ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………
ಹೊಸ ದಿಗಂತ ವರದಿ, ಮಡಿಕೇರಿ :
ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಬರುತ್ತಿದ್ದು, ಮೂರನೇ ಅಲೆಯನ್ನು ಎದುರಿಸಲು ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ. ಆ ದಿಸೆಯಲ್ಲಿ ಪ್ರತೀ 15 ದಿನಕ್ಕೊಮ್ಮೆ ಜಿಲ್ಲಾಧಿಕಾರಿ ಹಾಗೂ ಜಿಲ್ಲೆಯ ಶಾಸಕರ ಉಪಸ್ಥಿತಿಯಲ್ಲಿ ಕಾರ್ಯಪಡೆ ಸಮಿತಿ ಸಭೆ ನಡೆಸಬೇಕು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಸಲಹೆ ಮಾಡಿದ್ದಾರೆ.
ನಗರದ ಜಿ.ಪಂ.ಸಭಾಂಗಣದಲ್ಲಿ ಶುಕ್ರವಾರ ಕೋವಿಡ್-19 ನಿಯಂತ್ರಣ ಹಾಗೂ ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.
ಕೋವಿಡ್-19 ನಿಯಂತ್ರಿಸುವಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕು. ಕೋವಿಡ್ ಸೋಂಕಿತ ಪ್ರಕರಣ ಮತ್ತು ಮರಣ ಪ್ರಮಾಣವನ್ನು ಇನ್ನು ಒಂದು ವಾರದಲ್ಲಿ ಸೊನ್ನೆಗೆ ತರಬೇಕು ಎಂದು ಸಚಿವರು ಸ್ಪಷ್ಟ ನಿರ್ದೇಶನ ನೀಡಿದರು.
ಮೂರನೇ ಅಲೆ ತಡೆಯಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಿ
ಕೋವಿಡ್-19 ಮೊದಲ ಮತ್ತು ಎರಡನೇ ಅಲೆ ಪಾಠವಾಗಬೇಕು. ಆ ದಿಸೆಯಲ್ಲಿ ಮೂರನೇ ಅಲೆಯನ್ನು ತಡೆಯಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಕೋವಿಡ್ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿವೆ ಎಂದು ಮೈಮರೆಯಬಾರದು. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಎಚ್ಚರಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಹೊರಗುತ್ತಿಗೆಯಡಿ ನೇಮಕಗೊಂಡಿರುವ ಸಿಬ್ಬಂದಿಗಳಿಗೆ ಕಾಲ ಕಾಲಕ್ಕೆ ವೇತನ ಪಾವತಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಆ ದಿಸೆಯಲ್ಲಿ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಅನುದಾನವನ್ನು ಬಳಸಿಕೊಳ್ಳಬಹುದೆಂದು ಸಚಿವರು ನಿರ್ದೇಶನ ನೀಡಿದರು.
ತಜ್ಞ ವೈದ್ಯರು, ವೈದ್ಯರು, ಶುಶ್ರೂಷಕರು, ಎಎನ್ಎಂಗಳು ಹೀಗೆ ಹಲವು ಸಿಬ್ಬಂದಿಗಳನ್ನು ನೇರ ಸಂದರ್ಶನದ ಮೂಲಕ ಅರ್ಹರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದರು.
ಕುಗ್ರಾಮಗಳಿಗೆ ಆರೋಗ್ಯ ಸೇವೆ : ಕುಗ್ರಾಮಗಳಿಗೆ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಕೊಡಗು ಬೆಟ್ಟಗುಡ್ಡ ಪ್ರದೇಶವಾಗಿರುವುದರಿಂದ ಜನರು ದೂರದ ಊರಿನಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರಲು ತೊಂದರೆಯಾಗಲಿದೆ. ಆದ್ದರಿಂದ ಹತ್ತಿರದಲ್ಲೇ ಆರೋಗ್ಯ ಸೇವೆ ಕಲ್ಪಿಸಲು ಮುಂದಾಗಬೇಕು ಎಂದು ಸಚಿವರು ಸಲಹೆ ಮಾಡಿದರು.
ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಬರುತ್ತಿದೆ. ಆದರೂ ಮತ್ತಷ್ಟು ಎಚ್ಚರ ವಹಿಸಬೇಕಿದೆ. ಸೋಂಕಿತರನ್ನು ಗೃಹ ಸಂಪರ್ಕ ತಡೆಯಲ್ಲಿರಿಸದೆ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲು ಮಾಡಬೇಕು ಎಂದು ಸೂಚಿಸಿದರು.
‘ವೈದ್ಯರ ನಡೆ ಗ್ರಾಮದ ಕಡೆಗೆ’ ಎಂಬಂತೆ ‘ಶಾಸಕರ ನಡೆ ಹಳ್ಳಿಯ ಕಡೆಗೆ’ ಎಂಬ ಕಾರ್ಯಕ್ರಮದಡಿ ಪ್ರತೀ ಗ್ರಾ.ಪಂ.ಗಳಿಗೆ ಭೇಟಿ ನೀಡಿ ಕಾರ್ಯಪಡೆ ಸಮಿತಿ ಸಭೆ ನಡೆಸಲಾಗಿದೆ. 50 ಮನೆಗಳಿಗೆ ಒಂದರಂತೆ ಕಾರ್ಯಪಡೆ ಸಮಿತಿ ರಚಿಸಲಾಗಿದೆ ಎಂದು ಶಾಸಕರು ಹೇಳಿದರು.
ಮುಂಗಾರು ಆರಂಭಗೊಂಡಿದ್ದು, ಕಾಫಿ, ಭತ್ತ ಸೇರಿದಂತೆ ಕೃಷಿ ಚಟುವಟಿಕೆಗೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಆದರೆ ವಾಹನದಲ್ಲಿ ಕರೆದುಕೊಂಡು ಹೋಗುವಾಗ ಸರ್ಕಾರದ ಕೋವಿಡ್ ನಿಯಮವನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಅವರು ಸಲಹೆ ಮಾಡಿದರು.
ಗಾಳಿಬೀಡು ಹಾಗೂ ಹೊದ್ದೂರಿಗೆ ಶುಶ್ರೂಷಕರು ಹಾಗೂ ಎಎನ್ಎಂಗಳನ್ನು ಎರಡು ದಿನದೊಳಗೆ ನಿಯೋಜಿಸುವಂತೆ ಅಪ್ಪಚ್ಚು ರಂಜನ್ ಅವರು ಸೂಚಿಸಿದರು.
ಕೋವಿಡ್-19 ನಿಂದ ಮೃತಪಟ್ಟವರ ಶವ ಸಂಸ್ಕಾರ ಮಾಡುವಲ್ಲಿ ಜಿಲ್ಲೆಯ ವಿಶ್ವ ಹಿಂದೂ ಪರಿಷತ್, ಭಜರಂಗ ದಳದವರು ತುಂಬಾ ಶ್ರಮಿಸಿದ್ದಾರೆ ಎಂದು ಶಾಸಕರು ಸ್ಮರಿಸಿದರು.
ಗೃಹ ಸಂಪರ್ಕ ತಡೆ ಬೇಡ: ಶಾಸಕ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ಲೈನ್ಮನೆಗಳಲ್ಲಿ ವಾಸಿಸುವ ಕೂಲಿ ಕಾರ್ಮಿಕರು ಹಾಗೂ ಹಾಡಿಗಳಲ್ಲಿ ವಾಸಿಸುವ ಆದಿವಾಸಿಗಳು ಗೃಹ ಸಂಪರ್ಕ ತಡೆಯಲ್ಲಿ ಇರಲು ಸಾಧ್ಯವೇ. ಆದ್ದರಿಂದ ಪ್ರತಿಯೊಬ್ಬರನ್ನೂ ಮನವರಿಕೆ ಮಾಡಿ ಕೋವಿಡ್ ಆರೈಕೆ ಕೇಂದ್ರಕ್ಕೆ ಸೇರ್ಪಡೆ ಮಾಡಬೇಕು ಎಂದು ಸೂಚಿಸಿದರು.
ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿದ್ದರೂ ಸಹ, ಕೆಲವು ಪ್ರದೇಶಗಳಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳು ಹೆಚ್ಚು ಕಂಡುಬರುತ್ತಿವೆ. ಆದ್ದರಿಂದ ಕೋವಿಡ್ ನಿಯಂತ್ರಿಸಲು ಎಲ್ಲಾ ಹಂತದ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕಿದೆ ಎಂದು ಕೆ.ಜಿ.ಬೋಪಯ್ಯ ತಿಳಿಸಿದರು.
ಪೊಲೀಸರು ಜತರಗಿರಲಿ: ಕೋವಿಡ್ ನಿಯಂತ್ರಣ ಸಂಬಂಧಿಸಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಾರ್ಡ್ ಕಾರ್ಯಕರ್ತರು ಗ್ರಾಮ/ ವಾರ್ಡ್ಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಪೊಲೀಸರು ಜೊತೆಗಿರಬೇಕು ಎಂದು ಕೆ.ಜಿ.ಬೋಪಯ್ಯ ಸಲಹೆ ಮಾಡಿದರು.
ಖಾಸಗಿಯವರು ಕಾರಣ: ನಾಪೋಕ್ಲು ಭಾಗದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಲು ಖಾಸಗಿ ಕ್ಲಿನಿಕ್ ನಡೆಸುವವರು ಕೋವಿಡ್ ನಿಯಮಗಳನ್ನು ಪಾಲಿಸದಿರುವುದೇ ಕಾರಣ ಎಂದ ಅವರು, ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಉತ್ತಮವಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಮಾತನಾಡಿ ಆಧಾರ್ ಕಾರ್ಡ್ ಇಲ್ಲದವರಿಗೂ ಸಹ ಲಸಿಕೆ ನೀಡಬೇಕು ಎಂದು ಸಲಹೆ ಮಾಡಿದರು.
ಬ್ಯಾಡಗೊಟ್ಟ, ಗೌಡಳ್ಳಿ ಸೇರಿದಂತೆ ಜಿಲ್ಲೆಯ ಹಲವು ಕಡೆ ಬಿಎಸ್ಎನ್ಎಲ್ ನೆಟ್ವರ್ಕ್ ಇಲ್ಲದೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ಸರಿಪಡಿಸಬೇಕು. ಜಿಲ್ಲೆಯಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಬೇಕಿದೆ ಎಂದು ಅವರು ಸಲಹೆ ಮಾಡಿದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದೆ. ಆದರೂ ಎಚ್ಚರ ವಹಿಸುವುದು ಅಗತ್ಯ ಎಂದರು.
ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ, ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು, ಜಿ.ಪಂ.ಉಪ ಕಾರ್ಯದರ್ಶಿ ಲಕ್ಷ್ಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ತಹಶೀಲ್ದಾರರಾದ ಗೋವಿಂದರಾಜು, ಯೋಗಾನಂದ, ಮಹೇಶ್ ಮತ್ತಿತರರು ಕೋವಿಡ್ ನಿಯಂತ್ರಣ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.