ಮಹಿಳೆಯರು ರಾಜಕೀಯವಾಗಿ ಸಬಲರಾಗಬೇಕು: ಎಂಎಲ್‍ಸಿ ಸುಜಾ ಕುಶಾಲಪ್ಪ

ಹೊಸದಿಗಂತ ವರದಿ,ಮಡಿಕೇರಿ:

ಮಹಿಳೆಯರು ಇಂದು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಸಾಧನೆ ಮಾಡುತ್ತಿದ್ದು, ರಾಜಕೀಯ ಕ್ಷೇತ್ರದಲ್ಲೂ ಸಬಲರಾಗಬೇಕೆಂದು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಕರೆ ನೀಡಿದ್ದಾರೆ.
ವೀರಾಜಪೇಟೆ ಕೊಡವ ಸಮಾಜದಲ್ಲಿ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದಿಂದ ನಡೆದ ಪುತ್ತರಿ ಊರೋರ್ಮೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ರಾಜಕೀಯಕ್ಕೆ ಮಹತ್ವ ಇದ್ದು, ಮಹಿಳೆಯರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಮಹಿಳೆಯರಿಗಾಗಿಯೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಅದನ್ನು ಸದುಪಯೋಗಪಡಿಸಿಕೊಂಡು ವ್ಯಾಪಾರೋದ್ಯಮದ ಮೂಲಕ ಸಮಾಜದ ಮುಖ್ಯ ವಾಹಿನಿ ಬರಬೇಕು ಮತ್ತು ಸ್ವಾವಲಂಬಿಯಾಗಿ ಬದುಕು ಸಾಗಿಸಬೇಕು ಎಂದರು.
ಕೊಡವ ಜನಾಂಗದ ಆಚಾರ, ವಿಚಾರ, ಪದ್ಧತಿ, ಪರಂಪರೆಯನ್ನು ಉಳಿಸಲು ಕೊಡವ ನ್ಯಾಷನಲ್ ಕೌನ್ಸಿಲ್, ಯುನೈಟೆಡ್ ಕೊಡವ ಆರ್ಗನೈಝೇಷನ್, ಫೇಡರೇಷನ್ ಆಫ್ ಕೊಡವ ಸಮಾಜ, ಕೊಡವ ಸಮಾಜಗಳು, ಕೊಡವ ಒಕ್ಕೂಟಗಳು, ಪೊಮ್ಮಕ್ಕಡ ಕೂಟಗಳು ನಡೆಸುತ್ತಿರುವ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಸುಜಾ ಕುಶಾಲಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರು ಸಿಸಿಬಿ ವೃತ್ತ ನಿರೀಕ್ಷಕ ಪಳೆಯಂಡ ಸಂತೋಷ್ ಮಾತನಾಡಿ, ಕೊಡವ ಜನಾಂಗದ ಬಗ್ಗೆ ಇಂದಿಗೂ ಸಂಶೋಧನೆಗಳು ನಡೆಯುತ್ತಿದೆ. ಕೊಡವರಿಗೆ ಇತರ ಜನಾಂಗದಂತೆ ಮಠ, ಮಾನ್ಯ ಧಾರ್ಮಿಕ ಕೇಂದ್ರಗಳಿಲ್ಲ, ಮಾರ್ಗದರ್ಶಕರಿಲ್ಲ. ಇಂಗ್ಲಿಷ್ ವ್ಯಾಮೋಹದಿಂದಾಗಿ ಕೊಡವ ಭಾಷೆ ಮೂಲೆ ಗುಂಪಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಆಚಾರ, ವಿಚಾರ, ಪದ್ಧತಿ, ಪರಂಪರೆಯನ್ನು ತುಲನೆ ಮಾಡಿದರೆ ಅವುಗಳಿಗೆ ವೈಜ್ಞಾನಿಕ ಹಿನ್ನೆಲೆ ಇದೆ. ಯಾವುದೇ ಸರಕಾರ ಬರಲಿ, ನಮ್ಮ ಜನಾಂಗಕ್ಕೆ ಮೀಸಲಾತಿ ದೊರೆತೆರೆ ಬೇಡ ಎಂದು ಹೇಳಬೇಡಿ. ನಮ್ಮ ಜನಸಂಖ್ಯೆ ಕಡಿಮೆ ಇರುವುದರಿಂದ ನಾವು ಸೂಕ್ಷ್ಮವಾಗಿ ಬೆಳೆಯುವಂತಹ ಪರಿಸ್ಥಿತಿ ಎದುರಾಗಿದೆ. ಕೊಡವ ಅಕಾಡೆಮಿ ಸೆಂಟರ್ ಪ್ರಾರಂಭ ಮಾಡಿದರೆ ಉತ್ತಮ. ನಮ್ಮ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕೊಡವ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡವ ಪೊಮ್ಮಕ್ಕಡ ಒಕ್ಕೂಟ ಪ್ರತಿ ತಿಂಗಳು ಉತ್ತಮ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದೆ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇದೆ ಅದನ್ನು ಹೊರತರಲು ಪೊಮ್ಮಕ್ಕಡ ಕೂಟ ಸಹಕಾರಿಯಾಗುತ್ತಿದೆ. ಪ್ರಕೃತಿ ವಿಕೋಪ, ಕೋವಿಡ್ ನಂತಹ ಕಷ್ಟ ಕಾಲದಲ್ಲಿ ಹಲವು ಕುಟುಂಬಗಳಿಗೆ ನೆರವು ನೀಡಿ ಮನೋಸ್ಥೈರ್ಯ ತುಂಬುವ ಕೆಲಸ ಮಾಡಲಾಗಿದೆ. ಪೊಮ್ಮಕ್ಕಡ ಒಕ್ಕೂಟ ಸಮಾಜಮುಖಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಪೊಮ್ಮಕ್ಕಳೇ ನಮ್ಮ ಆರ್ಥಿಕ ಶಕ್ತಿ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ವೃತ್ತ ನಿರೀಕ್ಷಕ ಪಳೆಯಂಡ ಸಂತೋಷ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮಂಡೇಪಂಡ ಪ್ರೀತ್ ಕುಶಾಲಪ್ಪ, ಪಳೆಯಂಡ ಪ್ರಿಯಾ ಸಂತೋಷ್, ಉಪಾಧ್ಯಕ್ಷೆ ಕುಪ್ಪಂಡ ಪುಷ್ಪಾ, ನಾಯಕಂಡ ಬೇಬಿ ಚಿಣ್ಣಪ್ಪ, ಕಾರ್ಯದರ್ಶಿ ಬಯವಂಡ ಇಂದಿರಾ, ಖಜಾಂಚಿ ತಾತಂಡ ಯಶು, ನೀಲಕ್ಕ ತಂಡದ ಅಧ್ಯಕ್ಷೆ ಚೋಕಂಡ ಈಶ್ವರಿ ಉಪಸ್ಥಿತರಿದ್ದರು. ನೀಲಕ್ಕೆ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!