ಜಾಗತಿಕ ಡ್ರೋನ್ ಮಾರುಕಟ್ಟೆಯಲ್ಲಿ ಚೀನಾವನ್ನು ಹಣಿದೀತೇ ಭಾರತ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಡ್ರೋನ್‌ ಉದ್ಯಮವು ಭಾರತದಲ್ಲಿ ಬಹುದೊಡ್ಡದಾಗಿ ಬೇರೂರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಮೂರುದಿನಗಳ ಕಾಲ ನಡೆಯಲಿರುವ ಬೃಹತ್ ಡ್ರೋನ್‌ ಮೇಳವನ್ನು ಪ್ರಧಾನಿ ಮೋದಿಯವರು ಉದ್ಘಾಟಿಸಿದ್ಧಾರೆ.

“ಡ್ರೋನ್‌ ತಂತ್ರಜ್ಞಾನವು ಹೊಸ ಕ್ರಾಂತಿಯನ್ನು ಸೃಷ್ಟಿಸಲಿದೆ. ಕೃಷಿ, ಆರೋಗ್ಯ, ಪರಿಸರ, ಡಿಜಿಟಲ್‌ ಮ್ಯಾಪಿಂಗ್‌ ಹೀಗೆ ಪ್ರತೀ ಕ್ಷೇತ್ರದಲ್ಲೂ ಡ್ರೋನ್‌ ಬಳಕೆ ಸಾಧ್ಯ. ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮುಂದುವರಿಯಲು ಡ್ರೋನ್‌ ಕೊಡುಗೆ ಸಾಕಷ್ಟಿದೆ. ಮುಂದಿನ ದಿನಗಳಲ್ಲಿ ಡ್ರೋನ್‌ ʼಗೇಮ್‌ ಛೇಂಜರ್ʼ ಆಗಲಿದೆ. ಭಾರತವು ಡ್ರೋನ್‌ ಬಳಕೆಯ ಮೂಲಕ ಅಭಿವೃದ್ಧಿ ಹೊಂದಲಿದೆ” ಎಂದು ಮೋದಿ ಹೇಳಿದ್ದಾರೆ. ಇದಕ್ಕೆ ಪೂರಕವೆಂಬಂತೆ ಭಾರತದ ಡ್ರೋನ್‌ ಉದ್ಯಮವು ಜಾಗತಿಕವಾಗಿ ತನ್ನ ಛಾಪು ಮೂಡಿಸುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.

ಇಂತಹ ವಿಷಯಗಳಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುವ ಚೀನಾ ಈಗಾಗಲೇ ಡ್ರೋನ್‌ ಗಳನ್ನು ಉತ್ಪಾದಿಸಿ ರಫ್ತು ಮಾಡುವ ಹಂತದಲ್ಲಿದೆಯಾದರೂ ಇತರ ರಾಷ್ಟ್ರಗಳು ಚೀನಾ ಡ್ರೋನ್‌ಗಳನ್ನು ಖರಿದಿಸಲು ಮುಂದೆ ಬರುತ್ತಿಲ್ಲ. ಚೀನಾವು ತನ್ನ ಡ್ರೋನ್‌ಗಳ ಮೂಲಕ ಡೇಟಾಗಳನ್ನು ಸಂಗ್ರಹಿಸಿ ಅದನ್ನು ತನ್ನ ಮೂಲ ದೇಶದ ಸರ್ವರ್‌ಗಳಿಗೆ ಕಳುಹಿಸುತ್ತದೆ ಎಂದು ಹಲವರು ಅನುಮಾನದಿಂದ ಡ್ರೋನ್‌ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಚೀನಾದ ಕುತಂತ್ರಿ ಬುದ್ಧಿಯಿಂದ ಅದರ ತಂತ್ರಜ್ಞಾನಗಳು ನಂಬಿಕೆ ಕಳೆದುಕೊಂಡಿವೆ. ಇದು ಸತ್ಯ ಎಂಬಂತೆ ಚೀನಾದ ಪ್ರಸಿದ್ಧ ಡ್ರೋನ್‌ ಕಂಪನಿ ಡಿಜೆಐ ಮೇಲೆ ಅಮೆರಿಕ ನಿಷೇಧ ಹೇರಿತ್ತು. ಇದರ ಪರಿಣಾಮವಾಗಿ ಚೀನಾದ ಡ್ರೋನ್‌ ಉದ್ಯಮ ನೆಲಕಚ್ಚುವ ಹಂತ ತಲುಪುತ್ತಿದೆ.

ಇದು ಭಾರತದ ಡ್ರೋನ್‌ ತಯಾರಿಕಾ ಕಂಪನಿಗಳಿಗೆ ವರದಾನವಾಗಿ ಪರಿಣಮಿಸಲಿದೆ. ಚೀನಾವನ್ನು ನಂಬದ ಅದೆಷ್ಟೋ ಕಂಪನಿಗಳು ಭಾರತದ ತಂತ್ರಜ್ಞಾನದ ಮೇಲೆ ನಂಬಿಕೆ ವ್ಯಕ್ತಪಡಿಸಿದ್ದಾರೆ. ಭಾರತದ ತಂತ್ರಜ್ಞಾನವು ಗುಣಮಟ್ಟದ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಪೂರೈಸುತ್ತದೆ ಎಂಬ ನಂಬಿಕೆ ಅವರದ್ದು. ಈಗಾಗಲೇ ಭಾರತದ ಡ್ರೋನ್‌ ತಯಾರಿಕಾ ಕಂಪನಿ ಏರೋಡೈನ್‌ ತಯಾರಿಸಿರುವ ಡ್ರೋನ್‌ ಗಳು ಮೆಚ್ಚುಗೆಗೆ ಪಾತ್ರವಾಗಿದ್ದು ಬೇಡಿಕೆ ಹೆಚ್ಚುತ್ತಿರುವ ಕಾರಣ ಅದು ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಜೊತೆಗೆ ಇತರ ಡ್ರೋನ್‌ ತಯಾರಿಕಾ ಕಂಪನಿಗಳಿಗೂ ಬೇಡಿಕೆ ಹೆಚ್ಚಾಗಿದ್ದು ಗಲ್ಫ್‌ ರಾಷ್ಟ್ರಗಳು ಸೇರಿದಂತೆ ಇತರ ಹಲವಾರು ರಾಷ್ಟ್ರಗಳು ಭಾರತದ ಡ್ರೋನ್‌ ಖರೀದಿಸಲು ಮುಂದಾಗಿವೆ.

ಅಲ್ಲದೇ ಭಾರತದ ಗರುಡಾ ಏರೋಸ್ಪೇಸ್‌ ಕಂಪನಿಗೆ ಮಲೇಷ್ಯಾ, ದಕ್ಷಿಣ ಅಮೆರಿಕ, ಪನಾಮಾ, ಹಾಗೂ ಆಫ್ರಿಕಾದ ಹಲವು ದೇಶಗಳು ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಬಳಸುವ 12,000 ಡ್ರೋನ್‌ ಗಳನ್ನು ತಯಾರಿಸಿ ಕೊಡುವಂತೆ ಬೇಡಿಕೆಯಿಟ್ಟಿವೆ. ಹಾಗಾಗಿ ಡ್ರೋನ್‌ ಕ್ಷೇತ್ರದಲ್ಲಿ ಜಗತ್ತು ಮುನ್ನಡೆಯಲೆತ್ನಿಸುತ್ತಿರುವಾಗ ಭರವಸೆ ಮೂಡಿಸುತ್ತಿರುವ ಭಾರತದ ಡ್ರೋನ್‌ ತಂತ್ರಜ್ಞಾನವು ಮುಂದಿನ ದಿನಗಳಲ್ಲಿ ಭಾರತವು ಜಾಗತಿಕ ಡ್ರೋನ್‌ ಹಬ್‌ ಆಗಿ ನಿರ್ಮಾಣವಾಗುವ ಭರವಸೆ ಮೂಡಿಸಿದಂತೆ ಗೋಚರಿಸುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!