ಭಾರತಕ್ಕೆ ಬರಲಿವೆಯೇ ಯಾಲೆ, ಸ್ಟಾನ್ಫೋರ್ಡ್, ಆಕ್ಸಫರ್ಡ್ ವಿದ್ಯಾಕೇಂದ್ರಗಳು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹೆಚ್ಚಿನ ಸಂಬಳವನ್ನರಸಿ ವಿದೇಶಕ್ಕೆ ಹಾರುವ ಅನೇಕರನ್ನು ನೀವು ನೋಡಿರುತ್ತೀರಿ, ಆದರೆ ಇತ್ತೀಚೆಗಿನ ಕೆಲ ವರ್ಷಗಳಲ್ಲಿ ಉನ್ನತ ಶಿಕ್ಷಣವನ್ನರಸಿ ವಿದೇಶಗಳಿಗೆ ಹೋಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ. ಉನ್ನತ ವ್ಯಾಸಂಗಕ್ಕೆ ಪ್ರಪಂಚದ ಹೆಸರಾಂತ ವಿಶ್ವವಿದ್ಯಾಲಯಗಳನ್ನರಸಿ ಹೋಗುವವರ ಸಂಖ್ಯೆ ಮುಂಚಿನಿಂದಲೂ ಇದೆಯಾದರೂ ಆ ಸಂಖ್ಯೆ ಅಲ್ಪವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ವಿದ್ಯಾಭ್ಯಾಸಕ್ಕೆಂದು ಹೊರದೇಶಕ್ಕೆ ಹೋಗುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ ಮೋದಿ ಸರ್ಕಾರವು ಹೊಸದೊಂದು ಉಪಕ್ರಮವನ್ನು ಕೈಗೆತ್ತಿಕೊಂಡಿದ್ದು ಇದರ ಅಡಿಯಲ್ಲಿ ವಿದೇಶಿ ವಿಶ್ವ ವಿದ್ಯಾಲಯಗಳು ಭಾರತದಲ್ಲೇ ತಮ್ಮ ಕ್ಯಾಂಪಸ್‌ ಗಳನ್ನು ತೆರೆಯಲು ಅನುಕೂಲವಾಗಲಿದೆ.

ಭಾರತದ ಶಿಕ್ಷಣ ಗುಣಮಟ್ಟವನ್ನು ಇನ್ನಷ್ಟು ಉನ್ನತವನ್ನಾಗಿಸುವ ನಿಟ್ಟಿನಲ್ಲಿ ಈ ಪ್ರಯತ್ನಕ್ಕೆ ಕೈ ಹಾಕಲಾಗಿದ್ದು ಹೆಸರಾಂತ ವಿಶ್ವ ವಿದ್ಯಾಲಯಗಳಾದ ಯಾಲೆ, ಸ್ಟಾನ್ಫೋರ್ಡ್, ಆಕ್ಸಫರ್ಡ್ ನಂತಹ ವಿವಿಗಳಿಗೆ ಭಾರತದಲ್ಲಿ ತಮ್ಮ ಕೇಂದ್ರ ಸ್ಥಾಪಿಸಲು ಅವಕಾಶವಾಗಲಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ವಿದೇಶಿ ವಿದ್ಯಾ ಸಂಸ್ಥೆಗಳಿಗೆ ಕ್ಯಾಂಪಸ್‌ ಸ್ಥಾಪಿಸಲು ಅವಕಾಶ ನೀಡುವ ಶಾಸನದ ಕರಡು ಪ್ರತಿಯನ್ನು ಸಾರ್ವಜನಿಕ ಪ್ರತಿಕ್ರಿಯೆಗಾಗಿ ಯುಜಿಸಿ ಅನಾವರಣಗೊಳಿಸಿದೆ. ಕರಡು ನಿಯಮದ ಪ್ರಕಾರ ದೇಶೀಯ ಮತ್ತು ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶ ಮಾನದಂಡಗಳು, ಶುಲ್ಕ ರಚನೆ ಮತ್ತು ವಿದ್ಯಾರ್ಥಿವೇತನ ಇತ್ಯಾದಿಗಳನ್ನು ಸಂಸ್ಥೆಗಳೇ ನಿರ್ಧರಿಸಬಹುದಾಗಿದ್ದು ಅಧ್ಯಾಪಕರು ಮತ್ತು ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಸಂಸ್ಥೆಗಳು ಸ್ವಾಯತ್ತತೆಯನ್ನು ಹೊಂದಿರುತ್ತವೆ.

ಭಾರತೀಯ ವಿದ್ಯಾರ್ಥಿಗಳು ಕೈಗೆಟುಕುವ ವೆಚ್ಚದಲ್ಲಿ ವಿದೇಶಿ ಅರ್ಹತೆಗಳನ್ನು ಪಡೆಯಲು ಮತ್ತು ಭಾರತವನ್ನು ಜಾಗತಿಕ ಅಧ್ಯಯನ ತಾಣವನ್ನಾಗಿ ಮಾಡಲು ಈ ಯೋಜನೆ ಸಹಾಯಕವಾಗಲಿದೆ.

ಗೂಗಲ್‌, ಮೈಕ್ರೋಸಾಫ್ಟ್‌ ನಂತಹ ದೈತ್ಯ ಕಂಪನಿಗಳಲ್ಲಿ ಉನ್ನತ ಸ್ಥಾನದಲ್ಲಿರುವವರನ್ನು ಭಾರತದ ವಿವಿಗಳು ಹೊರಹಾಕಿವೆ ಎಂಬುದು ನಿಜವಾದರೂ ಜಾಗತಿಕ ಶ್ರೇಯಾಂಕಗಳ ಆಧಾರದಲ್ಲಿ ಹೇಳುವುದಾದರೆ ಭಾರತವು ಕೆಳ ಸ್ಥಾನದಲ್ಲಿವೆ. 2022 ರ ಜಾಗತಿಕ ಪ್ರತಿಭೆ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ 133 ರಾಷ್ಟ್ರಗಳಲ್ಲಿ ಭಾರತವು 101 ನೇ ಸ್ಥಾನದಲ್ಲಿದೆ. ಹಾಗಾಗಿ ಸ್ಫರ್ಧಾತ್ಮಕ ಜಗತ್ತಿನಲ್ಲಿ ಸ್ಥಾನಮಾನ ಹೆಚ್ಚಿಸುವತ್ತ ಕ್ರಮಗಳನ್ನು ಕೈಗೊಳ್ಳಬೇಕಿರುವ ಅನಿವಾರ್ಯತೆ ಇದೆ.

ಕೆಲವು ವಿಶ್ವವಿದ್ಯಾನಿಲಯಗಳು ಈಗಾಗಲೇ ಭಾರತೀಯ ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಹೊಂದಿವೆ. ಇದರ ಅಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳು ಭಾಗಶಃ ಅಧ್ಯಯನವನ್ನು ಭಾರತದಲ್ಲಿ ಮುಗಿಸಿ, ನಂತರದಲ್ಲಿ ವಿದೇಶದಲ್ಲಿರುವ ಕೇಂದ್ರ ಕ್ಯಾಂಪಸ್‌ ನಲ್ಲಿ ಅಧ್ಯಯನ ಮುಂದುವರಿಸಬಹುದಾಗಿದೆ. ಹೀಗಾಗಿ ಈ ಕರಡು ಸ್ಥಳೀಯ ಪಾಲುದಾರರಿಲ್ಲದೇ ನೇರವಾಗಿ ಭಾರತದಲ್ಲಿ ತಮ್ಮ ಕೇಂದ್ರಗಳನ್ನು ಸ್ಥಾಪಿಸಲು ವಿದೇಶಿ ವಿವಿಗಳಿಗೆ ಅನುವು ಮಾಡಿಕೊಡಲಿದೆ.

ಪ್ರಸ್ತುತ ಈ ಶಾಸನದ ಕರಡು ಸಿದ್ಧವಾಗಿದ್ದು ಸಂಸತ್ತಿನ ಅನುಮೋದನೆಯ ನಂತರ ಕಾನೂನಾಗಿ ಜಾರಿಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!