ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಮಂಡ್ಯ :
ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ದೊಡ್ಡಮಟ್ಟದ ಕೂಗೆದ್ದಿರುವುದರಿಂದ ತೀವ್ರವಾಗಿ ಬೇಸತ್ತಿದ್ದು ಒಂದು ವಾರದೊಳಗೆ ಈ ಎಲ್ಲಾ ಗೊಂದಲಗಳಿಗೆ ಸರ್ಕಾರ ಅಂತಿಮ ತೆರೆ ಎಳೆಯದಿದ್ದರೆ ಜಿಲ್ಲಾದ್ಯಂತ ಗಣಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದು ಗಣಿ ಗುತ್ತಿಗೆದಾರರು, ಕ್ರಷರ್ ಮಾಲೀಕರು, ಬಿಲ್ಡರ್ ಅಸೋಸಿಯೇಷನ್ ಹಾಗೂ ಲಾರಿ ಮಾಲೀಕರ ಸಂಘದವರು ಎಚ್ಚರಿಕೆ ನೀಡಿದ್ದಾರೆ.
ನಗರದ ಸುಮ ರವಿ ಕಲ್ಯಾಣಮಂಟಪದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗಣಿ ಅಸೋಸಿಯೇಷನ್ ಕಾರ್ಯದರ್ಶಿ ನಟರಾಜ್ ಅವರು, ಕೆಆರ್ಎಸ್ಗೆ ಗಣಿಗಾರಿಕೆಯಿಂದ ಅಪಾಯವಿರುವ ಆತಂಕ ಕಳೆದೆರಡು ವರ್ಷಗಳಿಂದ ಎಲ್ಲರನ್ನೂ ಕಾಡುತ್ತಿದೆ. ಈ ಸಂಬಂಧ ತಜ್ಞರ ತಂಡದಿಂದ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಲಿ. ಗಣಿಗಾರಿಕೆಯಿಂದ ಕೆಆರ್ಎಸ್ ಅಣೆಕಟ್ಟೆಗೆ ಅಪಾಯವಿರುವುದು ಖಚಿತಪಟ್ಟರೆ ಆ ಕ್ಷಣದಿಂದಲೇ ಅಣೆಕಟ್ಟೆ ಸುತ್ತ ನಿಗದಿಪಡಿಸುವ ವ್ಯಾಪ್ತಿಯೊಳಗೆ ಗಣಿಗಾರಿಕೆ ಸ್ಥಗಿತಗೊಳಿಸುವುದಾಗಿ ಸ್ಪಷ್ಟಪಡಿಸಿದರು.
ಅಣೆಕಟ್ಟೆ ಒಡೆದು ಉದ್ಯಮ ನಡೆಸಬೇಕಿಲ್ಲ
ನಾವೂ ರೈತರ ಮಕ್ಕಳು. ಕೆಆರ್ಎಸ್ನ ಲಾನುಭವಿಗಳು. ಅಣೆಕಟ್ಟೆಯನ್ನು ಒಡೆದು ನಾವು ಉದ್ಯಮ ನಡೆಸಬೇಕಿಲ್ಲ. ಅಣೆಕಟ್ಟೆ ಸುರಕ್ಷತೆಗೆ ನಮ್ಮ ಮೊದಲ ಆದ್ಯತೆ. ಈಗಾಗಲೇ ಎರಡು ಬಾರಿ ಪ್ರಾಯೋಗಿಕ ಸ್ಪೋಟ ನಡೆಸಿ ಸರ್ಕಾರ ಸುಮ್ಮನಾಗಿದೆ. ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯದ ಬಗ್ಗೆ ಗೊಂದಲಗಳು, ಊಹಾಪೋಹಗಳೂ ಹೆಚ್ಚಿವೆ. ಇದಕ್ಕೆ ಪರಿಹಾರ ಸೂಚಿಸದೆ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದರಿಂದ ಗಣಿ ಗುತ್ತಿಗೆದಾರರು, ಕ್ರಷರ್ ಮಾಲೀಕರ ಉದ್ಯಮಕ್ಕೆ ತೀವ್ರ ತೊಂದರೆ ಉಂಟಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.