Wednesday, August 10, 2022

Latest Posts

ಪ್ರಧಾನಿ ಮೋದಿ ಸಂಪುಟದಲ್ಲಿ ಮಹಿಳಾ ಶಕ್ತಿ: ಇಂದು ಪ್ರಮಾಣವಚನ ಸ್ವೀಕರಿಸಿದ ಏಳು ವಿದ್ಯಾವಂತ ಮಹಿಳೆಯರು!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇಂದು ಪ್ರಧಾನಿ ಮೋದಿಯವರು ಸಚಿವ ಸಂಪುಟ ಪುನಾರಚನೆ ಮಾಡಿದ್ದಾರೆ. ಹಲವು ಹೊಸಬರಿಗೆ ಕೇಂದ್ರದ ಮಂತ್ರಿಪಟ್ಟ ಒಲಿದಿದೆ. ಈ ಪೈಕಿ ಏಳು ಮಹಿಳಾ ಸಂಸದರು ಹೊಸದಾಗಿ ಮೋದಿ ಕ್ಯಾಬಿನೆಟ್​ ಸೇರಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಸದಾ ಒತ್ತು ನೀಡುವ ಪ್ರಧಾನಿ ಮೋದಿಯವರು ಕೇಂದ್ರದಲ್ಲಿ ಈಗಾಗಲೇ ಪ್ರಮುಖ ಖಾತೆಗಳನ್ನು ಮಹಿಳೆಯರಿಗೆ ನೀಡಿದ್ದಾರೆ. ಈ ಬಾರಿಯೂ ಏಳು ಮಹಿಳೆಯರು ಮೋದಿ ಕ್ಯಾಬಿನೆಟ್ ಸೇರಿದ್ದಾರೆ.
ಹೊಸದಾಗಿ ಪ್ರಧಾನಿ ಮೋದಿ ಸಂಪುಟ ಸೇರಿದ ಮಹಿಳಾ ಸಂಸದರು:
ಮೀನಾಕ್ಷಿ ಲೇಖಿ
ಮೀನಾಕ್ಷಿ ಲೇಖಿ ವೃತ್ತಿಯಲ್ಲಿ ವಕೀಲರಾಗಿದ್ದು, ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿಯೂ ಕೆಲಸ ಮಾಡಿದ್ದಾರೆ. ದೆಹಲಿ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಇವರೀಗ ಕೇಂದ್ರ ಮಂತ್ರಿ. ರಾಷ್ಟ್ರೀಯ ಮಹಿಳಾ ಆಯೋಗ ಸೇರಿ ಹಲವು ಸಂಘ-ಸಂಸ್ಥೆಗಳೊಟ್ಟಿಗೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ಅನುಪ್ರಿಯಾ ಸಿಂಗ್​ ಪಟೇಲ್​
ಉತ್ತರಪ್ರದೇಶದ ಬಿಜೆಪಿ ಮೈತ್ರಿ ಪಕ್ಷ ಅಪ್ನಾ ದಳದ ಸಂಸದೆ . 2019ರ ಲೋಕಸಭಾ ಚುನಾವಣೆಯಲ್ಲಿ ಮಿರ್ಜಾಪುರ್​ನಿಂದ ಗೆದ್ದಿದ್ದಾರೆ. ಇವರು ಅಪ್ನಾ ದಳದ ಅಧ್ಯಕ್ಷರಾಗಿದ್ದ ದಿವಂಗತ ಸೋನಿಲಾಲ್​ ಪಟೇಲ್​ರ ಪುತ್ರಿ. ಕೇವಲ 40ವರ್ಷದ ಅನುಪ್ರಿಯಾ ಸಿಂಗ್​ ದೆಹಲಿ ವಿಶ್ವವಿದ್ಯಾಲಯ ಮತ್ತು ಉತ್ತರಪ್ರದೇಶದ ಛತ್ರಪತಿ ಶಹುಜಿ ಮಹಾರಾಜ್​ ಯೂನಿವರ್ಸಿಟಿಯಲ್ಲಿ ಶಿಕ್ಷಣ ಪಡೆದಿದ್ದಾರೆ.
ಶೋಭಾ ಕರಂದ್ಲಾಜೆ
ಕರ್ನಾಟಕದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ. ಮಂಗಳೂರು ಯೂನಿವರ್ಸಿಟಿಯಲ್ಲಿ ಎಂಎಸ್​ಡಬ್ಲ್ಯೂ, ಮೈಸೂರು ಯೂನಿವರ್ಸಿಟಿಯಲ್ಲಿ ಸಮಾಜ ಶಾಸ್ತ್ರ ಮಾಡಿದ್ದಾರೆ. ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿದ್ದು, ಉನ್ನತ ಇಲಾಖೆಗಳನ್ನು ನಿಭಾಯಿಸಿದ ಅನುಭವಿ ರಾಜಕಾರಣಿ.
ದರ್ಶನಾ ವಿಕ್ರಮ್​ ಜರ್ದೋಷ್​
ಇವರು ಗುಜರಾತ್​​ನ ಸೂರತ್ ಲೋಕಸಭಾ ಕ್ಷೇತ್ರದ ಸಂಸದೆ. ಹಾಗೇ, ಹಣಕಾಸು ಸ್ಥಾಯಿಸಮಿತಿ ಸದಸ್ಯೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಮಾಲೋಚನಾ ಸಮಿತಿ ಸದಸ್ಯೆಯೂ ಹೌದು. ಬಿಜೆಪಿ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದವರು.
ಅನ್ನಪೂರ್ಣಾ ದೇವಿ
ಜಾರ್ಖಂಡ್​ನ ಕೊಡೆರ್ಮಾ ಲೋಕಸಭಾ ಕ್ಷೇತ್ರದ ಸಂಸದೆ ಅನ್ನಪೂರ್ಣಾ ದೇವಿಯವರು ಈ ಬಾರಿ ಪ್ರಧಾನಿ ಮೋದಿ ಸಂಪುಟ ಸೇರಿದ್ದಾರೆ. ಇವರು ಮಹಿಳಾ ಸಬಲೀಕರಣ ಸ್ಥಾಯಿ ಸಮಿತಿ ಸದಸ್ಯೆ ಮತ್ತು ವಿದ್ಯುತ್ ಸಚಿವಾಲಯ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಸಲಹಾ ಸಮಿತಿಯ ಸದಸ್ಯೆಯಾಗಿದ್ದರು. 1998ರಿಂದ 2000ರವರೆಗೆ ಬಿಹಾರ ವಿಧಾನಸಭೆಯ ಸದಸ್ಯೆಯಾಗಿದ್ದರು.
ಪ್ರತಿಮಾ ಭೌಮಿಕ್​
ಪೂರ್ವ ತ್ರಿಪುರಾ ಲೋಕಸಭಾ ಕ್ಷೇತ್ರದ ಸಂಸದೆ ಪ್ರತಿಮಾ ಭೌಮಿಕ್​ ಮೂಲತಃ ಕೃಷಿಕರು. ರಾಜಕೀಯಕ್ಕೆ ಬರುವುದಕ್ಕೂ ಮೊದಲು ಕೃಷಿ ಮಾಡುತ್ತಿದ್ದರು. ಸದ್ಯ ರೈಲ್ವೆ ಇಲಾಖೆ ಸಲಹಾ ಸಮಿತಿಯ ಸದಸ್ಯರಾಗಿದ್ದರು.
ಭಾರತಿ ಪ್ರವೀಣ್​ ಪವಾರ್​
ಭಾರತಿ ಪ್ರವೀಣ್​ ಪವಾರ್​ ಅವರು ಮಹಾರಾಷ್ಟ್ರದ ದಿಂಡೋರಿ ಲೋಕಸಭಾ ಕ್ಷೇತ್ರದ ಸಂಸದೆ. NDMVPS ವೈದ್ಯಕೀಯ ಕಾಲೇಜಿನಲ್ಲಿ ಸರ್ಜರಿಯಲ್ಲಿ ಎಂಬಿಬಿಎಸ್​ ಓದಿದ್ದಾರೆ. ಕೌಶಲಾಭಿವೃದ್ಧಿ ಮತ್ತು ಉದ್ಯಮ ಇಲಾಖೆ ಸಲಹಾ ಸಮಿತಿಯ ಸದಸ್ಯೆಯಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss