ಕಾಡು ಹಂದಿಯ ಹತ್ಯೆ: ಮೂವರು ಆರೋಪಿಗಳ ಬಂಧನ

ಹೊಸದಿಗಂತ ವರದಿ, ಅಂಕೋಲಾ:

ತಾಲೂಕಿನ ಹೊಸಕಂಬಿ ವಲಯ ಅರಣ್ಯ ವ್ಯಾಪ್ತಿಯ ಮೊಗಟಾದಲ್ಲಿ ಕಾಡು ಹಂದಿ ಬೇಟೆಯಾಡಿ ಕೊಂದ ಮೂವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿ ಹಂದಿ ಮಾಂಸ ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ಬಳಲೆಯಲ್ಲಿ ವಾಸವಾಗಿರುವ ರಾಮಪ್ಪ ದುರ್ಗಪ್ಪ ಶಿರಾಳಕೊಪ್ಪ (43) ಮನೋಜ ರಾಮಪ್ಪ ಶಿರಾಳಕೊಪ್ಪ (18) ಮತ್ತು ಹುಬ್ಬಳ್ಳಿ ನಿವಾಸಿ ವಿನೋದ ಗಂಗಪ್ಪ ಚಂದ್ರವಳ್ಳಿ ಬಂದಿತ ಆರೋಪಿಗಳಾಗಿದ್ದು ಇವರು ಮೊಗಟಾ ಅರಣ್ಯ ವ್ಯಾಪ್ತಿಯಲ್ಲಿ ಕಾಡು ಹಂದಿ ಕೊಂದು ಸಾಗಿಸುತ್ತಿದ್ದ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತಕುಮಾರ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಅಣ್ಣಯ್ಯ ಗೌಡ ಅವರ ಮಾರ್ಗದರ್ಶನದಲ್ಲಿ ಹೊಸಕಂಬಿ ವಲಯ ಅರಣ್ಯಾಧಿಕಾರಿ ಸುರೇಶ ನಾಯ್ಕ, ಉಪ ವಲಯ ಅರಣ್ಯಾಧಿಕಾರಿ ಸತೀಶ ಕಾಂಬಳೆ, ಸಿ.ಆರ್. ನಾಯ್ಕ, ಪ್ರಶಾಂತ ಪಟಗಾರ, ಅಕ್ಷಯ ಕುಲಕರ್ಣಿ, ಅರಣ್ಯ ಪಾಲಕ ಪುಂಡಲೀಕ ತಾವರಖೇಡ, ಸಾಬು ಶೆಟ್ಟನವರ್,ಬಸವನಗೌಡ ಬಗಲಿ, ನಯನಾ ಗೌಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ನಂಬಲರ್ಹ ಮೂಲಗಳ ಪ್ರಕಾರ ಅಲೆಮಾರಿ ಜನಾಂಗದ ಆರೋಪಿಗಳು ಕಳೆದ ಹಲವಾರು ದಿನಗಳಿಂದ ಹೊಸಕಂಬಿ ವಲಯ ಅರಣ್ಯ ವ್ಯಾಪ್ತಿಯ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕಾಡು ಹಂದಿ ಬೇಟೆ ಮತ್ತು ಮಾಂಸ ಮಾರಾಟ ದಂಧೆಯಲ್ಲಿ ತೊಡಗಿದ್ದರು ಎನ್ನಲಾಗಿದ್ದು ಕಾಡು ಹಂದಿ ಮಾಂಸದ ಜೊತೆಗೆ ಊರ ಬದಿಯಲ್ಲಿ ಸಾಕಿರುವ ಹಂದಿ ಮಾಂಸವನ್ನೂ ಮಾರಾಟ ಮಾಡಿ ಜನರನ್ನು ವಂಚಿಸುತ್ತಿದ್ದರು.
ಕಾಡು ಹಂದಿ ಮಾಂಸವೆಂದು ನಂಬಿ ಇವರ ಬಳಿ ಹಲವಾರು ಜನ ಮಾಂಸ ಖರೀದಿಸಿ ತಮ್ಮ ಸಂಬಂಧಿಗಳಿಗೆ ಮತ್ತು ಸ್ನೇಹಿತರಿಗೂ ನೀಡಿರುವುದಾಗಿ ತಿಳಿದು ಬಂದಿದ್ದು ಯಾರಿಗೂ ಗೊತ್ತಾಗದ ರೀತಿಯಲ್ಲಿ ಆರೋಪಿತರು ತಮ್ಮ ವ್ಯವಹಾರ ಮುಂದುವರಿಸಿದ್ದರು.

ಸೋಮವಾರ ಬೆಳಗ್ಗೆ ಸಹ ಕಾಡು ಹಂದಿ ಬೇಟೆಯಾಡಿದ ಆರೋಪಿಗಳು ಜನರನ್ನು ವಂಚಿಸಲು ಅರಣ್ಯ ಪ್ರದೇಶದಲ್ಲಿ ಸಾಕು ಹಂದಿಗಳನ್ನು ಕೊಂದು ಮಾಂಸ ಮಾಡುತ್ತಿರುವುದು ಕೆಲವರ ಗಮನಕ್ಕೆ ಬಂದಿದ್ದು ಮೋಸ ಹೋಗಿರುವ ಜನ ಇವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಬೇಟೆ ಮಾಂಸ ಕಡಿಮೆ ದರದಲ್ಲಿ ಸಿಗುತ್ತಿದೆ ಎಂದು ತಿಳಿದುಕೊಂಡ ಜನರಿಗೆ ತಮಗೆ ಮಾರಾಟ ಮಾಡುತ್ತಿದ್ದ ಮಾಂಸವೇ ಬೇರೆ ಎಂದು ತಿಳಿದು ಶಾಕ್ ಆಗಿದೆ. ಈ ಕುರಿತು ಅರಣ್ಯ ಇಲಾಖೆಗೂ ಮಾಹಿತಿ ದೊರಕಿ ಬೇಟೆಯಾಡಿದ ಹಂದಿ ಮಾಂಸ ಮಾಡಲು ಬಳಸುವ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!