ವುಮೆನ್ಸ್‌ ಪ್ರೀಮಿಯರ್‌ ಲೀಗ್‌: ಶಫಾಲಿ , ಲ್ಯಾನಿಂಗ್‌ ಅಬ್ಬರದ ಬ್ಯಾಟಿಂಗ್, ಬೆಂಗಳೂರಿಗೆ ಕಠಿಣ ಗುರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ವುಮೆನ್ಸ್‌ ಪ್ರೀಮಿಯರ್‌ ಲೀಗ್‌ನಲ್ಲಿ ಶಫಾಲಿ ವರ್ಮಾ(84) ಹಾಗೂ ನಾಯಕಿ ಮೆಗ್‌ ಲ್ಯಾನಿಂಗ್‌(72) ಸಿಡಿಲಬ್ಬರದ ಅರ್ಧಶತಕ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಕೇವಲ 2 ವಿಕೆಟ್ ಕಳೆದುಕೊಂಡು 223 ರನ್ ಬಾರಿಸಿದ್ದು, ಬೆಂಗಳೂರು ತಂಡಕ್ಕೆ ಕಠಿಣ ಗುರಿ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ನಾಯಕಿ ಮೆಗ್‌ ಲ್ಯಾನಿಂಗ್ ಹಾಗೂ ಶಫಾಲಿ ವರ್ಮಾ ವಿಸ್ಪೋಟಕ ಆರಂಭ ಒದಗಿಸಿಕೊಟ್ಟರು.

ಪವರ್‌ ಪ್ಲೇನ ಮೊದಲ 6 ಓವರ್‌ನಲ್ಲಿ ಈ ಜೋಡಿ 57 ರನ್‌ಗಳ ಜತೆಯಾಟವಾಡಿತು. 10 ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 105 ರನ್‌ ಕಲೆಹಾಕಿತು.

ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ ಹಾಗೂ ನಾಯಕಿ ಮೆಗ್‌ ಲ್ಯಾನಿಂಗ್ ಬೌಂಡರಿ ಬಾರಿಸುವ ಮೂಲಕ ಆರ್‌ಸಿಬಿ ಬೌಲರ್‌ಗಳು ಕಂಗಾಲಾಗುವಂತೆ ಮಾಡಿದರು.

43 ಎಸೆತಗಳಲ್ಲಿ 14 ಬೌಂಡರಿ ಸಹಿತ 72 ರನ್ ಗಳಿಸಿ ಮುನ್ನುಗ್ಗುತ್ತಿದ್ದ ಮೆಗ್ ಲ್ಯಾನಿಂಗ್‌ ಅವರನ್ನು ಕ್ಲೀನ್ ಬೌಲ್ಡ್‌ ಮಾಡುವಲ್ಲಿ ಹೀಥರ್ ನೈಟ್ ಯಶಸ್ವಿಯಾದರು. ಇದರ ಬೆನ್ನಲ್ಲೇ ಶಫಾಲಿ ವರ್ಮಾ ಕೂಡಾ ಅದೇ ಓವರ್‌ನಲ್ಲಿ ವಿಕೆಟ್‌ ಕೀಪರ್ ರಿಚಾ ಘೋಷ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಶಫಾಲಿ 45 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 84 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು.

163 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಾಗ ಕ್ರೀಸ್‌ಗಿಳದಿ ಮಾರಿಜಾನ್ ಕಾಪ್‌ ಹಾಗೂ ಜೆಮಿಮಾ ರೋಡ್ರಿಗ್ಸ್‌ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾಯಿತು. ಜೆಮಿಮಾ 15 ಎಸೆತಗಳಲ್ಲಿ 3 ಬೌಂಡರಿ ಸಹಿತ ಅಜೇಯ 22 ರನ್ ಬಾರಿಸಿದರೆ, ಮಾರಿಜಾನ್ ಕಾಪ್‌ ಕೇವಲ 16 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 39 ರನ್ ಚಚ್ಚಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!