ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ನದಿಗಳ ನೀರು ಉಕ್ಕಿ ಹರಿಯುತ್ತಿದ್ದು, ಕೆಲವು ಪ್ರದೇಶಗಳು ಮುಳಗಡೆಯಾಗಿವೆ.
ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ ಕಡಲತೀರಕ್ಕೆ ಪ್ರವಾಸಿಗರು ಬರುವುದನ್ನು ನಿರ್ಬಂಧಿಸಿದೆ. ಮುರ್ಡೇಶ್ವರ ಮತ್ತು ಕಾರವಾರ ಕಡಲತೀರದಲ್ಲಿ ಕೆಂಪು ಬಾವುಟ ನೆಟ್ಟಿದ್ದು, ಪ್ರವಾಸಿಗರು ಆಗಮಿಸಿದಂತೆ ಸೂಚನೆ ನೀಡಲಾಗಿದೆ.
ಬಿರುಗಾಳಿಯ ಸಂದರ್ಭ ಸಮುದ್ರದ ಅಲೆಗಳು 2-7 ಮೀಟರ್ನಿಂದ 3.3 ಮೀಟರ್ ಎತ್ತರದ ತನಕ ಏಳುವ ಸಾಧ್ಯತೆ ಇದ್ದು, ಮೀನುಗಾರರಿಗೆ ಮತ್ತು ಸಮುದ್ರದಲ್ಲಿ ಇಳಿಯುವರಿಗೆ ತೀರಾ ಅಪಾಯಕಾರಿಯಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಪ್ರವಾಸಿಗರಿಗೆ ಮತ್ತು ಮೀನುಗಾರಿಕೆಗೆ ನಿಷೇಧ ಹೇರಿದ್ದಾರೆ.
ನದಿ ಜಲಪಾತಗಳಿಗೆ ಇಳಿಯದಂತೆ ಆದೇಶ
ಕೊಡಗು ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹೀಗಾಗಿ ನದಿ, ತೊರೆ, ಜಲಪಾತಗಳಿಗೆ ಇಳಿಯುವುದು, ಸ್ನಾನ ಮಾಡುವುದನ್ನು ನಿಷೇಧಿಸಿ ಕೊಡಗು ಜಿಲ್ಲಾಧಿಕಾರಿ ಕೆ. ವೆಂಕಟರಾಜ ಅವರು ಆದೇಶ ಹೊರಡಿಸಿದ್ದಾರೆ.
ತುಂಬಿ ಹರಿಯುತ್ತಿರುವ ನದಿಗಳು
ಕರಾವಳಿ ಹಾಗೂ ಪಶ್ಚಿಮ ಘಟ್ಟದಲ್ಲಿ ಮಳೆ ಅಬ್ಬರ ಮುಂದುವರೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಫಾಲ್ಗುಣಿ ನದಿಯಲ್ಲಿ ನೀರಿನ ಒಳ ಹರಿವು ಹೆಚ್ಚಿದೆ. ಮಂಗಳೂರಿನ ಮರವೂರು ಕಿಂಡಿ ಅಣೆಕಟ್ಟಿನ ಎಲ್ಲಾ ಗೇಟ್ಗಳನ್ನು ತೆರೆಯಲಾಗಿದೆ. ಮಳೆ ಹೀಗೆ ಮುಂದುವರೆದರೇ ಮರವೂರು ಡ್ಯಾಂ ಸುತ್ತಲಿನ ಪ್ರದೇಶಗಳು ಮುಳುಗಡೆಯಾಗುವ ಸಾಧ್ಯತೆ ಇದೆ.
ಮುಂದಿನ ಮೂರು ದಿನಕ್ಕೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮೈಸೂರು, ಹಾಸನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.