Sunday, August 14, 2022

Latest Posts

ಕಂಬಳದಲ್ಲಿ ಹೊಸ ಭಾಷ್ಯ ಸೃಷ್ಟಿ: ಕಮಾಲ್ ಮಾಡಲು ಕುವರಿಯರಿಗೂ ಅವಕಾಶ!

ಹೊಸದಿಗಂತ ವರದಿ, ಉಡುಪಿ:

ಮಹಿಳೆಯರಿಗೆ ಕಂಬಳ ನಿಷಿದ್ಧ, ಅವರು ಕಂಬಳ ಗದ್ದೆಗೆ ಕಾಲಿಡಬಾರದು ಎಂಬ ಅಲಿಖಿತ ಮಾತಿನ ನಡುವೆಯೇ ಕಂಬಳ ಕಳದಲ್ಲಿ ಕುವರಿಯರೂ ಕಮಾಲ್ ಮಾಡುವ ಕಾಲ ದೂರವಿಲ್ಲ. ಕಾರ್ಕಳ ಮಿಯಾರಿನ ಕಂಬಳ ಅಕಾಡೆಮಿ ಈ ಕುರಿತು ಚಿಂತನೆ ನಡೆಸುತ್ತಿದೆ.

ಈಚೆಗೆ ಕರಾವಳಿಯಲ್ಲಿ ನಡೆದ 2-3 ಕಂಬಳಗಳಲ್ಲಿ ಬೈಂದೂರು, ಕಾಸರಗೋಡು, ಮಂಗಳೂರು ಪಡು ಬೊಂಡಂತಿಲ ಮೊದಲಾದೆಡೆಯ ಹೆಣ್ಣುಮಕ್ಕಳು ಮನೆಯವರೊಂದಿಗೆ ಕೋಣಗಳ ಆರೈಕೆ, ಕಂಬಳದತ್ತ ತಮ್ಮ ಆಸಕ್ತಿ ತೋರಿದ್ದಾರೆ.

ಹಳೆ ತಲೆಮಾರಿನ ಹೆಚ್ಚಿನ ಮಹಿಳೆಯರು ಕಂಬಳವನ್ನೇ ನೋಡಿರದಿದ್ದರೂ ಕಳೆದ ಒಂದೆರಡು ದಶಕಗಳಲ್ಲಿ ಕಂಬಳದ ಕೋಣಗಳಿಗೆ ಮಹಿಳಾ ಮಾಲೀಕರಿದ್ದಾರೆ. ಅಷ್ಟೆ ಅಲ್ಲ, ಕಂಬಳಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಪೆವಿಲಿಯನ್‌ಗಳನ್ನೂ ಕಟ್ಟಲಾಗಿದೆ. ಈಗ ಕಂಬಳ ಓಟಕ್ಕೂ ಹೆಣ್ಣುಮಕ್ಕಳು ಆಸಕ್ತಿ ತೋರಿಸುತ್ತಿರುವುದರಿಂದ ಪುರುಷ ಪ್ರಧಾನವಾಗಿರುವ
ಕಂಬಳದಲ್ಲಿ ಹೊಸ ಭಾಷ್ಯ ಸೃಷ್ಟಿಯಾಗಲಿದೆ!

ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ತರಬೇತಿ: ಮಹಿಳೆಯರಿಗೆ ಕಂಬಳದಲ್ಲಿ ಅವಕಾಶ ನೀಡುವುದು ಸುಲಭದ ಮಾತಲ್ಲ, ಇದು ಬಹಳ ಸೂಕ್ಷ್ಮ ವಿಚಾರ. ಕೆಲವರು ಸಂಸ್ಕೃತಿಯ ಹೆಸರಿನಲ್ಲಿ ಅದನ್ನು ವಿರೋಧಿಸುವ ಸಾಧ್ಯತೆಗಳಿರುತ್ತವೆ. ಕಂಬಳದಲ್ಲಿ ಭಾಗವಹಿಸುವ ಮಹಿಳೆಯರಿಗೆ ಡ್ರೆಸ್ ಕೋಡ್ ಮಾಡಬೇಕು. ಅಲ್ಲದೇ ನಕಾರಾತ್ಮಕವಾಗಿ ಯೋಚಿಸುವವರು, ಮಾತಾಡುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಇದ್ಯಾವುದನ್ನೂ ಲೆಕ್ಕಿಸದೇ ಕಂಬಳ ಅಕಾಡೆಮಿ ಮುಂದಿನ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಹೆಣ್ಣುಮಕ್ಕಳಿಗೆ ತರಬೇತಿ ನೀಡುವುದಕ್ಕೆ ಸಿದ್ಧತೆ ನಡೆಸುತ್ತಿದೆ.

ಹೆಣ್ಣುಮಕ್ಕಳಿಗೆ ಕಂಬಳ ತರಬೇತಿಯ ಕುರಿತು ಕಂಬಳ ತಜ್ಞ, ಅಕಾಡೆಮಿಯ ಸಂಚಾಲಕ ಹಾಗೂ ದ.ಕ. ಕಂಬಳ ಸಮಿತಿಯ ಸ್ಥಾಪಕ ಕಾರ್ಯದರ್ಶಿ ಗುಣಪಾಲ ಕಡಂಬ ಮಾತನಾಡಿದ್ದಾರೆ. ಈಗಾಗಲೇ ಮೂರ್ನಾಲ್ಕು ಮಂದಿ ಹೆಣ್ಣುಮಕ್ಕಳು ಕುಟುಂಬದ ಬೆಂಬಲದೊಂದಿಗೆ ಕಂಬಳ ತರಬೇತಿಗೆ ಮುಂದೆ ಬಂದಿದ್ದಾರೆ. ಮಹಿಳೆಯರಿಗೆ ಆರಂಭದಲ್ಲಿ ವೀಕ್ಷಕ ವಿವರಣೆ, ಕಂಬಳ ಓಟ ಆರಂಭ ಬಿಂದುವಿನಲ್ಲಿ ಧ್ವಜ ಧಾರಕರು ಮತ್ತು ಜಾಕಿಗಳಾಗಿ ತರಬೇತಿ ನೀಡುವ ಚಿಂತನೆ ಇದೆ. ನಂತರ ಕಂಬಳ ಕೋಣ ಓಡಿಸುವ ತರಬೇತಿಯೂ ನೀಡಲಾಗುತ್ತದೆ ಎಂದಿದ್ದಾರೆ.

ಆಸಕ್ತಿಯ ಜೊತೆಗೆ ಸಮಯವೂ ಬೇಕು: ಕಂಬಳದ ಕುರಿತು ಈಗ ಯುವತಿಯರು, ಮಹಿಳೆಯರಲ್ಲಿಯೂ ಆಸಕ್ತಿ ಮೂಡುತ್ತಿದೆ. ಆದರೆ ಇದಕ್ಕೆ ಸಮಯಬೇಕು. ನಾವು ಒಂದೇ ಸಲ ಅವರನ್ನು ಅಗ್ರಣಿ ಓಟಗಾರ್ತಿಯನ್ನಾಗಿಸಲು ಸಾಧ್ಯವಿಲ್ಲ, ಆದರೆ ಭಾಗವಹಿಸುವುದಕ್ಕೆ ಅವಕಾಶ ಕೊಡಲೇಬೇಕು. ಈ ಬಾರಿ ಒಂದು ಕಂಬಳದಲ್ಲಿ ಗರಿಷ್ಠ ಎಂದರೆ 207 ಜೊತೆ ಕೋಣಗಳು ಭಾಗವಹಿಸಿವೆ. ಅದರಲ್ಲಿ ಕಂಬಳ ಕೋಣ ಯಜಮಾನರ 7-10 ಮನೆಯವರೇ ಮುಂದೆ ಬಂದರೆ ನಮಗೆ ತರಬೇತಿ ನೀಡುವುದು ತುಂಬ ಸುಲಭವಾಗುತ್ತದೆ. ಇದರಿಂದ ಈ ಯೋಚನೆಗೆ ಉತ್ತಮ ಆರಂಭ ನೀಡಲು ಸಾಧ್ಯವಿದೆ. ಆದ್ದರಿಂದ ಈ ಬಗ್ಗೆ ಗಂಭೀರ ಚಿಂತನೆ ಮಾಡುತ್ತೇವೆ. ಅಕಾಡೆಮಿಯ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಕಡಂಬ ಹೇಳಿದ್ದಾರೆ.

ಹಿಂದೆ ಅಕಾಡೆಮಿ ಆರಂಭಿಸಿದಾಗಲೂ ಹಲವರು ಟೀಕೆ ಮಾಡಿದ್ದರು. ಈಗ ಎಲ್ಲರೂ ಇದನ್ನು ಪ್ರಶಂಸಿಸುತ್ತಿದ್ದಾರೆ. ಅಕಾಡೆಮಿಯಲ್ಲಿ ತರಬೇತಿ ಪಡೆದವರು ಕಂಬಳದಲ್ಲಿ ಓಡಿ ದಾಖಲೆ ಮಾಡುವ ಜೊತೆಗೆ, ಅವರ ಜೀವನಕ್ಕೊಂದು ದಾರಿಯೂ ಆಗಿದೆ. ಇದೀಗ ಇನ್ನೊಬ್ಬರ ಮನೆಯ ಹೆಣ್ಣುಮಕ್ಕಳನ್ನು ಕಂಬಳಕ್ಕೆ ಬಳಸಿಕೊಳ್ಳುವಾಗ ಸಾಕಷ್ಟು ಮುನ್ನೆಚ್ಚರಿಕೆ ಬೇಕಾಗುತ್ತದೆ. ಇದೆಲ್ಲ ವ್ಯವಸ್ಥೆ ಮಾಡಿದ ನಂತರ ತರಬೇತಿ ನೀಡಲಾಗುತ್ತದೆ. ತರಬೇತಿಗಾಗಿ ಬರುವ ಎಲ್ಲರನ್ನು ಆಯ್ಕೆ ಮಾಡಲಾಗುವುದಿಲ್ಲ, ಆಯ್ಕೆ ಪ್ರಕ್ರಿಯೆಗೆ ಒಳಗಾಗಬೇಕು. ದೈಹಿಕ ಕ್ಷಮತೆಯ ಬಗ್ಗೆ ವೈದ್ಯಕೀಯ ತಪಾಸಣೆ, ರಾಷ್ಟ್ರೀಯ ತರಬೇತುದಾರಿಂದ ಅರ್ಹತಾ ಪರೀಕ್ಷೆಯ ನಂತರ ಅರ್ಹರಿಗೆ ತರಬೇತಿ ನೀಡುತ್ತೇವೆ ಎನ್ನುತ್ತಾರೆ ಗುಣಪಾಲ ಕಡಂಬ.

ಚಲನಚಿತ್ರದ ಹಿನ್ನೆಲೆಯಿಂದ ಮುನ್ನೆಲೆಗೆ: ಚಲನಚಿತ್ರ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಕಂಬಳದ ಕುರಿತು ಚಲನಚಿತ್ರ ನಿರ್ಮಾಣಕ್ಕೆ ಮುಂದೆ ಬಂದಿದ್ದಾರೆ. ಅವರು ಕಂಬಳ ಸಂಪೂರ್ಣವಾಗಿ ಪುರುಷ ಪ್ರಧಾನವಾಗಿದೆ. ಇದರಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯವೇ ಇಲ್ಲ. ಜಾಗತಿಕ ಮಟ್ಟದಲ್ಲಿ ಇದಕ್ಕೆ ಹಿನ್ನಡೆಯಾಗುತ್ತದೆ. ಈಗ ಎಲ್ಲದರಲ್ಲೂ ಮಹಿಳೆಯರಿದ್ದಾಗ, ಕಂಬಳದಲ್ಲಿ ಯಾಕೆ ಇಲ್ಲ ಎಂಬ ಪ್ರಶ್ನೆ ಮಾಡಿದರು. ಇದರಿಂದ ಕಂಬಳಕ್ಕೆ ಮಹಿಳೆಯರಿಗೆ ತರಬೇತಿ ನೀಡುವ ಆಶಯಕ್ಕೆ ಪುಷ್ಠಿ ಸಿಕ್ಕಿದೆ. ಮಹಿಳೆಯರಿಗೆ ಹಂತಹಂತವಾಗಿ ತರಬೇತು ಮಾಡುತ್ತೇವೆ.
– ಗುಣಪಾಲ ಕಡಂಬ, ಮಿಯಾರು ಕಂಬಳ ಅಕಾಡೆಮಿ ಸಂಚಾಲಕರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss