Tuesday, August 16, 2022

Latest Posts

ಮಹಿಳಾ ಮೋರ್ಚಾದಿಂದ ಮಂಗಳಮುಖಿಯರಿಗೆ ಬಾಗೀನ ಸಮರ್ಪಣೆ ಕಾರ್ಯಕ್ರಮ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸ ದಿಗಂತ ವರದಿ, ಚಿತ್ರದುರ್ಗ:

ಮನೆ ಇಲ್ಲದ ಮಂಗಳಮುಖಿಯರಿಗೆ ಸೂಕ್ತ ಜಾಗ ಗುರುತಿಸುವ ಮೂಲಕ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಬಿಜೆಪಿ ಜಿಲ್ಲಾ ಕಚೇರಿ ಬಳಿ ಗುರುವಾರ ಹಮ್ಮಿಕೊಂಡಿದ್ದ ಮಂಗಳಮುಖಿಯರಿಗೆ ಬಾಗೀನ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉದ್ಯೋಗ, ಮನೆ ಮತ್ತಿತರ ಸೌಲಭ್ಯಗಳು ಬೇಕಾಗಿರುವ ಮಂಗಳಮುಖಿಯರು ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿ. ಅದನ್ನು ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಗತ್ಯ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಇಂದಿನ ಸಮಾಜದಲ್ಲಿ ಮಂಗಳಮುಖಿಯರನ್ನು ಕೆಟ್ಟದಾಗಿ ನೋಡಲಾಗುತ್ತಿದೆ. ಆದರೆ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಮಾನವೀಯತೆ ಇದ್ದವರು ಮಾತ್ರ ಮಂಗಳಮುಖಿಯರನ್ನು ಒಳ್ಳೆಯ ದೃಷ್ಠಿಯಿಂದ ನೋಡುತ್ತಾರೆ. ಅವರ ಆಶೀರ್ವಾದ ಸಿಕ್ಕರೆ ಒಳ್ಳೆಯದಾಗುತ್ತದೆ ಎಂಬ ಭಾವನೆ ಇದೆ. ಕಾರಣಾಂತರಗಳಿಂದ ಅವರು ಮಂಗಳಮುಖಿಯರಾಗಿದ್ದಾರೆ. ಆದರೆ ಅದು ಶಾಪವಲ್ಲ. ಅವರಿಗೂ ಎಲ್ಲರಂತೆ ಬದುಕುವ ಹಕ್ಕಿದೆ ಎಂದು ಹೇಳಿದರು.
ಭಿಕ್ಷೆ ಬೇಡುವುದೇ ಮಂಗಳಮುಖಿಯರ ವೃತ್ತಿಯಲ್ಲ. ಅದೇ ಅಂತಿಮಲ್ಲ. ಅದನ್ನು ಬಿಡಬೇಕು. ಸ್ವಾವಲಂಬಿ ಜೀವನ ನಡೆಸಬೇಕು. ಈ ಹಿನ್ನೆಲೆಯಲ್ಲಿ ಎಲ್ಲ ಸಹಕಾರ ನೀಡಲಾಗುವುದು. ಅಗತ್ಯ ಇರುವವರಿಗೆ ಸೂಕ್ತ ತರಬೇತಿ ಕೊಡಿಸಲಾಗುವುದು. ಸ್ವಉದ್ಯೋಗ ಮಾಡಲು ಸಾಲ ಸೌಲಭ್ಯ, ನೀವು ಉತ್ಪಾದಿಸುವ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುವುದು. ಆ ಮೂಲಕ ಗೌರವಯುತ ಜೀವನ ನಡೆಸುವಂತಾಗಬೇಕು. ಈ ನಿಟ್ಟಿನಲ್ಲಿ ಮಂಗಳಮುಖಿಯರ ಮಾನಸಿಕ ಸ್ಥಿತಿ ಬದಲಾಗಬೇಕು ಎಂದರು.
ಹಿಂದೂ ಸಂಪ್ರದಾಯದ ಹಬ್ಬಗಳನ್ನು ಬಿಜೆಪಿ ಪಕ್ಷ ಧೈರ್ಯದಿಂದ ಮಾಡುತ್ತದೆ. ಅದರಂತೆ ಇಂದು ಮಂಗಳಮುಖಿಯರಿಗೆ ಬಾಗೀನ ಸಮರ್ಪಣೆ ಕಾರ್ಯ ನಡೆಸಲಾಗುತ್ತಿದೆ. ಬಹುತೇಕರು ಮಂಗಳಮುಖಿಯರನ್ನು ಕಡೆಗಣ್ಣಿನಿಂದ ನೋಡುತ್ತಾರೆ. ಆದರೆ ಇದು ಬದಲಾಗಬೇಕು. ಎಲ್ಲರ ಜೊತೆ, ಎಲ್ಲರಂತೆ ಮಂಗಳಮುಖಿಯರು ಬದುಕಲುವ ಅವಕಾಶ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ರಾಖಿ ಹಬ್ಬ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್ ಮಾತನಾಡಿ, ಗೌರಿ ಹಬ್ಬದ ಸಂದರ್ಭದಲ್ಲಿ ಹೆಣ್ಣುಮಕ್ಕಳಿಗೆ ಬಾಗೀನ ಕೊಡುವ ಸಂಪ್ರದಾಯ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಇಂದು ಮಂಗಳಮುಖಿಯರಿಗೆ ಬಾಗೀನ ನೀಡುತ್ತಿರುವುದು ವಿಶೇಷ ಕಾರ್ಯಕ್ರಮ. ಇವರು ಮುಖ್ಯವಾಹಿನಿಗೆ ಬರುವಂತಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಂಜಮ್ಮ ಜೋಗುತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಆ ಮೂಲಕ ಇಡೀ ಮಂಗಳಮುಖಿಯರ ಸಮುದಾಯವನ್ನು ಗೌರವಿಸಿದಂತಾಗಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗೌರಿ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸುವ ಉದ್ದೇಶದಿಂದ ಮಂಗಳಮುಖಿಯರಿಗೆ ಬಾಗೀನ ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಬಿಜೆಪಿ ಮಹಿಳಾ ಮೋರ್ಚಾ ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಗಳಮುಖಿ ವೀಣಾ ಮಾತನಾಡಿ, ಎಲ್ಲರೂ ನಮ್ಮನ್ನು ಕೀಳಾಗಿ ಕಾಣುತ್ತಾರೆ. ಆದರೆ ಬಿಜೆಪಿ ಮಹಿಳಾ ಮೋರ್ಚ ನಮಗೆ ಬಾಗೀನ ನೀಡಿ ಗೌರವಿಸುತ್ತಿರುವುದು ಸಂತಸ ತಂದಿದೆ. ನಾವು ಸ್ವಾಭಿಮಾನದಿಂದ ಬದುಕಬೇಕು. ಹಾಗಾಗಿ ನಮಗೆ ಅರ್ಹತೆಗೆ ತಕ್ಕಂತೆ ಕೆಲಸ ಕೊಡಿಸಿ. ಯಾರೂ ನಮಗೆ ಬಾಡಿಗೆ ಮನೆ ನೀಡುತ್ತಿಲ್ಲ. ಹಾಗಾಗಿ ವಸತಿ ಸೌಕರ್ಯ ಕಲ್ಪಿಸಿ ಎಂದು ಸಚಿವರಲ್ಲಿ ಮನವಿ ಮಾಡಿದರು.
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶೈಲಜಾರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಯಪಾಲ್, ಸುರೇಶ್ ಸಿದ್ದಾಪುರ ಮತ್ತಿತರರು ಹಾಜರಿದ್ದರು. ವೆಂಕಟೇಶ್ ಯಾದವ್ ಸ್ವಾಗತಿಸಿದರು. ಶ್ಯಾಮಲಾ ಶಿವಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss