Wednesday, June 29, 2022

Latest Posts

34 ಮಂದಿ ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ವರ್ಕ್ ಫ್ರಂ ಹೋಮ್

ಹೊಸದಿಗಂತ ವರದಿ,ಮಂಗಳೂರು:

ಕೊರೋನಾ ಎರಡನೆಯ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಇಲಾಖೆ ದಿಟ್ಟ ಕ್ರಮಗಳನ್ನು ಕೈಗೊಂಡಿದೆ. ಕೊರೋನಾ ವಾರಿಯರ್‍ಸ್‌ಗಳಾಗಿ ಕೆಲಸ ಮಾಡುವ ಆರಕ್ಷಕರು ಕಳೆದ ಬಾರಿ ಕೊರೋನಾದಿಂದಾಗಿ ಸಾಕಷ್ಟು ಸಮಸ್ಯೆ ಎದುರಿಸಿದ್ದರು. ೩೩೦ಕ್ಕೂ ಅಧಿಕ ಮಂದಿಯನ್ನು ಕೊರೋನಾ ಭಾದಿಸಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಪೊಲೀಸ್ ಇಲಾಖೆ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು, ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ವರ್ಕ್ ಫ್ರಂ ಹೋಂ ಗೆ ಅವಕಾಶ ಕಲ್ಪಿಸಿದೆ.
ಯಾರ್‍ಯಾರಿಗೆ ಅವಕಾಶ?
ಬಾಣಂತಿಯರು, ಗರ್ಬಿಣಿಯರು, ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿರುವ ಮಹಿಳಾ ಸಿಬ್ಬಂದಿಗಳಿಗೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವರ್ಕ್ ಫ್ರಂ ಹೋಂ ಗೆ ಅವಕಾಶ ಕಲ್ಪಿಸಲಾಗಿದೆ. ವಿವಿಧ ಠಾಣೆಗಳಲ್ಲಿರುವ ಒಟ್ಟು 34 ಮಹಿಳಾ ಸಿಬ್ಬಂದಿಗಳಿಗೆ ಮನೆಯಲ್ಲಿಯೇ ಕೆಲಸ ನಿರ್ವಹಿಸುವ ಅವಕಾಶ ಸಿಕ್ಕಿದೆ. ಗರ್ಬಿಣಿಯರು, ಬಾಣಂತಿಯರು, ಪುಟ್ಟ ಮಕ್ಕಳಿರುವ ಮಹಿಳಾ ಸಿಬ್ಬಂದಿಗಳು ವರ್ಕ್ ಫ್ರಂ ಹೋಂಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರ ಆರೋಗ್ಯದ ಹಿತದೃಷ್ಟಿಯಿಂದ ಮನೆಯಿಂದಲೇ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಫೈಲ್ ಅಪ್‌ಡೇಟ್, ದಾಖಲೆ ಪರಿಶೀಲನೆ ಸೇರಿದಂತೆ ಇತರೆ ಅಗತ್ಯ ಕಾರ್ಯಗಳನ್ನು ಸಿಬ್ಬಂದಿಗಳು ಮನೆಯಿಂದಲೇ ನಿರ್ವಹಿಸಲಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಕಮಿಷನರೇಟ್ ವ್ಯಾಪ್ತಿಯಲ್ಲಿ 2 ಸಾವಿರದಷ್ಟು ಪೊಲೀಸ್ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಬಾರಿ 30ಕ್ಕೂ ಅಧಿಕ ಮಂದಿಗೆ ಕೊರೋನಾ ಪಾಸಿಟಿವ್ ಕಂಡುಬಂದಿತ್ತು. ಇದರಿಂದ ವಿವಿಧ ಠಾಣೆಗಳಲ್ಲಿ ಸಿಬ್ಬಂದಿಗಳ ಕೊರತೆ ಎದುರಾಗಿತ್ತು. ಆದ್ದರಿಂದ ಈ ಬಾರಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಿರಿಯ ಪೊಲೀಸ್ ಸಿಬ್ಬಂದಿಗಳು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡುವಂತೆ ಸೂಚಿಸಲಾಗಿದೆ ಎಂದವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss