ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರೋನಾ ವೈರಸ್ ರೂಪಾಂತರಿ ಈಗಾಗಲೇ ದೇಶಕ್ಕೆ ಪ್ರವೇಶಿಸಿದ್ದು, ಇನ್ನೇನು ಕೆಲವೇ ತಿಂಗಳಲ್ಲಿ ಕೊರೋನಾ ಮೂರನೇ ಅಲೆ ಏಳುವ ಸಾಧ್ಯತೆಯಿದೆ ಎಂದು ಐಐಟಿ ವಿಜ್ಞಾನಿ ಮಣೀಂದ್ರ ಅಗರ್ವಾಲ್ ಹೇಳಿದ್ದಾರೆ.
ಗಣಿತಶಾಸ್ತ್ರೀಯ ಮಾದರಿಯ ಆಧಾರದ ಮೇಲೆ ಸೋಂಕು ಫೆಬ್ರವರಿಯಲ್ಲಿ ಹೆಚ್ಚಾಗಲಿದೆ ಎಂದು ಅಂದಾಜಿಸಿದ್ದಾರೆ.
ಮೂರನೇ ಅಲೆಗೆ ಒಮಿಕ್ರಾನ್ ಕಾರಣವಾಗಲಿದೆ. ಆದರೆ ಎರಡನೇ ಅಲೆಯಷ್ಟು ಮೂರನೇ ಅಲೆ ತೀವ್ರತೆ ಹೊಂದಿರುವುದಿಲ್ಲ. ಸೌಮ್ಯ ಸ್ವರೂಪದಲ್ಲಿ ಮೂರನೆ ಅಲೆ ಇರಲಿದೆ. ಆದರೆ ನಿರ್ಲಕ್ಷ್ಯ ಮಾಡಿದರೆ ನಾಲ್ಕನೇ ಅಲೆಗೆ ಇದು ಕಾರಣವಾಗಬಹುದು. ಮೂರನೇ ಅಲೆ ಫೆಬ್ರವರಿಯಲ್ಲಿ ಬರುವ ಹೆಚ್ಚಿನ ಸಾಧ್ಯತೆಗಳಿವೆ
ಡೆಲ್ಟಾಗೆ ಹೋಲಿಸಿದರೆ ಒಮಿಕ್ರಾನ್ ಸೋಂಕಿತರಲ್ಲಿ ಅಷ್ಟು ತೀವ್ರತೆ ಕಂಡುಬಂದಿಲ್ಲ. ಆದರೂ ಒಮಿಕ್ರಾನ್ನನ್ನು ಕಡೆಗಣಿಸುವಂತೆಯೂ ಇಲ್ಲ. ದಕ್ಷಿಣ ಆಫ್ರಿಕಾದಿಂದ ಬರುವವರ ಮೇಲೆ ಕಣ್ಣಿಡಬೇಕಿದೆ. ಒಮಿಕ್ರಾನ್ ಹೊಸ ದತ್ತಾಂಶಗಳು, ಆಸ್ಪತ್ರೆ ಸೇರುವವರ ಸಂಖ್ಯೆ ವೈರಸ್ ಹರಡುವಿಕೆಯ ಸ್ಪಷ್ಟ ಚಿತ್ರಣ ನೀಡಲಿದೆ ಎಂದಿದ್ದಾರೆ.
ವಿಜ್ಞಾನಿಗಳ ಮಾಹಿತಿ ಅನ್ವಯ ಹೊಸ ತಳಿ ಪತ್ತೆಯಾಗಿದ್ದರೆ ಅಕ್ಟೋಬರ್ನಲ್ಲಿಯೇ ಮೂರನೆ ಅಲೆ ಸೃಷ್ಟಿಯಾಗಬೇಕಿತ್ತು. ನವೆಂಬರ್ ಕಡೆವರೆಗೂ ಯಾವುದೇ ಹೊಸ ತಳಿ ಕಾಣದ ಕಾರಣ ಮೂರನೇ ಅಲೆ ಬಗ್ಗೆ ಯಾರೂ ಚಿಂತಿಸಿರಲಿಲ್ಲ. ಆದರೆ ಇದೀಗ ಒಮಿಕ್ರಾನ್ ಕಾಲಿಟ್ಟಿದ್ದು, ಜಾಗರೂಕರಾಗಿ ಇರಬೇಕಿದೆ ಎಂದಿದ್ದಾರೆ.