಬಾ, ಮಾಜಿ ಶಾಸಕ, ಪ್ರಧಾನ ಕ ಪಿ.ರಾಜೀವ್, ವಿಧಾನ ಪರಿಷತ್ ಸದಸ್ಯ ಬಿಜಿ.ಪಾಟೀಲ್, ಶಶೀಲ್ ನಮೋಶಿ, ಸುನಿಲ್ ವಲ್ಯಾಪುರ,ಎಂಪಿ ರೇಣುಕಾಚಾರ್ಯ, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಸೇರಿದಂತೆ ಹಲವರು ಇದ್ದರು.