Wednesday, August 10, 2022

Latest Posts

ವೃದ್ಧ ವಿಧವೆಯಿಂದ ರಾಮಮಂದಿರಕ್ಕೆ ₹ 11.02 ಲಕ್ಷ ದೇಣಿಗೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಭಕ್ತರು ತಮ್ಮ ದೇಣಿಗೆ ನೀಡುವುದು ಮುಂದುವರಿದಿದೆ. ವೃದ್ಧ ವಿಧವೆಯೊಬ್ಬರು ತಮ್ಮ ಪತಿ ಮತ್ತು ಪುತ್ರನ ನೆನಪಿಗಾಗಿ ₹ 11.02 ಲಕ್ಷಗಳನ್ನು ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಒಪ್ಪಿಸಿದ್ದಾರೆ.
ಸುಲ್ತಾನ್ ಪುರ ಜಿಲ್ಲೆಯ ಕುರೇಭಾರ್ ಮೂಲದ ಪ್ರಸಕ್ತ ಪ್ರಯಾಗ್‌ರಾಜ್‌ನ ಫಾಫಮೌ ನಿವಾಸಿ ಮಂಜುಳಾ ದೇವಿ ರಾಮ ಮಂದಿರಕ್ಕೆ ದೊಡ್ಡ ಮೊತ್ತದ ದೇಣಿಗೆ ನೀಡಿದವರು. ಅವರು ಕರಸೇವಕ ಪುರಂನಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರನ್ನು ಭೇಟಿ ಮಾಡಿ, ತಮ್ಮ ಸಂಪಾದನೆಯಲ್ಲಿ ಉಳಿತಾಯ ಮಾಡಿ 5.51 ಲಕ್ಷ ರೂ. ಮೊತ್ತದ ಎರಡು ಚೆಕ್‌ಗಳನ್ನು ನೀಡಿದ್ದಾರೆ.
ಮಂಜುಳಾ ದೇವಿ ಅವರ ಪತಿ ಶಿವಕುಮಾರ್ ತಿವಾರಿ ಭಾರತೀಯ ಸೇನೆಯಲ್ಲಿ ಯೋಧರಾಗಿದ್ದರು. ಅವರು 1988ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಆಗ ಅವರಿಗೆ 28ವರ್ಷ ಪ್ರಾಯ. ದುರದೃಷ್ಟವಶಾತ್ 2020ರಲ್ಲಿ, ಮಂಜುಳಾ ದೇವಿ ಅವರ ಏಕೈಕ ಪುತ್ರ ನರೇಂದ್ರ ತಿವಾರಿ ಕೂಡ 35ನೇ ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದರು. ಮಂಜುಳಾ ತಿವಾರಿ ಈಗ ಒಂಟಿ ಜೀವನ ನಡೆಸುತ್ತಿದ್ದಾರೆ. ತನ್ನ ಸಂಪಾದನೆಯಲ್ಲಿ ಸ್ವಲ್ಪ ಹಣವನ್ನು ಉಳಿಸಿ, ತನ್ನ ಗಂಡ ಮತ್ತು ಮಗನ ನೆನಪಿಗಾಗಿ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ.
ಮಂಜುಳಾ ದೇವಿ ಅವರು ನೀಡಿದ ಚೆಕ್ ಸ್ವೀಕರಿಸಿದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಟ್ರಸ್ಟ್‌ನ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ರಾಮ ಮಂದಿರ ನಿರ್ಮಾಣದಲ್ಲಿ ಅವರ ಸಹಕಾರಕ್ಕಾಗಿ ಟ್ರಸ್ಟ್ ಅವರನ್ನು ವಂದಿಸುತ್ತದೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss