ಆಸ್ಕರ್‌ ವೇದಿಕೆ ಮೇಲೆಯೇ ಸಹನಟನಿಗೆ ಕಪಾಳಮೋಕ್ಷ ಮಾಡಿದ ನಟ ವಿಲ್‌ ಸ್ಮಿತ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಮೇರಿಕಾದ ಲಾಸ್‌ ಏಂಜಲೀಸ್‌ ನಲ್ಲಿ ನಡೆದ ಪ್ರತಿಷ್ಠಿತ ಆಸ್ಕರ್​ ಪ್ರಶಸ್ತಿ ಸಮಾರಂಭದಲ್ಲಿ ಅನಪೇಕ್ಷಿತ ಘಟನೆಯೊಂದು ನಡೆದಿದೆ. ಈ ಬಾರಿಯ ಅತ್ತುತ್ತಮ ನಟ ಪ್ರಶಸ್ತಿ ಗೆದ್ದ ಖ್ಯಾತ ನಟ ವಿಲ್ ಸ್ಮಿತ್ ವೇದಿಕೆ ಮೇಲೆ ತನ್ನ ಸಹನಟನಿಗೆ ಕಪಾಳ ಮೋಕ್ಷ ಮಾಡಿದ್ದಾರೆ.
ನಟ ವಿಲ್‌ ಸ್ಮಿತ್‌ ಹಾಗೂ ಪತ್ನಿ ಜಾಡಾ ಪಿಂಕೆಟ್‌ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಹಾಜರಿದ್ದರು. ವೇದಿಕೆ ಮೇಲೆ ಮಾತನಾಡುತ್ತಿದ್ದ ಹಾಸ್ಯ ನಟ ಕ್ರಿಸ್​ ರಾಕ್​ ಅವರು ವಿಲ್​ ಸ್ಮಿತ್​ ಪತ್ನಿ ಜೇಡಾ ಪಿಂಕೆಟ್​ ಸ್ಮಿತ್​ ಅವರು ತಲೆ ಬೋಳಿಸಿಕೊಂಡಿರುವುದರ ಬಗ್ಗೆ ಜೋಕ್​ ಮಾಡಿದರು. ಇದು ವಿಲ್​ ಸ್ಮಿತ್​ ಅವರಿಗೆ ಸರಿ ಕಾಣಲಿಲ್ಲ. ಮರುಕ್ಷಣವೇ ವೇದಿಕೆ ಏರಿದ ಅವರು ಕ್ರಿಸ್​ ರಾಕ್​ ಕಪಾಳಕ್ಕೆ ಬಾರಿಸಿದರು. ಅಲ್ಲಿಯವರೆಗೆ ಖುಷಿ ಖುಷಿಯಾಗಿ, ಲವಲವಿಕೆಯಿಂದ ಕಾರ್ಯಕ್ರಮ ಆಸ್ವಾದಿಸುತ್ತಿದ್ದವರೆಲ್ಲ ಒಂದು ಕ್ಷಣ ಸ್ತಬ್ದರಾದರು.

ಇದು ತಮಾಷೆಯ ಪ್ರಸಂಗವೆಂದೇ ಪ್ರಾರಂಭದಲ್ಲಿ ಎಲ್ಲರೂ ಭಾವಿಸಿದ್ದರು. ಆದರೆ ಆಸ್ಕರ್‌ ಆಯೋಜಕರು ಸ್ಮಿತ್‌ ಹಾಗೂ ಕ್ರಿಸ್‌ ರಾಕ್‌ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದಾಗ ಇದರ ಗಂಭೀರತೆ ತಿಳಿಯಿತು. ವೇದಿಕೆ ಇಳಿದ ಬಳಿಕವೂ ವಿಲ್‌ ಸ್ಮಿತ್‌ ಕೋಪ ತಣ್ಣಗಾಗಲಿಲ್ಲ. ನಿನ್ನ ಕೊಳಕಾದ ಬಾಯಿಯಿಂದ ನನ್ನ ಪತ್ನಿ ಹೆಸರು ಎತ್ತಬೇಡ ಎಂದು ಎಚ್ಚರಿಸಿದರು. ಇದಾದ ನಂತರ ಕ್ರಿಸ್‌ ರಾಕ್‌ ಕಾರ್ಯಕ್ರಮವನ್ನು ಮುಂದುವರೆಸಿದರು. ಬಳಿಕ ಕಾರ್ಯಕ್ರಮದಲ್ಲಿ ವಿಲ್‌ ಸ್ಮಿತ್‌ ಕಣ್ಣೀರಿಟ್ಟು ನಡೆದ ಘಟನೆಗೆ ಕ್ಷಮೆಯಾಚಿಸಿದ್ದಾರೆ. ಈ ಕುರಿತ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಅಂದಹಾಗೆ ವಿಲ್‌ ಸ್ಮಿತ್‌ ʼಕಿಂಗ್​ ರಿಚರ್ಡ್’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅವರು ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!